ನಾಪತ್ತೆಯಾಗಿದ್ದ ಪತ್ನಿ ಮರಳಿ ಸಿಕ್ಕಾಗ ಗಂಡನ ಖುಷಿಗೆ ಪಾರವೇ ಇರಲಿಲ್ಲ!! ಏಳು ವರ್ಷಗಳಿಂದ ದೂರವಾಗಿದ್ದ ದಾಂಪತ್ಯ ಮತ್ತೊಮ್ಮೆ ಒಂದಾದಾಗ!!??
ನಿಜವಾದ ನಿಷ್ಕಲ್ಮಶ ಪ್ರೀತಿಗೆ ಎಂದಿಗೂ ಸಾವಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಚಿಕಿತ್ಸೆಗೆಂದು ದಾಖಲಾಗಿ,ಸುಮಾರು ಏಳು ವರ್ಷಗಳ ಕಾಲ ಗಂಡನಿಂದ ದೂರವಾಗಿದ್ದ ಮಹಿಳೆ ಮರಳಿ ತನ್ನ ಗಂಡನ ಬಳಿ ಸೇರಿದ ಘಟನೆಯೊಂದು ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಮೂಲತಃ ತಮಿಳುನಾಡು ಮೂಲದವರಾದ ಮುತ್ತಮ್ಮ ಎಂಬ ಮಹಿಳೆ ಏಳು ವರ್ಷಗಳ ಹಿಂದೆ ಚಿಕಿತ್ಸೆಗೆಂದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಾಗಿ ಆ ಬಳಿಕ ನಾಪತ್ತೆಯಾಗಿದ್ದರು.ಈ ಬಗ್ಗೆ ಆಕೆಯ ಪತಿ ರಾಜಪ್ಪ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಿದ್ದರು. ಮನೆ ಮಂದಿ, ಕುಟುಂಬಸ್ಥರೆಲ್ಲ ಸೇರಿ ಎಲ್ಲಾ ಕಡೆಗಳಲ್ಲೂ ಹುಡುಕಾಡಿದ್ದರೂ ಕೂಡಾ ಮುತ್ತಮ್ಮ ಬಗೆಗೆ ಯಾವ ಸುಳಿವು ಸಿಕ್ಕಿರಲಿಲ್ಲ.
ಇತ್ತ ನಾಪತ್ತೆಯಾಗಿ ಅಲೆಯುತ್ತಿದ್ದ ಮುತ್ತಮ್ಮ ಮಡಿಕೇರಿಯ ಕಸದ ತೊಟ್ಟಿಯೊಂದರ ಬಳಿ ನಡೆಯಲಾಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ಮಹಿಳೆಯ ಅಸಹಾಯಕತೆಯನ್ನು ಕಂಡು ಮಡಿಕೇರಿಯ ತನಲ್ ಅನಾಥಶ್ರಮ ಆಕೆಗೆ ಚಿಕಿತ್ಸೆ ಕೊಡಿಸಿ ಮನೆಯ ವಿಳಾಸ ಹುಡುಕುವ ಪ್ರಯತ್ನದಲ್ಲಿತ್ತು.
ಕೊನೆಗೆ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರ ಮುಖಾಂತರ ಆಕೆಯ ಮನೆಯ ವಿಳಾಸ ಕಂಡುಕೊಂಡು ಪೊಲೀಸರ ಮೂಲಕ ಮನೆಯವರಿಗೆ ತಿಳಿಸಲಾಗಿತ್ತು. ತನ್ನ ಪತ್ನಿ ಬದುಕಿದ್ದಾಳೆ ಎಂದು ತಿಳಿಯುತ್ತಿದ್ದಂತೆ ರಾಜಪ್ಪ ಹಾಗೂ ಮನೆಯವರ ಖುಷಿಗೆ ಪಾರವೇ ಇರಲಿಲ್ಲ. ರಾತ್ರೋ ರಾತ್ರಿ ಕುಟುಂಬ ಸಮೇತ ಕೊಡಗಿಗೆ ಬಂದ ರಾಜಪ್ಪ, ಏಳು ವರ್ಷಗಳಿಂದ ದೂರವಾಗಿ ಉಳಿದಿದ್ದ ಪತ್ನಿಯ ಕಂಡು ಅಪ್ಪಿ ಹಿಡಿದು ತಲೆ ಸವರಿ ಮುದ್ದಿಸಿದಲ್ಲದೇ ದೇವರಿಗೆ ಹಾಗೂ ಆಕೆಯನ್ನು ರಕ್ಷಿಸಿದ ಅನಾಥಶ್ರಮದ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಪತ್ನಿ ಮರಳಿ ಸಿಕ್ಕ ಖುಷಿಗೆ ಅಲ್ಲಿ ಭಾಷ್ಪ ಆನಂದವೇ ಸುರಿಯಿತು.