ಮಂಗಳೂರು: ಬದುಕಿರುವಾಗಲೇ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ನಕಲಿ ಪ್ರಮಾಣ ತಯಾರಿಸಿ ಜೀವ ವಿಮಾ ಪಾಲಿಸಿಯ ಹಣ ಪಡೆದು ವಂಚನೆ | ಆರೋಪಿಗೆ ಮೂರುವರೆ ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಮಂಗಳೂರು: ಬದುಕಿರುವಾಗಲೇ,ಪತ್ನಿ ಸಾವನ್ನಪ್ಪಿದ್ದಾಳೆ ಎಂದು ನಕಲಿ ಪ್ರಮಾಣಪತ್ರ ತಯಾರಿಸಿ ಜೀವವಿಮಾ ಪಾಲಿಸಿಯ ಹಣ ಪಡೆದು ವಂಚಿಸಿದ ಪ್ರಕರಣದ ವಿಚಾರಣೆ ಬಳಿಕ ವ್ಯಕ್ತಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ 2ನೇ ಸಿಜೆಎಂ ನ್ಯಾಯಾಲಯವು ತೀರ್ಪು ನೀಡಿದೆ.
ಬಂಧಿತ ಆರೋಪಿಯನ್ನು ಶಿವರಾಮ ಶೆಣೈ (55) ಎಂದು ಗುರುತಿಸಲಾಗಿದೆ.
ಘಟನೆಯ ವಿವರ :
ಆರೋಪಿ ನಗರದ ಕೆಎಸ್. ರಾವ್ ರಸ್ತೆಯ ಪಾಪ್ಯುಲರ್
ಬಿಲ್ಡಿಂಗ್‌ನಲ್ಲಿರುವ ಜೀವ ವಿಮಾ ಕಚೇರಿಯಲ್ಲಿ ತನ್ನ ಪತ್ನಿ ಸುಮನಾ ಶೆಣೈ ಹೆಸರಿನಲ್ಲಿ ಇದ್ದ 2 ಎಲ್‌ಐಸಿ ಪಾಲಿಸಿಗಳಿಗೆ ತನ್ನನ್ನು ನಾಮ ನಿರ್ದೇಶಿತ ವ್ಯಕ್ತಿಯನ್ನಾಗಿ ಮಾಡಿಕೊಂಡಿದ್ದ. ಪತ್ನಿ ಜೀವಂತ ಇರುವಾಗಲೇ 2008 ಆಗಸ್ಟ್ 8 ರಂದು ನಕಲಿ ಪ್ರಮಾಣಪತ್ರ
ತಯಾರಿಸಿ 2 ಪಾಲಿಸಿಗಳಿಂದ ಒಟ್ಟು 3,96,922 ರೂ. ಹಣವನ್ನು ಚೆಕ್ ಮೂಲಕ ಪಡೆದುಕೊಂಡಿದ್ದ.ಬಳಿಕ ಆ ಹಣವನ್ನು ತನ್ನ ಹಾಗೂ ಭಾರತಿ ಯಾನೆ ಭಾಗ್ಯಲಕ್ಷ್ಮಿ ಎಂಬವರ ಜಂಟಿ ಖಾತೆಗೆ ಹಾಕಿ ನಗದೀಕರಿಸಿಕೊಂಡಿದ್ದ.
ಈ ಬಗ್ಗೆ ಆಗಿನ ಜೀವ ವಿಮಾ ನಿಗಮದ ಶಾಖಾ ಮ್ಯಾನೇಜರ್ ಗಣೇಶ್ ಕಾಮತ್ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮೂರುವರೆ ವರ್ಷ ಜೈಲು ಶಿಕ್ಷೆ ಹಾಗು 10 ಸಾವಿರ ರೂ.ದಂಡ ವಿಧಿಸಿ 2ನೇ ಸಿಜೆಎಂ ನ್ಯಾಯಾಲಯವು ತೀರ್ಪು ನೀಡಿದೆ.2ನೇ ಆರೋಪಿ ಭಾರತಿ ಯಾನೆ ಭಾಗ್ಯಲಕ್ಷ್ಮೀ ತಲೆಮರೆಸಿಕೊಂಡಿರುವುದರಿಂದ ಆಕೆಯ ವಿರುದ್ಧದ ಪ್ರಕರಣವನ್ನು ಬೇರ್ಪಡಿಸಲಾಗಿದೆ. ಸರ್ಕಾರದ ಪರವಾಗಿ ಮೋಹನ್ ಕುಮಾರ್ ಬಿ. ವಾದಿಸಿದ್ದರು.