ಗಂಡನಿಗೆ ಸುತ್ತಿಗೆಯಲ್ಲಿ ಹೊಡೆದು ಕೊಂದ ಪತ್ನಿ|ಮಹಿಳೆಯನ್ನು ಬಂಧಿಸದೆ ಬಿಡುಗಡೆಗೊಳಿಸಿದ ಪೊಲೀಸರು|ಕಾರಣ!!?
ಚೆನ್ನೈ:ಸುತ್ತಿಗೆಯಿಂದ ಹೊಡೆದು ಗಂಡನನ್ನು ಕೊಂದ ಮಹಿಳೆಯನ್ನು ಪೊಲೀಸರು ಬಂಧಿಸದೆ ಬಿಡುಗಡೆ ಮಾಡಿದ ಘಟನೆ ತಮಿಳುನಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಂಡನನ್ನೇ ಕೊಲೆ ಮಾಡಿದಾಕೆಯನ್ನು ಯಾಕೆ ಬಂಧಿಸಲಿಲ್ಲ ಎಂಬ ಪ್ರಶ್ನೆ ಮೂಡೋದು ಸಹಜ. ಆಕೆ ಕೊಲೆ ಮಾಡಿದ್ದು ನಿಜ.ಆದರೆ ಅದರ ಹಿಂದಿರುವ ಉದ್ದೇಶ ಮಾತ್ರ ಆತ್ಮರಕ್ಷಣೆಗಾಗಿ. ಹೌದು.ಮಹಿಳೆಯನ್ನು ತನಿಖೆಯ ಬಳಿಕ ಶುಕ್ರವಾರ ಬಿಡುಗಡೆ ಮಾಡಿದ್ದು,ಘಟನೆಗೆ ಕಾರಣ ಇಲ್ಲಿದೆ ನೋಡಿ.
41 ವರ್ಷದ ಮಹಿಳೆಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 100 ರ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.ಈ ಸೆಕ್ಷನ್ ವ್ಯಕ್ತಿಗೆ ಯಾವುದಾದರೂ ಬೆದರಿಕೆ ಇದ್ದಾಗ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕನ್ನು ನೀಡುತ್ತದೆ.
ಘಟನೆಯ ವಿವರ :
ಮಹಿಳೆಯದ್ದು, ಪತಿ ಮತ್ತು 20 ವರ್ಷದ ಮಗಳಿರುವ ಚಿಕ್ಕ ಕುಟುಂಬ. ಮದ್ಯ ವ್ಯಸನಿಯಾಗಿದ್ದ ಗಂಡ ಪ್ರತಿನಿತ್ಯವೂ ಹಣ ನೀಡುವಂತೆ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ, ಹಲ್ಲೆ ಸಹ ಮಾಡುತ್ತಿದ್ದ.ಗುರುವಾರ ರಾತ್ರಿ ಪಾನಮತ್ತ ಸ್ಥಿತಿಯಲ್ಲಿ ಮನೆಗೆ ಮರಳಿದ ಪತಿ, ತನ್ನ 20 ವರ್ಷದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ. ಅದನ್ನು ತಡೆಯಲು ಮಹಿಳೆ ಯತ್ನಿಸಿದಾಗ, ಆಕೆಯ ಮೇಲೆ ಪತಿ ಹಲ್ಲೆ ಮಾಡಿದ್ದಾನೆ.
ಕುಡಿದ ಮತ್ತಿನಲ್ಲಿ ಮೃಗದಂತೆ ನಡೆದುಕೊಳ್ಳುತ್ತಿದ್ದ ಗಂಡನಿಂದ ಮಗಳನ್ನು ರಕ್ಷಣೆ ಮಾಡಿಕೊಳ್ಳಲು ಮಹಿಳೆ ತನ್ನ ಗಂಡನ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಇದಾದ ಬಳಿಕ ಆಕೆ ನೆರೆಯವರಿಗೆ ಈ ವಿಚಾರವನ್ನು ತಿಳಿಸಿದ್ದು, ನಂತರ ಅದು ಪೊಲೀಸರ ಗಮನಕ್ಕೆ ಬಂದಿದೆ.ಸುತ್ತಿಗೆಯಿಂದ ಹೊಡೆದ ರಭಸಕ್ಕೆ ಪಾನಮತ್ತ ಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆ ಮತ್ತು ಆಕೆಯ ಮಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು. ಆತ್ಮರಕ್ಷಣೆಗಾಗಿ ಈ ಕೊಲೆ ನಡೆದಿದೆ ಎಂದು ಗೊತ್ತಾದಾಗ ಮಹಿಳೆ ಮತ್ತು ಆಕೆಯ ಮಗಳನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
ಆರಂಭದಲ್ಲಿ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಬದಲಾಯಿಸಿ ಸೆಕ್ಷನ್ 100ರ ಅಡಿಯಲ್ಲಿ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಸದ್ಯ ಪೊಲೀಸರು ಮತ್ತೆ ಆಕೆಯನ್ನು ಬಂಧಿಸಿಲ್ಲ. ಈ ಸಂಬಂಧ ಸಂಪೂರ್ಣ ವಿವರಣೆಯನ್ನು ತಮಿಳುನಾಡು ಪೊಲೀಸರು ನ್ಯಾಯಾಲಯ ಮುಂದೆ ಹಾಜರುಪಡಿಸಲಿದ್ದಾರೆ.