ಸಿರಿಯಾದಲ್ಲಿ ಐಸಿಸ್ ಪ್ರಮುಖ ನಾಯಕ ಅಬು ಇಬ್ರಾಹಿಂನನ್ನು ಹತ್ಯೆಗೈದ ಯುಎಸ್ ಸೇನಾ ಪಡೆ
ವಾಷಿಂಗ್ಟನ್ : ಇಸ್ಲಾಮಿಕ್ ಸ್ಟೇಟ್ ನ ಉನ್ನತ ನಾಯಕ ಅಬು ಇಬ್ರಾಹಿಂ (ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೇಶಿ)ಯನ್ನು ಯುಎಸ್ ಸೈನಿಕರು ಸಿರಿಯಾದಲ್ಲಿ ಕೊಂದಿದ್ದಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡುವ ಜತೆ, ಟ್ವೀಟ್ ಮಾಡಿರುವ ಬೈಡನ್, ಸಿರಿಯಾದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಯುಎಸ್ ಮಿಲಿಟರಿ ಪಡೆ ಸುರಕ್ಷಿತವಾಗಿ ಹಿಂದಿರುಗಿದೆ. ಅವರು ನಂತರ ಹೇಳಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ರಾತ್ರಿ ಯುಎಸ್ ಸೇನಾ ಪಡೆಗಳು ಸಿರಿಯಾದ ವಾಯುವ್ಯ ಭಾಗದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದವು. ಅಮೆರಿಕದ ಜನರು ಮತ್ತು ಯುಎಸ್ ಮಿತ್ರರಾಷ್ಟ್ರಗಳ ಸುರಕ್ಷತೆಗಾಗಿ ಮತ್ತು ಜಗತ್ತನ್ನು ಉಗ್ರಮುಕ್ತ ಮಾಡುವ ಕ್ರಮದ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ನಮ್ಮ ಸೇನಾ ಸಿಬ್ಬಂದಿಯ ಕೌಶಲ ಮತ್ತು ಶೌರ್ಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಪ್ರಸಕ್ತ ಕಾರ್ಯಾಚರಣೆಯಲ್ಲಿ ಐಸಿಸ್ ನಾಯಕ ಅಬು ಇಬ್ರಾಹಿಂ ಅಲ್ ಹಶಿಮಿ ಅಲ್ ಖುರೇಷಿಯನ್ನು ಹತ್ಯೆಗೈಯ್ಯಲಾಗಿದೆ. ನಮ್ಮ ಸೈನ್ಯವನ್ನು ದೇವರು ಸದಾ ಕಾಯುತ್ತಾನೆ ಎಂದು ಬೈಡನ್ ಪ್ರಕಟಣೆ ಹೊರಡಿಸಿದ್ದಾರೆ.
ಈ ಬಾರಿ ಅಮೆರಿಕ ಸೇನೆ ಅಬು ಇಬ್ರಾಹಿಂನನ್ನು ಗುರಿಯಾಗಿಸಿಕೊಂಡೆಯೇ ದಾಳಿ ನಡೆಸಿತ್ತು. ಈತ 2019ರ ಅಕ್ಟೋಬರ್ 31ರಿಂದ ಐಸಿಸ್ ಸಾರಥ್ಯ ವಹಿಸಿಕೊಂಡಿದ್ದ. ಮುಖ್ಯಸ್ಥನಾಗಿ ಅಲ್ಲದೆ ಇದ್ದರೂ ಈ ಭಯೋತ್ಪಾದಕ ಗುಂಪಿನಲ್ಲಿ ಉನ್ನತ ನಾಯಕನಾಗಿ ಗುರುತಿಸಿಕೊಂಡಿದ್ದ. ಅಂದಹಾಗೆ ಐಸಿಸ್ನ ಹಿಂದಿನ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಕೂಡ ಸಿರಿಯಾದ ಇದೇ ಸ್ಥಳದಲ್ಲಿ 2019ರಲ್ಲಿ ಯುಎಸ್ ಸೇನಾಪಡೆಯ ದಾಳಿಗೆ ಬಲಿಯಾಗಿದ್ದ. ಅಮೆರಿಕ ಸೇನೆ ನಡೆಸಿದ್ದ ಬಾಂಬ್ ದಾಳಿಗೆ ಬಾಗ್ದಾದಿ ಸೇರಿ ಆತನ ಕುಟುಂಬದಲ್ಲಿದ್ದ ಹಲವರು ಮೃತಪಟ್ಟಿದ್ದರು.
ಈ ಬಾರಿ ಯುಎಸ್ ಪಡೆಗಳು ಸಿರಿಯಾದ ವಾಯುವ್ಯ ಭಾಗದಲ್ಲಿ ಭಯೋತ್ಪಾದಕರ ಹಿಡಿತದಲ್ಲಿರುವ ಮನೆಯೊಂದರ ಮೇಲೆ ದಾಳಿ ಮಾಡಿದ್ದಾರೆ. ಮನೆ ಇದ್ದ ಪ್ರದೇಶಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿದ್ದ ಸೇನಾ ಪಡೆಗಳು, ಅಲ್ಲಿನ ಬಂದೂಕುಧಾರಿ ಉಗ್ರರೊಂದಿಗೆ ಸುಮಾರು 2ಗಂಟೆಗಳ ಕಾಲ ಘರ್ಷಣೆ ನಡೆಸಿದ್ದಾರೆ. ಈ ದಾಳಿಯಲ್ಲಿ ಅಬು ಇಬ್ರಾಹಿಂ ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಆರು ಮಕ್ಕಳು, ನಾಲ್ವರು ಮಹಿಳೆಯರೂ ಕೊಲ್ಲಲ್ಪಟ್ಟಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಿರಿಯಾದಲ್ಲಿ ಯುಎಸ್ ಸೇನೆ ನಿರಂತರವಾಗಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಡೆಸುತ್ತಲೇ ಇರುತ್ತದೆ. 2021ರ ಅಕ್ಟೋಬರ್ನಲ್ಲಿ ವಾಯುವ್ಯ ಸಿರಿಯಾದಲ್ಲಿ ಯುಎಸ್ ಸೇನಾ ಪಡೆ ವೈಮಾನಿಕ ದಾಳಿ ನಡೆಸಿ, ಅಲ್-ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್ ಮತಾರ್ ಎಂಬಾತನನ್ನು ಹತ್ಯೆಗೈದಿತ್ತು.