ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ವಾರ್ಡ್ ಸಭೆ ಕಲ್ಯಾಣ ಮಂಟಪವಾಗಿ ಮಾರ್ಪಡು|ಯುವ ಪ್ರೇಮಿಗಳ ಮದುವೆ ಮಾಡಿಸಿ ಅವರಿಬ್ಬರ ಬಾಳಿಗೆ ಬೆಳಕಾದ ಪಿಡಿಓ|ಈ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು ಗ್ರಾಮ ಪಂಚಾಯತ್

ಮೈಸೂರು :ಪ್ರತಿಯೊಬ್ಬ ಪ್ರೇಮಿಗೂ ತಾನು ಪ್ರೀತಿಸಿದ ಹುಡುಗಿ-ಹುಡುಗ ಜೊತೆಗೆ ಮದುವೆ ಆಗುವುದು ಕನಸು. ಇಂತಹ ಕನಸನ್ನ ನನಸು ಮಾಡಲು ಹೊರಟ ಈ ಜೋಡಿಗೆ ಮಾತ್ರ ಯಾರದೇ ಬೆಂಬಲ ಸಿಗದೇ ಬೇಸತ್ತಿದ್ದ ಸಮಯದಲ್ಲಿ ಪಿಡಿಓ ಒಬ್ಬರು ಈ ಯುವ ಪ್ರೇಮಿಗಳ ಬಾಳಿಗೆ ಬೆಳಕಾಗಿದ್ದಾರೆ.


Ad Widget

Ad Widget

Ad Widget

ಇಂತಹ ವಿಚಿತ್ರ ಘಟನೆ ಮೈಸೂರು ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಯತ್​ನಡೆದಿದ್ದು,ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ವಾರ್ಡ್ ಸಭೆ ಕಲ್ಯಾಣ ಮಂಟಪವಾಗಿ ಮಾರ್ಪಟ್ಟಿದ್ದು ವಿಶೇಷವೇ ಆಗಿದೆ.

ಈ ಯುವ ಜೋಡಿಯ ಮದುವೆಗೆ ಪೋಷಕರ ಒಪ್ಪಿಗೆ ಇಲ್ಲದ ಸಂದರ್ಭದಲ್ಲಿ,ಪಿಡಿಓ ಮಹಾದೇವಸ್ವಾಮಿ ಅವರು ಯುವ ಪ್ರೇಮಿಗಳಿಗೆ ಬೆಂಬಲವಾಗಿ ನಿಂತು, ಅವರ ಪೋಷಕರನ್ನ ಮದುವೆಗೆ ಒಪ್ಪಿಸಿದರು. ಬಳಿಕ ವಾರ್ಡ್ ಸದಸ್ಯರ ಸಮ್ಮುಖದಲ್ಲೇ ಹರದನಹಳ್ಳಿಯ ಪ್ರೇಮಿಗಳಾದ ಬಸವರಾಜು(24) ಹಾಗೂ ಸುಚಿತ್ರ(19) ಅವರಿಗೆ ಮದುವೆ ಮಾಡಿಸಿದ್ದಾರೆ.

ಹರದನಹಳ್ಳಿಯವರಾದ ಈ ಇಬ್ಬರು ಪ್ರೇಮಿಗಳು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಮದುವೆಗೆ ಇಬ್ಬರ ಮನೆಯಲ್ಲೂ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ವಿಚಾರದಲ್ಲಿ ಎರಡೂ ಮನೆಗಳ ಮಧ್ಯೆ ಗಲಾಟೆಯೂ ನಡೆದು, ಪೊಲೀಸ್ ಠಾಣೆ ಮೆಟ್ಟಿಲೂ ಸಹ ಏರಿದ್ದರು. ಹೀಗಾಗಿ ಈ ಜೋಡಿಗೆ ಮದುವೆಯಾಗಲು ಸಾಧ್ಯವೇ ಆಗಿರಲಿಲ್ಲ.

ವಾರ್ಡ್ ಸಭೆ ನಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯತ್​ ಕಚೇರಿಯ ಪಕ್ಕದ ಮನೆಯಲ್ಲೇ ಪ್ರೇಮಿಗಳ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು. ಎರಡೂ ಮನೆಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಗ್ರಾಮದ ಮುಖಂಡರು ದಂಡ ಕಟ್ಟಿಸಿಕೊಂಡು ಮದುವೆ ಮಾಡಿಸಲು ತೀರ್ಮಾನಿಸಿದ್ದರು. ಗಲಾಟೆ ಶಬ್ಧ ಕೇಳಿದ ಪಿಡಿಓ ಮಹಾದೇವಸ್ವಾಮಿ ಸ್ಥಳಕ್ಕೆ ಬಂದು ಜಗಳದ ಕಾರಣ ತಿಳಿದುಕೊಂಡಿದ್ದಾರೆ

ನಂತರ ಒಪ್ಪಿಗೆಗೆ ದಂಡ ಹಾಕುವುದು ಕಾನೂನಿಗೆ ವಿರೋಧ ಎಂದು ಮಹಾದೇವಸ್ವಾಮಿ ಮುಖಂಡರಿಗೆ ತಿಳಿ ಹೇಳಿ, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದೆಂದು ಸಲಹೆ ನೀಡಿದ್ದಾರೆ. ಪ್ರೇಮಿಗಳನ್ನ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಕರೆತಂದು ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಹಾರ ಬದಲಿಸುವ ಮೂಲಕ ಮದುವೆ ಮಾಡಿಸಿ ಯುವ ಪ್ರೇಮಿಗಳ ಬಾಳಿಗೆ ಬೆಳಕಾಗಿದ್ದಾರೆ.

ಇದರ ಜೊತೆಗೆ ಪ್ರೇಮಿಗಳ ಪೋಷಕರನ್ನೂ ಸಹ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೂತನ ವಧು-ವರನಿಗೆ ವಾರ್ಡ್ ಸದಸ್ಯರು ಸೇರಿದಂತೆ ಗ್ರಾಮಸ್ಥರು ಶುಭಕೋರಿ ಆಶೀರ್ವದಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: