ರೋಗಿಗೆ ಚಿಕಿತ್ಸೆ ನೀಡುವ ಬದಲು ವಿಡಿಯೋ ಗೇಮ್‌ನಲ್ಲಿ ಮಗ್ನನಾಗಿದ್ದ ವೆನ್ಲಾಕ್‌ ಆಸ್ಪತ್ರೆಯ ಮೆಡಿಕಲ್‌ ವಿದ್ಯಾರ್ಥಿ|ತನಿಖೆ ಬಳಿಕ ವಿದ್ಯಾರ್ಥಿ ಅಮಾನತು

ಮಂಗಳೂರು :ವೈದ್ಯರೆಂದರೆ ರೋಗಿಯ ಪ್ರಾಣ ಉಳಿಸಬೇಕಾದವರೇ ಹೊರತು ಕೇವಲ ಮಾತಿಗಷ್ಟೇ ಅಲ್ಲ. ಇಂತಹ ಅದೆಷ್ಟೋ ವೈದ್ಯರು ತಮ್ಮ ಕರ್ತವ್ಯ ಪಾಲನೆ ಮಾಡದೆ ಪ್ರಾಣವನ್ನೇ ತೆಗೆದವರು ಇದ್ದಾರೆ. ಇದೀಗ ಅದೇ ರೀತಿ ನಗರದ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೆಡಿಕಲ್‌ ವಿದ್ಯಾರ್ಥಿಯೊಬ್ಬ ರೋಗಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಬದಲು ವಿಡಿಯೋ ಗೇಮ್‌ನಲ್ಲಿ ಮಗ್ನರಾಗಿರುವ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಆ ವಿದ್ಯಾರ್ಥಿಯನ್ನು ಅಮಾನತಿನಲ್ಲಿಡಲು ಕ್ರಮಕೈಗೊಳ್ಳಲಾಗಿದೆ.

ಅಧಿಕ ರಕ್ತದೊತ್ತಡದಿಂದ ಬಿದ್ದು ತಲೆಗೆ ಗಾಯಗೊಂಡ ಬಂಟ್ವಾಳ ವಗ್ಗದ ವ್ಯಕ್ತಿಯೊಬ್ಬರನ್ನು ಜ.23ರಂದು ವೆನ್ಲಾಕ್‌ ಆಸ್ಪತ್ರೆಗೆ ಕರೆ ತರಲಾಗಿತ್ತು. ರೋಗಿ ಆಸ್ಪತ್ರೆಗೆ ತಲುಪಿದಾಗ ಅವರಿಗೆ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾದ ಮೆಡಿಕಲ್‌ ವಿದ್ಯಾರ್ಥಿ ಮತ್ತು ಅಲ್ಲಿರುವ ಸಿಬ್ಬಂದಿ ತಮ್ಮ ಕಂಪ್ಯೂಟರ್‌ನಲ್ಲಿ ವಿಡಿಯೋ ಗೇಮ್‌ ಆಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.ರೋಗಿಯ ಮನೆಯವರು ಅಗತ್ಯ ಚಿಕಿತ್ಸೆ ನೀಡುವಂತೆ ಮಾಡಿದ್ದರೂ ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.

ಈ ಕುರಿತು ಬಾರಿ ಚರ್ಚೆಗೆ ಕಾರಣವಾಗಿದ್ದ ವಿದ್ಯಾರ್ಥಿಯ ವರ್ತನೆ,ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ವಿಡಿಯೋ ಗೇಮ್‌ ಆಡುತ್ತಿರುವ ವಿಡಿಯೋ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ವೆನ್ಲಾಕ್‌ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಖಾಸಗಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ ವಿಡಿಯೋ ಗೇಮ್‌ ಆಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಆ ವಿದ್ಯಾರ್ಥಿಯನ್ನು ಅಮಾನತಿನಲ್ಲಿಡಲು ಕ್ರಮಕೈಗೊಳ್ಳಲಾಗಿದೆ. ಇದು ಮಾತ್ರವಲ್ಲದೆ ವೆನ್ಲಾಕ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯ ನಿರತ ಸರಕಾರಿ ವೈದ್ಯರು ಮತ್ತು ಶುಶ್ರೂಷಕರು ಈ ಬಗ್ಗೆ ನಿಗಾವಹಿಸುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸಲಾಗಿದೆ ಎಂದು ವೆನ್ಲಾಕ್‌ ಜಿಲ್ಲಾಆಸ್ಪತ್ರೆಯ ಅಧೀಕ್ಷಕ ಸದಾಶಿವ ಶ್ಯಾನುಭೋಗ್‌ ವರದಿಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.