2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ
ಗುರುಗ್ರಾಮ್ : ಫೈನಾನ್ಸ್ ಕಂಪನಿಯಲ್ಲೇ 2.18 ಕೋಟಿ ರೂ. ವಂಚಿಸಿ ವ್ಯಕ್ತಿಯೊಬ್ಬ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿರುವ ಘಟನೆ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಫೈನಾನ್ಸ್ ಕಂಪನಿಗೆ ಗುರುಗ್ರಾಮ್ ನಿವಾಸಿ ಪ್ರಮೋದ್ ಸಿಂಗ್ ಸುಮಾರು 2.18 ಕೋಟಿ ರೂ. ವಂಚಿಸಿದ್ದನು. ಈ ಪರಿಣಾಮ ಫೈನಾನ್ಸ್ ಕಂಪನಿ 2018 ರಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿತ್ತು.
ಆದರೆ ದೂರು ದಾಖಲಾದ 3 ವರ್ಷಗಳ ನಂತರ ಆರೋಪಿಯನ್ನು ಪೊಲೀಸರು ಗುರುಗ್ರಾಮದಲ್ಲಿ ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಜಂಟಿ ಪೊಲೀಸ್ ಕಮಿಷನರ್ ಛಾಯಾ ಶರ್ಮಾ ಅವರು,ಪ್ರಮೋದ್ ಸಿಂಗ್ ಆರಂಭದಲ್ಲಿ ಮರ್ಸಿಡಿಸ್ ಬೆಂಝ್ ಖರೀದಿಸಲು ಸಂಸ್ಥೆಯಿಂದ 27.5 ಲಕ್ಷ ರೂಪಾಯಿ ಸಾಲ ಪಡೆದು ಆರಂಭಿಕ 3 ಕಂತುಗಳನ್ನು ಪಾವತಿಸಿ ಫೈನಾನ್ಸರ್ ನಂಬಿಕೆ ಗಳಿಸಿದ್ದಾನೆ.
ನಂತರ ಅವನು ನಾಲ್ಕು ಬಾರಿ ಸಾಲ ಪಡೆದುಕೊಂಡಿದ್ದು, ಕಂತನ್ನು ಸ್ವಲ್ಪ ದಿನಗಳ ನಂತರ ಪಾವತಿಸುತ್ತಿದ್ದವನು ಥಟ್ಟನೆ ಹಣ ಕಟ್ಟುವುದನ್ನೇ ನಿಲ್ಲಿಸಿದ್ದಾನೆ. ಆಗ ಫೈನಾನ್ಸ್ ಕಂಪನಿ ಆರೋಪಿ ವಿರುದ್ಧ ದೂರು ನೀಡಿದೆ.
ಸಿಂಗ್ ಮೂರು ವರ್ಷಗಳಲ್ಲಿ ಐದು ಮರ್ಸಿಡಿಸ್ ಕಾರುಗಳನ್ನು ಖರೀದಿಸಿದ್ದಾನೆ. ಕಾಲ್ ಸೆಂಟರ್ಗಳಿಗೆ ಸಾರಿಗೆ ಸೇವೆಗಳನ್ನು ಒದಗಿಸುವ ವ್ಯವಹಾರವನ್ನು ನಡೆಸುತ್ತಿದ್ದ. ಅಲ್ಲದೆ ಐಷಾರಾಮಿ ಕಾರುಗಳ ಸಮೂಹವನ್ನೇ ಹೊಂದಿದ್ದ.