ಬಂಟ್ವಾಳ: ಮಸೀದಿಯ ವಠಾರದಲ್ಲಿ ಚೂರಿ ಹಿಡಿದು ನಿಂತಿದ್ದ ಅಪರಿಚಿತ ವ್ಯಕ್ತಿ!!ಧರ್ಮಗುರುಗಳ ಹತ್ಯೆ ನಡೆಸಲು ಸಂಚು ರೂಪಿಸಿರುವ ಅನುಮಾನ !!?

ಬಂಟ್ವಾಳ: ಮಧ್ಯರಾತ್ರಿ ಹರಿತವಾದ ಚೂರಿ ಹಿಡಿದು ಅಕ್ರಮವಾಗಿ ಮಸೀದಿ ಪ್ರವೇಶಿಸಲು ಮುಂದಾದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಗ್ಗೆ ಘಟನೆಯು ತಾಲೂಕಿನ ಬಿ. ಮೂಡ ಗ್ರಾಮದ ಮುಹಿಯುದ್ದೀನ್ ಕೇಂದ್ರ ಜುಮ್ಮಾ ಮಸೀದಿ ವಠಾರದಲ್ಲಿ ನಡೆದಿದೆ. ಪೊಲೀಸರ ವಶದಲ್ಲಿರುವ ಆರೋಪಿಯನ್ನು ಬಾಬು ಪೂಜಾರಿ(60) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಫೆ.01 ರ ರಾತ್ರಿ ಹೊತ್ತಲ್ಲಿ ಮಸೀದಿ ವಠಾರಕ್ಕೆ ದ್ವಿಚಕ್ರ ವಾಹನವೊಂದರಲ್ಲಿ ಬಾಬು ಪೂಜಾರಿ ಬಂದಿದ್ದು, ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಕಂಡ ಅಲ್ಲಿನ ಪೇಂಟಿಂಗ್ ಕೆಲಸಗಾರರು ಪ್ರಶ್ನಿಸಿದ್ದಾರೆ. ಈ ವೇಳೆ ನಾನು ಮಡಿಕೇರಿ ಮೂಲದವನಾಗಿದ್ದು, ನಮ್ಮ ಮಸೀದಿಗೆ ಪ್ರಾರ್ಥನೆಗೆ ಧರ್ಮಗುರುಗಳ ಅಗತ್ಯವಿದೆ ಎಂದು ತಿಳಿಸಿದ್ದಾನೆ.

ಇದರಿಂದ ಅನುಮಾನಗೊಂಡ ಅಲ್ಲಿನ ಸ್ಥಳೀಯರು ಆತನ ಸ್ಕೂಟಿಯನ್ನು ಪರಿಶೀಲಿಸಿದಾಗ ಹರಿತವಾದ ಚೂರಿ ಪತ್ತೆಯಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆರೋಪಿಯು ಮಸೀದಿಯ ಧರ್ಮ ಗುರುಗಳ ಹತ್ಯೆ ನಡೆಸಲು ಹೊಂಚು ಹಾಕಿ ಬಂದಿದ್ದಾನೆ ಎಂದು ಸ್ಥಳೀಯರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.

ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಆರೋಪಿ ಹಾಗೂ ಆತನ ವಾಹನ ಸಹಿತ ಚೂರಿಯನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.ಸದ್ಯ ಅಬ್ದುಲ್ ಸಲಾಂ ಎಂಬವರು ನೀಡಿದ ದೂರಿನ ಆಧಾರದಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.