ಸಿರಿಯಾದಲ್ಲಿ ಐಸಿಸ್​ ಪ್ರಮುಖ ನಾಯಕ ಅಬು ಇಬ್ರಾಹಿಂನನ್ನು ಹತ್ಯೆಗೈದ ಯುಎಸ್​ ಸೇನಾ ಪಡೆ

ವಾಷಿಂಗ್ಟನ್​ : ಇಸ್ಲಾಮಿಕ್ ಸ್ಟೇಟ್​​ ನ ಉನ್ನತ ನಾಯಕ ಅಬು ಇಬ್ರಾಹಿಂ (ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೇಶಿ)ಯನ್ನು ಯುಎಸ್​ ಸೈನಿಕರು ಸಿರಿಯಾದಲ್ಲಿ ಕೊಂದಿದ್ದಾಗಿ ಯುಎಸ್​ ಅಧ್ಯಕ್ಷ ಜೋ ಬೈಡನ್​ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡುವ ಜತೆ, ಟ್ವೀಟ್ ಮಾಡಿರುವ ಬೈಡನ್​, ಸಿರಿಯಾದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಯುಎಸ್​​ ಮಿಲಿಟರಿ ಪಡೆ ಸುರಕ್ಷಿತವಾಗಿ ಹಿಂದಿರುಗಿದೆ. ಅವರು ನಂತರ ಹೇಳಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ರಾತ್ರಿ ಯುಎಸ್​ ಸೇನಾ ಪಡೆಗಳು ಸಿರಿಯಾದ ವಾಯುವ್ಯ ಭಾಗದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದವು. ಅಮೆರಿಕದ ಜನರು ಮತ್ತು ಯುಎಸ್​ ಮಿತ್ರರಾಷ್ಟ್ರಗಳ ಸುರಕ್ಷತೆಗಾಗಿ ಮತ್ತು ಜಗತ್ತನ್ನು ಉಗ್ರಮುಕ್ತ ಮಾಡುವ ಕ್ರಮದ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ನಮ್ಮ ಸೇನಾ ಸಿಬ್ಬಂದಿಯ ಕೌಶಲ ಮತ್ತು ಶೌರ್ಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಪ್ರಸಕ್ತ ಕಾರ್ಯಾಚರಣೆಯಲ್ಲಿ ಐಸಿಸ್​ ನಾಯಕ ಅಬು ಇಬ್ರಾಹಿಂ ಅಲ್​ ಹಶಿಮಿ ಅಲ್​ ಖುರೇಷಿಯನ್ನು ಹತ್ಯೆಗೈಯ್ಯಲಾಗಿದೆ. ನಮ್ಮ ಸೈನ್ಯವನ್ನು ದೇವರು ಸದಾ ಕಾಯುತ್ತಾನೆ ಎಂದು ಬೈಡನ್​ ಪ್ರಕಟಣೆ ಹೊರಡಿಸಿದ್ದಾರೆ.

ಈ ಬಾರಿ ಅಮೆರಿಕ ಸೇನೆ ಅಬು ಇಬ್ರಾಹಿಂನನ್ನು ಗುರಿಯಾಗಿಸಿಕೊಂಡೆಯೇ ದಾಳಿ ನಡೆಸಿತ್ತು. ಈತ 2019ರ ಅಕ್ಟೋಬರ್​ 31ರಿಂದ ಐಸಿಸ್​ ಸಾರಥ್ಯ ವಹಿಸಿಕೊಂಡಿದ್ದ. ಮುಖ್ಯಸ್ಥನಾಗಿ ಅಲ್ಲದೆ ಇದ್ದರೂ ಈ ಭಯೋತ್ಪಾದಕ ಗುಂಪಿನಲ್ಲಿ ಉನ್ನತ ನಾಯಕನಾಗಿ ಗುರುತಿಸಿಕೊಂಡಿದ್ದ. ಅಂದಹಾಗೆ ಐಸಿಸ್​ನ ಹಿಂದಿನ ಮುಖ್ಯಸ್ಥ ಅಬು ಬಕರ್​ ಅಲ್ ಬಾಗ್ದಾದಿ ಕೂಡ ಸಿರಿಯಾದ ಇದೇ ಸ್ಥಳದಲ್ಲಿ 2019ರಲ್ಲಿ ಯುಎಸ್​ ಸೇನಾಪಡೆಯ ದಾಳಿಗೆ ಬಲಿಯಾಗಿದ್ದ. ಅಮೆರಿಕ ಸೇನೆ ನಡೆಸಿದ್ದ ಬಾಂಬ್​ ದಾಳಿಗೆ ಬಾಗ್ದಾದಿ ಸೇರಿ ಆತನ ಕುಟುಂಬದಲ್ಲಿದ್ದ ಹಲವರು ಮೃತಪಟ್ಟಿದ್ದರು.

ಈ ಬಾರಿ ಯುಎಸ್​ ಪಡೆಗಳು ಸಿರಿಯಾದ ವಾಯುವ್ಯ ಭಾಗದಲ್ಲಿ ಭಯೋತ್ಪಾದಕರ ಹಿಡಿತದಲ್ಲಿರುವ ಮನೆಯೊಂದರ ಮೇಲೆ ದಾಳಿ ಮಾಡಿದ್ದಾರೆ. ಮನೆ ಇದ್ದ ಪ್ರದೇಶಕ್ಕೆ ಹೆಲಿಕಾಪ್ಟರ್​ ಮೂಲಕ ಬಂದಿದ್ದ ಸೇನಾ ಪಡೆಗಳು, ಅಲ್ಲಿನ ಬಂದೂಕುಧಾರಿ ಉಗ್ರರೊಂದಿಗೆ ಸುಮಾರು 2ಗಂಟೆಗಳ ಕಾಲ ಘರ್ಷಣೆ ನಡೆಸಿದ್ದಾರೆ. ಈ ದಾಳಿಯಲ್ಲಿ ಅಬು ಇಬ್ರಾಹಿಂ ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಆರು ಮಕ್ಕಳು, ನಾಲ್ವರು ಮಹಿಳೆಯರೂ ಕೊಲ್ಲಲ್ಪಟ್ಟಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಿರಿಯಾದಲ್ಲಿ ಯುಎಸ್ ಸೇನೆ ನಿರಂತರವಾಗಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಡೆಸುತ್ತಲೇ ಇರುತ್ತದೆ. 2021ರ ಅಕ್ಟೋಬರ್​ನಲ್ಲಿ ವಾಯುವ್ಯ ಸಿರಿಯಾದಲ್ಲಿ ಯುಎಸ್​ ಸೇನಾ ಪಡೆ ವೈಮಾನಿಕ ದಾಳಿ ನಡೆಸಿ, ಅಲ್​-ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಅಲ್ ಮತಾರ್​ ಎಂಬಾತನನ್ನು ಹತ್ಯೆಗೈದಿತ್ತು.

Leave A Reply

Your email address will not be published.