ಸಾವಿನ ಹೊಸ್ತಿಲಿನಲ್ಲಿದ್ದ ಪತ್ನಿಯನ್ನು ತನ್ನ ಎಂಬಿಬಿಎಸ್ ಪದವಿ ಅಡವಿಟ್ಟು ಉಳಿಸಿಕೊಂಡ ಪತಿ !! | ವೈದ್ಯನ ಕರುಣಾಜನಕ ಕಥೆ ಹೀಗಿದೆ ನೋಡಿ

ಎರಡು ವರ್ಷಗಳ ಹಿಂದೆ ಭೂಮಿಗೆ ಕಾಲಿಟ್ಟ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿ, ಅದೆಷ್ಟೋ ಜನರ ಬದುಕನ್ನು ಅಲ್ಲೋಲ ಕಲ್ಲೋಲವಾಗಿಸಿದೆ. ಬರಸಿಡಿಲಿನಂತೆ ಅಪ್ಪಳಿಸಿದ ಈ ಮಹಾಮಾರಿಯ ಹೊಡೆತಕ್ಕೆ ಸಿಲುಕಿದವರ ಬದುಕನ್ನು ಉಳಿಸುವ ನಿಟ್ಟಿನಲ್ಲಿ ವೈದ್ಯರು ಹಗಲಿರುಳು ಶ್ರಮಿಸಿದರೆ, ಇದೇ ಕೊರೋನಾ ಸಂಕಷ್ಟಕ್ಕೆ ಸಿಲುಕಿದ ರಾಜಸ್ಥಾನ ಮೂಲದ ವೈದ್ಯರೊಬ್ಬರ ಬದುಕು ಇದೀಗ ಬೀದಿಗೆ ಬಿದ್ದಿದೆ.

ರಾಜಸ್ಥಾನದ ಪಾಲಿ ಜಿಲ್ಲೆಯ ಖೇರ್ವಾ ಗ್ರಾಮದಲ್ಲಿ ವಾಸವಾಗಿರುವ 32 ವರ್ಷದ ಡಾ. ಸುರೇಶ್‌ ಚೌಧರಿ, ಪತ್ನಿ ಹಾಗೂ 5 ವರ್ಷದ ಮಗನೊಂದಿಗೆ ಸುಖ ಸಂಸಾರ ನಡೆಸುತ್ತಿದ್ದರು. ಆದರೆ ಕಳೆದ ವರ್ಷ ಅಪ್ಪಳಿಸಿದ ಕೊರೊನಾ ಎರಡನೇ ಅಲೆ ವೈದ್ಯ ಸುರೇಶ್‌ ಅವರ ಬದುಕಿನ ಸಂತಸವನ್ನೇ ಕಸಿದುಕೊಂಡಿದೆ. ಕೊರೋನಾ ಎರಡನೇ ಅಲೆಯ ಹೊಡೆತ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸುರೇಶ್‌ ಅವರ ಪತ್ನಿ ಅನಿತಾ ಅನಾರೋಗ್ಯಕ್ಕೆ ತುತ್ತಾದರು. ಇದಾದ ಕೆಲವೇ ದಿನಗಳಲ್ಲಿ ಆಕೆಗೆ ಕೋವಿಡ್ ಸೋಂಕು ದೃಢಪಟ್ಟ ಪರಿಣಾಮ, ಅನಿತಾರ ಆರೋಗ್ಯ ಮತ್ತಷ್ಟು ಹದಗೆಟ್ಟಿತು.

ಇದರಿಂದ ವಿಚಲಿತರಾದ ಡಾ. ಸುರೇಶ್‌, ಪತ್ನಿ ಅನಿತಾರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಹಾಸಿಗೆ ಸಿಗಲಿಲ್ಲ. ಹೀಗಾಗಿ ಸುರೇಶ್‌ ಅವರು ಅನಿತಾ ಅವರನ್ನು ಜೋಧ್‌ಪುರ್‌ನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸುವ ನಿರ್ಧಾರ ಮಾಡಿದರು. ಈ ಸಂದರ್ಭದಲ್ಲಿ ಸುರೇಶ್‌ ತಮ್ಮ ಜೀವನದ ಅತ್ಯಂತ ಕಠಿಣ ಸಮಯವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ತಾನೇ ವೈದ್ಯ ವೃತ್ತಿಯಲ್ಲಿದ್ದರು ತನ್ನ ಪತ್ನಿಗೆ ಆಸ್ಪತ್ರೆಯಲ್ಲಿ ಬೆಡ್‌ ಕೊಡಿಸಲಾಗದೆ ಡಾ. ಸುರೇಶ್‌ ಅವರು ಸಾಕಷ್ಟು ಪರದಾಡಿದರು. ಈ ನಡುವೆ ಕಳೆದ ವರ್ಷ ಮೇ 30ರಂದು ಸುರೇಶ್‌ ಅವರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಪತ್ನಿ ಅನಿತಾ ಅವರ ಸ್ಥಿತಿ ಇನ್ನಷ್ಟು ಚಿಂತಾಜನಕವಾಯಿತು.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅನಿತಾ ಅವರ ಶ್ವಾಸಕೋಶಗಳು ಶೇ.95ರಷ್ಟು ಹಾನಿಯಾದ ಪರಿಣಾಮ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾಯಿತು. ಈ ಸಂದರ್ಭದಲ್ಲಿ ಅನಿತಾ ಅವರ ಆರೋಗ್ಯ ಸ್ಥಿತಿ ಗಮನಿಸಿದ ವೈದ್ಯರು, ಆಕೆ ಉಳಿಯುವ ಸಾಧ್ಯತೆ ಕಡಿಮೆ ಎಂದು ಕೈಬಿಟ್ಟರು. ಆದರೆ ಪತಿ ಡಾ. ಸುರೇಶ್‌ ಮಾತ್ರ ಪತ್ನಿ ಅನಿತಾ ಅವರ ಕೈಬಿಡಲಿಲ್ಲ. ಏನೇ ಪರಿಸ್ಥಿತಿ ಬಂದರು ಪತ್ನಿಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದ ಸುರೇಶ್‌, ಬಳಿಕ ಆಕೆಯನ್ನು ಜೂ.1ರಂದು ಅಹಮ್ಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ಈ ನಡುವೆ ಕೊರೋನಾ ಸೋಂಕು ಅನಿತಾ ಅವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಿತ್ತು. ಆಕೆಯ ದೇಹದ ತೂಕ 50 ರಿಂದ 30 ಕೆಜಿಗೆ ಇಳಿದರೆ, ಆಕೆಯ ಶ್ವಾಸಕೋಶ ಮತ್ತು ಹೃದಯ ಇನ್ನಷ್ಟು ಹಾಳಾಗಿದ್ದರಿಂದ ಇಸಿಎಂಒ ಯಂತ್ರದ ಮೂಲಕ ಹೃದಯ ಮತ್ತು ಶ್ವಾಸಕೋಶವನ್ನು ಸರಿಪಡಿಸಲಾಯಿತು. ಇಸಿಎಂಒ ಎಂಬುದು ಹೃದಯ ಮತ್ತು ಶ್ವಾಸಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಜೀವ ಉಳಿಸಲು ಬಳಸುವ ಯಂತ್ರವಾಗಿದ್ದು, ಇದು ಅತ್ಯಂತ ದುಬಾರಿ ವಿಧಾನವಾಗಿದೆ.

ಈ ಆಪರೇಷನ್‌ಗೆ ಪ್ರತಿನಿತ್ಯ 1 ಲಕ್ಷ ರೂ. ವೆಚ್ಚವಾಗುವುದರಿಂದ ಡಾ. ಸುರೇಶ್‌ ಅವರ ಸಾಲದ ಹೊರೆಯೂ ಹೆಚ್ಚುತ್ತಾ ಹೋಯಿತು. ತಮ್ಮ ಬಳಿಯಿದ್ದ 10 ಲಕ್ಷ ರೂ. ಉಳಿತಾಯದ ಹಣವನ್ನು ಸಹ ಪತ್ನಿಯ ಚಿಕಿತ್ಸೆಗಾಗಿ ಖರ್ಚು ಮಾಡಿದರು, ಆದರೆ ಪತ್ನಿಯ ಆರೋಗ್ಯದಲ್ಲಿ ಯಾವ ಚೇತರಿಕೆ ಕಾಣಿಸಲಿಲ್ಲ.

ಇನ್ನು ಕೂಡ ಚಿಕಿತ್ಸೆ ಮುಂದುವರಿಸಲು ನಿರ್ಧರಿಸಿದ ಡಾ. ಸುರೇಶ್‌, ಇದಕ್ಕಾಗಿ ಸಾಕಷ್ಟು ಹಣದ ಅವಶ್ಯಕತೆ ಇರುವುದನ್ನು ಅರಿತು ಸುರೇಶ್ ಏನು ಮಾಡಿದರು ಗೊತ್ತೆ?? ತಮ್ಮ ಎಂಬಿಬಿಎಸ್ ಪದವಿಯನ್ನೇ ಗಿರವಿ ಇಟ್ಟರು. ಅದರಿಂದ 70 ಲಕ್ಷ ರೂ. ಹಣ ಪಡೆದರು. ಜೊತೆಗೆ ತಮ್ಮ ಫ್ಲಾಟ್‌ ಮಾರಾಟ ಮಾಡಿ, ಸ್ನೇಹಿತರಿಂದಲೂ ಸಾಲ ಪಡೆದು, ಕೊನೆಗೂ ಪತ್ನಿ ಅನಿತಾ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ತನ್ನ ಪತ್ನಿಗೋಸ್ಕರ ಎಂಬಿಬಿಎಸ್ ಪದವಿಯನ್ನೇ ಅಡವಿಟ್ಟ ಸುರೇಶ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲೇಬೇಕು. ತನ್ನ ಪದವಿಯನ್ನೇ ತ್ಯಾಗಮಾಡಿದ ಸುರೇಶ್ ಅವರ ಸಂಸಾರ ಇನ್ನಾದರೂ ಸುಖ ಸಂತೋಷದಿಂದ ಕೂಡಿರಲಿ ಎಂಬುದೇ ಆಶಯ.

Leave A Reply

Your email address will not be published.