ದೇಶದಲ್ಲಿ ಓಮಿಕ್ರಾನ್ ಗೆ ಮೊದಲ ಬಲಿ !! | 73 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು
ದೇಶದಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿಯಾದ ಬಗ್ಗೆ ವರದಿಯಾಗಿದ್ದು, ರಾಜಸ್ಥಾನದ ಉದಯ್‍ಪುರದ 73 ವರ್ಷದ ವ್ಯಕ್ತಿಯೊಬ್ಬರು ಓಮಿಕ್ರಾನ್ ಸೋಂಕಿಗೆ ಸಾವನ್ನಪ್ಪಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ವರದಿ ಹೊರಬಿದ್ದಿದೆ.
ಓಮಿಕ್ರಾನ್ ಸೋಂಕಿತ ವ್ಯಕ್ತಿ ಉದಯ್‍ಪುರದ ಮಹಾರಾಣಾ ಭೂಪಾಲ್ ಆಸ್ಪತ್ರೆಗೆ ಡಿಸೆಂಬರ್ 15 ರಂದು ದಾಖಲಾಗಿದ್ದರು. ಬಳಿಕ 2 ಬಾರಿ ಕೊರೊನಾ ಟೆಸ್ಟ್ ನಡೆಸಿದ ವೇಳೆ ಕೊರೊನಾ ನೆಗೆಟಿವ್ ವರದಿಯಾಗಿತ್ತು. ಆದರೆ ಡಿಸೆಂಬರ್ 31 ರಂದು ಸೋಂಕಿತ ವ್ಯಕ್ತಿ ಮರಣ ಹೊಂದಿದ್ದು, ಅವರಿಗೆ ಮಧುಮೇಹದಂತಹ ಕೊಮೊರ್ಬಿಡಿಟಿ ಕಾಯಿಲೆ ಇದ್ದುದರಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದು, ತಾಂತ್ರಿಕವಾಗಿ ಇದು ಓಮಿಕ್ರಾನ್ ಸಂಬಂಧಿತ ಸಾವು. ಅವರಿಗೆ ವಯಸ್ಸಾಗಿತ್ತು, ಮಧುಮೇಹದಂತಹ ಕೊಮೊರ್ಬಿಡಿಟಿ ಕೂಡ ಇತ್ತು. ಜೊತೆಗೆ ಓಮಿಕ್ರಾನ್ ಸೋಂಕು ಕಂಡುಬಂದ ಬಳಿಕ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮಹಾರಾಣಾ ಭೂಪಾಲ್ ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿ ಪ್ರಕಾರ, ಸೋಂಕಿತ ವ್ಯಕ್ತಿ ಎರಡು ಡೋಸ್ ಲಸಿಕೆ ಪಡೆದಿದ್ದರು. ಬಳಿಕ ಡಿಸೆಂಬರ್ 15 ರಂದು ಇವರಿಗೆ ಮೊದಲ ಬಾರಿ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಜಿನೋಮ್ ಸೀಕ್ವೆನ್‍ನಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿತ್ತು. ಓಮಿಕ್ರಾನ್‍ಗೆ ಚಿಕಿತ್ಸೆ ಪಡೆದ ಬಳಿಕ ಜ್ವರ, ಕೆಮ್ಮು, ನ್ಯುಮೋನಿಯಾ ಕಂಡು ಬಂದಿತ್ತು. ಮಧುಮೇಹದಂತಹ ಕೊಮೊರ್ಬಿಡಿಟಿ ಕಾಯಿಲೆ ಕೂಡ ಇದ್ದುದರಿಂದ ಓಮಿಕ್ರಾನ್‍ಗೆ ಚಿಕಿತ್ಸೆ ಫಲಿಸದೆ ಮರಣ ಹೊಂದಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.