ಸಹನಾ ಗುಣದ ಸಹಜ ಸಾಧಕಿ – ಬಾಲಕಿ ಸೊಹನ ಶಂಕರ್ ಉಡುಪಿ
"ಅನುಕರಣೆಯಿಂದ ಮಾನವನ ಕಲಾಸೃಷ್ಟಿ ಆರಂಭವಾಯಿತು" ಎಂಬ ವ್ಯಾಖ್ಯಾನವನ್ನು ದಾರ್ಶನಿಕರು ದರ್ಶಿಸುತ್ತಾರೆ. ಈ ವ್ಯಾಖ್ಯಾನವನ್ನು ಬ್ರಹ್ಮಾಂಡದ ಸಕಲ ಜೀವಕೋಟಿಗಳಿಗೂ ಸಮೀಕರಿಸಬಹುದು. ಹುಟ್ಟಿದ ಪ್ರತಿಯೊಂದೂ ಜೀವಿಯೂ ತನ್ನ ತಾಯಿ ಹಾಗೂ ಸುತ್ತಣ ಪರಿಸರವನ್ನು ಮೊದಲಿಗೆ ಅನುಕರಿಸುತ್ತದೆ. ಆನಂತರ ಅನುಸರಿಸುತ್ತದೆ. ಮಾನವನಿಗೆ ಬುದ್ಧಿ ಹಾಗೂ ಭಾಷೆಯ ವರದಾನವಿರುವುದರಿಂದ ಅನುಕರಣೆ ಮತ್ತು ಅನುಸರಣೆ ಎರಡೂ ಬಹುಬೇಗನೆ ವೃದ್ಧಿಸಿ, ಸಿದ್ಧಿಸುತ್ತದೆ.
ಮಾತೆ ಮಮತೆಯಿಂದ ಹಾಡುವ ಜೋಗುಳದ ಲಾಲಿ ಹಾಡಿಗೆ ಪುಟ್ಟಾಣಿಗಳು ಬಲುಬೇಗನೆ ಪ್ರತಿಕ್ರಿಯಿಸುತ್ತವೆ. ತೊದಲು ನುಡಿಯಲ್ಲೇ ಹಾಡಲು ತೊಡಗುತ್ತವೆ. ಬಾಲ್ಯದಲ್ಲಿ ಕಂದಮ್ಮಗಳು ಬಾಹ್ಯ ಪ್ರಪಂಚದ ಆಗುಹೋಗುಗಳಿಗೆ ಕಣ್ಣು, ಕಿವಿ, ಬಾಯಿಯಾಗುವ ಪರಿಪಾಠ ಬೆಳೆಸಿಕೊಳ್ಳುತ್ತಾರೆ. ಕೆಲವು ಕಂದಮ್ಮಗಳು ಬಾಲ್ಯದಲ್ಲಿಯೇ ಕೆಲವೊಂದು ಕ್ಷೇತ್ರಗಳಲ್ಲಿ ಅತ್ಯಾಸಕ್ತತೆಯಿಂದ ಸ್ಪಂದಿಸುತ್ತವೆ. ಹೀಗೆ ಬಾಲ್ಯದಲ್ಲಿಯೇ ಅನುಕರಣೆಯಿಂದ ನೃತ್ಯ, ಸಂಗೀತ, ಚಿತ್ರಕಲೆ ಮುಂತಾದವುಗಳಲ್ಲಿ ತೊಡಗಿಕೊಂಡವರು ಉಡುಪಿಯ ಸೊಹನ ಶಂಕರ್ ಎಂಬ ಬಾಲಕಿ.
ಸೊಹನ ಅವರಿಗೂ ನೃತ್ಯಕ್ಕೂ ಅವಿನಾಭಾವ ಸಂಬಂಧ. ಇನ್ನೂ ಎರಡ್ಮೂರು ವರ್ಷದ ಮಗುವಾಗಿದ್ದಾಗಲೇ ದೂರದರ್ಶನದಲ್ಲಿ ನೃತ್ಯ ಕಾರ್ಯಕ್ರಮ ಆರಂಭಗೊಂಡರೆ ಸೊಹನ ಅವರ ದೇಹ ಭಾವಗಳು ತನ್ನಿಂದ ತಾನಾಗಿ ಸ್ಪಂದಿಸುತ್ತ
ಕಾಲು ಹೆಜ್ಜೆ ಹಾಕಲು ಪ್ರಾರಂಭಿಸಿದರೆ; ಕಣ್ಣುಗಳು, ಕರಗಳು ಆಂಗೀಕ ಅಭಿನಯಕ್ಕೆ ತೊಡಗುತ್ತಿದ್ದವು. ನೃತ್ಯಗಳನ್ನು ತದೇಕಚಿತ್ತದಿಂದ ಆಲಿಸುತ್ತ, ವೀಕ್ಷಿಸುತ್ತ, ಹೆಜ್ಜೆ ಹಾಕುತ್ತ ತನ್ಮನಗಳಲ್ಲಿ ಆನಂದಿಸುತ್ತ ಇದ್ದವರು ಸೊಹನ. ನೃತ್ಯದ ಕುರಿತಾದ ಈ ತೆರನಾದ ಒಲವನ್ನು ಪರಿಗಣಿಸಿ ಹೆತ್ತವರು, ಎಕ್ಷ್ಟ್ರೀಮ್ ಡ್ಯಾನ್ಸ್ ಅಕಾಡೆಮಿಗೆ ಐದರ ಹರೆಯದಲ್ಲೇ ಸೇರಿಸಿದರು. ಪಾಶ್ಚಾತ್ಯ ನೃತ್ಯಗಳೊಂದಿಗೆ ಸಮಕಾಲೀನ ನೃತ್ಯ ಪ್ರಕಾರಗಳೊಂದಿಗೆ ಭಾರತೀಯ ಪ್ರಕಾರದ ನೃತ್ಯ ಭರತನಾಟ್ಯವನ್ನು ಶ್ರೀರಕ್ಷ ಹಾಗೂ ಅನನ್ಯ ಅವರಲ್ಲಿ ಕಲಿತು ಜೂನಿಯರ್ ಪರೀಕ್ಷೆಯನ್ನು ಅತ್ಯುತ್ತಮ ಸ್ತರದಲ್ಲಿ ಉತ್ತೀರ್ಣರಾಗಿದ್ದಾರೆ.
ಸೊಹನ ಅವರು ಹಲವಾರು ವೇದಿಕೆಗಳಲ್ಲಿ ಏಕಾಂಗಿ ಹಾಗೂ ತಂಡಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಿತರಾಗಿದ್ದಾರೆ. 'ನಮ್ಮ ಟಿವಿ', 'ನಮ್ಮ ಕುಡ್ಲ' ವಾಹಿನಿಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಡೈಜಿ ವರ್ಲ್ಡ್ ವಾಹಿನಿ ನಡೆಸಿದ "ಜೂನಿಯರ್ ಮಸ್ತಿ ಸೀಸನ್ 2" ಎಂಬ ನೃತ್ಯ ಮಾಲಿಕೆಯಲ್ಲಿ ಸೆಮಿ ಫೈನಲ್ ತಲುಪಿ "ಅತ್ಯುತ್ತಮ ಅಭಿವ್ಯಕ್ತಿ" (Best Expression)ಗೆ ವಾಹಿನಿ "ಕ್ವೀನ್ ಆಫ್ ಡ್ಯಾನ್ಸ್ ಜೂನಿಯರ್ ಮಸ್ತಿ ಸೀಸನ್" ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಸ್ಪಂದನ ವಾಹಿನಿಯ "ಕಾಫಿ ಟೈಮ್ ವಿದ್ ಸೋನಿ" ಎಂಬ ಮಾಲಿಕೆಯನ್ನು ನಿರೂಪಿಸಿದ ಕೀರ್ತಿ ಸೊಹನ ಅವರದ್ದು.
‘ನಿಮಿಷ ಕಲಾವಿದರು ಕಟಪಾಡಿ’ ಇವರ ಸಹಯೋಗದಲ್ಲಿ “ಮ್ಯೂಸಿಕಲ್ ಸಾಂಗ್ ಮೀ ಆ್ಯಂಡ್ ಶೀ”, “ಅಪ್ಪ ಮತ್ತು ನಾನು” ಹಾಗೂ ತುಂಬಾ ಪ್ರಚಾರ ಪಡೆದಿರುವ “ಸತ್ಯೊದ ಬೆರಿಯ ಸತ್ಯೊಲು” ಎಂಬ ಕಿರು ಚಿತ್ರದಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸಿದ ನೆಗಳ್ತೆ ಸೊಹನ ಅವರದು. ‘ಯುವ ಪೇ’ ಜಾಹಿರಾತುಗಳಲ್ಲಿ ನಟಿಸಿದ್ದಾರೆ. ತ್ರಿಭಾಷೆಯಲ್ಲಿ ಭಾರತದಾದ್ಯಂತ ಬಿಡುಗಡೆಯಾಗಿದೆ. ಕೆಲವು ಕಿರುಚಿತ್ರಗಳಿಗೆ ಕಂಠ ದಾನ ಮಾಡಿದ್ದಾರೆ.
ಅಭಿನಯ, ಸಂಗೀತ, ನಿರೂಪಣೆ, ನೃತ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸೊಹನ ಚಿತ್ರಕಲೆ, ಕರಕುಶಲ ವಸ್ತುಗಳನ್ನೂ ರಚಿಸುತ್ತಾರೆ. ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲಲ್ಲಿ ಒಂಬತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸೊಹನ ಅವರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ತನ್ನ ಸ್ಥಾನವನ್ನು ಮುಂದಿನ ಸಾಲಿನಲ್ಲಿ ಕಾಯ್ದಿರಿಸಿಕೊಂಡವರು. ಎಕ್ಷ್ಟ್ರೀಮ್ ಡ್ಯಾನ್ಸ್ ಅಕಾಡೆಮಿಯ ಸಂಚಾಲಕ ಮಂಜಿತ್ ಶೆಟ್ಟಿಯವರು ಸೊಹನ ಅವರಿಗೆ ಸುಮಾರು 9 ವರ್ಷದಿಂದ ನೃತ್ಯ ತರಬೇತಿ ನೀಡುತ್ತ ಬಂದವರು. ಸೊಹನ ಅವರಲ್ಲಿ ಶ್ರದ್ಧೆ, ಕಲಿಯಬೇಕೆಂಬ ತುಡಿತ, ಹೇಳಿದನ್ನು ಸಹನೆಯಿಂದ ಆಲಿಸುವುದು ಮತ್ತು ಅದನ್ನು ಸಹಜವಾಗಿ ಪರಿಪಾಲಿಸುವುದು, ಸಾಧಿಸುವ ಛಲ ಹಾಗೂ ಹುಟ್ಟು ಪ್ರತಿಭೆಗಳು ಮೇಳೈಸಿರುವುದನ್ನು ಗಮನಿಸಿರುವುದಾಗಿ ಹೇಳುತ್ತಾರೆ ಮಂಜಿತ್. ಸೊಹನ ಅವರು ಹಲವು ವೇದಿಕೆಗಳಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ. ಸೊಹನ ಅವರ ಪ್ರತಿಭೆಯನ್ನು ಎಳವೆಯಲ್ಲೇ ಗುರುತಿಸಿ, ಗುರುಮುಖೇನ ಸರಿಯಾದ ಗಮ್ಯದತ್ತ ಪ್ರವಹಿಸುವಂತೆ ಮಾಡಿದವರು ಮಾತಪಿತರಾದ ಶ್ರೀಮತಿ ನಾಗರತ್ನ ಹಾಗೂ ಶ್ರೀ ಶಂಕರ್ ದಂಪತಿಗಳು. ಸೊಹನ ಅವರ ಭವಿತವ್ಯದ ವಿದ್ಯಾಭ್ಯಾಸ ಹಾಗೂ ಕಲಾ ಸಾಧನೆಗಳು ದಾಖಲೆಗಳಾಗಲಿ ಎಂಬ ಆಶಯ ನಮ್ಮದು.
ಲೇಖನ : ಉದಯ ಶೆಟ್ಟಿ, ಪಂಜಿಮಾರು.