ಹೆಣ್ಣುಮಕ್ಕಳ ವಿವಾಹ ವಯಸ್ಸಿನ ಮಿತಿ 21ಕ್ಕೆ ಏರಿಕೆ ಹಿನ್ನೆಲೆ | ಹೆಣ್ಮಕ್ಕಳಿಗೆ ಮದುವೆ ಮಾಡಲು ಮುಗಿಬಿದ್ದ ಪೋಷಕರು!
ಹೈದರಾಬಾದ್ : ಕೇಂದ್ರ ಸರ್ಕಾರವು ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿಯನ್ನು 18ರಿಂದ 21ಕ್ಕೆ ಏರಿಸಲು ನಿರ್ಧರಿಸಿದೆ. ಈ ಬಗ್ಗೆ ಮಸೂದೆ ಸಿದ್ಧಪಡಿಸಿದ್ದು, ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗಾಗಿ ಕಳುಹಿಸಲಾಗಿದೆ.
ಮುಂದಿನ ಬಜೆಟ್ ಅಧಿವೇಶನದಲ್ಲಿ ಮಸೂದೆ ಸಂಸತ್‌ನ ಒಪ್ಪಗೆ ಪಡೆಯುವ ನಿರೀಕ್ಷೆ ಇದೆ, ಆದರೆ ನಮ್ಮ ದೇಶದ ಮುತ್ತಿನ ನಗರಿ, ಚಾರ್ ಮಿನಾರ್ ನಗರಿ ಎಂದೇ ಖ್ಯಾತವಾಗಿರುವ ಹೈದರಾಬಾದ್ ನಗರದಲ್ಲೀಗ ಪೋಷಕರು ತಮ್ಮ ಮಕ್ಕಳಿಗೆ ಮದುವೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ಹೈದರಾಬಾದ್ ಮಸೀದಿಗಳಲ್ಲಿ ಬಿಡುವಿಲ್ಲದೆ ಮದುವೆಗಳು ನಡೆಯುತ್ತಿವೆ. ಪೋಷಕರ ಈ ತರಾತುರಿಗೆ ಕಾರಣವಾಗಿರುವುದು ಕೇಂದ್ರ ಸರ್ಕಾರದ ಉದ್ದೇಶಿತ ಬಾಲ್ಯ ವಿವಾಹ ತಡೆ ಕಾಯಿದೆಯ ತಿದ್ದುಪಡಿ ಮಸೂದೆ ಹಾಗೂ ದೇಶದಲ್ಲಿ ಹೆಣ್ಣು ಮಕ್ಕಳ ವಿವಾಹ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ ಮಸೂದೆಯಾಗಿದೆ.
ಹೆಣ್ಣು ಮಕ್ಕಳ ವಿವಾಹ ವಯಸ್ಸು ಏರಿಕೆಯು ಎಲ್ಲ ಧರ್ಮದವರಿಗೂ ಅನ್ವಯವಾಗಲಿದ್ದು, ಹೀಗಾಗಿ ಹೈದರಾಬಾದ್ ಓಲ್ಡ್ ಸಿಟಿಯ ಮಸೀದಿಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮದುವೆ ಮಾಡಲು ಮುಗಿ ಬಿದ್ದಿದ್ದಾರೆ.