ಕಮಲವ್ವನ ಮೊಗದಲ್ಲಿ ನಗು ತರಿಸಿದ ಮುಖ್ಯಮಂತ್ರಿ|ಮನವಿಯನ್ನು ಸ್ವೀಕರಿಸಿ ಮನೆ ನಿರ್ಮಿಸಿ ಗೃಹಪ್ರವೇಶ ಮಾಡಿಸಿಕೊಟ್ಟ ಬೊಮ್ಮಾಯಿ

ಭಾರಿ ಮಳೆಗೆ ಸೂರು ಕಳೆದುಕೊಂಡ ಕಮಲವ್ವನಿಗೆ ಗಣೇಶ ಹಬ್ಬವನ್ನೂ ಸಂಭ್ರಮಿಸಲಾಗದ ಸಂಕಟದ ಸ್ಥಿತಿ. ಅಂದು ಖಾಸಗಿ ವಾಹಿನಿಯ ಸಂದರ್ಶನ ಕಾರ್ಯಕ್ರಮದಲ್ಲಿ ಜನರ ಸಂಕಷ್ಟವನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದ ಮುಖ್ಯಮಂತ್ರಿಗಳನ್ನು ಕಂಡು ಕಮಲವ್ವನೂ ತನ್ನ ಸಂಕಷ್ಟ ತೋಡಿಕೊಂಡಳು.

“ಇಬ್ಬರೂ ಗಂಡುಮಕ್ಕಳು ಸತ್ತು ಹೋಗ್ಯಾರ, ಮನಿ ಕಟ್ಟಸಿಕೊಡ್ರಿ ಸಾಹೇಬ್ರ” ಎಂದು ಗದ್ಗದಿತಳಾಗಿ ನುಡಿದ ಕಮಲವ್ವನಿಗೆ ಸಾಂತ್ವನ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೊನೆಗೂ ಆಕೆಗೆ ನೀಡಿದ ಆಶ್ವಾಸನೆಯಂತೆ ಮನೆಯನ್ನು ನಿರ್ಮಿಸಿಕೊಡುವುದರ ಮೂಲಕ ಈಗ ಕಮಲವ್ವ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವಂತೆ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರ ಶಿಗ್ಗಾಂವಿಯ ಮಂಚಿನಕೊಪ್ಪ ಗ್ರಾಮದ ಕಮಲವ್ವ ತಿಮ್ಮನಗೌಡ್ರ ತಮಗೆ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದಾದ ನಂತರ ಕಮಲವ್ವನಿಗೆ ನಾಲ್ಕೇ ತಿಂಗಳಲ್ಲಿ ಮನೆಯನ್ನು ನಿರ್ಮಿಸಿ ಅವರಿಗೆ ಹಸ್ತಾಂತರಿಸಲಾಗಿದೆ.

ಹ್ಯಾಬಿಟ್ಯಾಟ್ ಸೆಂಟರ್ ಮೂಲಕ ನಿರ್ಮಿಸಲಾದ ಸುಸಜ್ಜಿತ ಮನೆಯನ್ನು ಸವಣೂರ ಉಪ ವಿಭಾಗಾಧಿಕಾರಿಯವರು ಹಸ್ತಾಂತರಿಸಿದರು. ಈ ಬಾರಿಯ ಸಂಕ್ರಾಂತಿ ಕಮಲವ್ವನಿಗೆ ಹಬ್ಬದ ಸಂಭ್ರಮದ ಜೊತೆಗೆ ಗೃಹಪ್ರವೇಶವನ್ನು ಮಾಡುವಂತೆ ಮಾಡಿದೆ.

Leave A Reply

Your email address will not be published.