ಬೆಂಗಳೂರಲ್ಲಿ ರೋಡಿಗಿಳಿದ ಎಲೆಕ್ಟ್ರಿಕ್ ಬಸ್‌ಗಳು | ಮಾಲಿನ್ಯ ನಿಯಂತ್ರಣ ಉದ್ದೇಶಿತ ‘ಕ್ಲೀನ್ ಬಸ್‌’ ಗಳಲ್ಲಿದೆ ಈ ಎಲ್ಲಾ ವಿಶೇಷತೆ !

ಇದು ಎಲೆಕ್ಟ್ರಿಕ್ ಯುಗ. ಎಲೆಕ್ಟ್ರಿಕ್ ಸೈಕಲ್ ಬೀದಿಗೆ ಬಂತು, ನಂತರ ಎಲೆಕ್ಟ್ರಿಕ್ ಬೈಕ್ ಬೀದಿ ಸವಾರಿ ಮಾಡಿ ಆಯ್ತು. ಆಮೇಲೆ ಅವುಗಳ ಜಾಗಕ್ಕೆ ಕಾರ್ ಇಳಿಯಿತು, ಇದೀಗ ಎಲೆಕ್ಟ್ರಿಕ್ ಬಸ್‌ಗಳು ರೋಡಿಗಿಳಿಯುವ ಕಾಲ. ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ ಪೊಳ್ಯೋಷನ್ ಕಮ್ಮಿ ಮಾಡಿಕೊಳ್ಳುವ ಬಹುಕಾಲದ ಆಸೆಗೆ ನಿನ್ನೆಗೆ ನಾಂದಿ ಹಾಡಿದೆ. ನಿನ್ನೆ ಡಿಸೆಂಬರ್ 27ರಂದು ಬೆಂಗಳೂರು ನಗರದಲ್ಲಿ ಬರೋಬ್ಬರಿ 40 ಎಲೆಕ್ಟ್ರಿಕ್ ಬಸ್‌ಗಳು ನಿನ್ನೆಯಿಂದ ಸಂಚರಿಸಲು ಆರಂಭಗೊಂಡಿದ್ದು ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಇನ್ನೂ 50 ಬಸ್‌ಗಳು ಕೆಲವೇ ದಿನಗಳಲ್ಲಿ ಮಹಾನಗರಿಯ ಜನರ ಸೇವೆಗೆ ಬಂದು ನಿಲ್ಲಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಾರಿಗೆ ಸಂಸ್ಥೆಗಳನ್ನು ಲಾಭದಾಯಕವನ್ನಾಗಿಸಬೇಕಿದೆ. ಮಾಲಿನ್ಯರಹಿತ ಮಾಡಬೇಕಿದೆ ಎಂದರು.

ಮೆಟ್ರೋ ಪ್ರದೇಶ ಸೇರಿದಂತೆ ಬೆಂಗಳೂರು ನಗರದ ಪ್ರಮುಖ ಪ್ರದೇಶಗಳಾದ ಕೆಂಗೇರಿ, ಯಶವಂತಪುರ, ಕೆ ಆರ್ ಪುರಂ ಘಟಕದಲ್ಲಿ ಈ ಎಲೆಕ್ಟ್ರಿಕ್ ಬಸ್‌ಗಳು ಸಾರ್ವಜನಿಕರಿಗೆ ಸೇವೆ ಒದಗಿಸಲಿವೆ. ಈ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಧ್ವನಿವರ್ಧಕ, ಸಿಸಿಟಿವಿ ಮುಂತಾದ ಸೌಲಭ್ಯಗಳನ್ನು ಸಹ ಕಲ್ಪಿಸಲಾಗಿದ್ದು ಪರಿಸರ ಮಾಲಿನ್ಯ ಮಾಡದ ಎಲೆಕ್ಟ್ರಿಕ್ ಬಸ್ ಇದಾಗಿದೆ.

ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಈ ಬಸ್‌ಗಳ ಕಾರ್ಯಾಚರಣೆಗೆ 50 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡುತ್ತಿದೆ. ಭಾರತ ಸರ್ಕಾರದ ಸ್ವಾಧೀನಕ್ಕೊಳಪಟ್ಟಿರುವ   M/s. ಎನ್‌ಟಿಪಿಸಿ ವ್ಯಾಪಾರ್ ವಿದ್ಯುತ್ ನಿಗಮ್ ಲಿಮಿಟೆಡ್,  ಈ ಬಸ್‌ಗಳನ್ನು ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ) ಮಾದರಿಯಲ್ಲಿ ಪ್ರತಿ ಕಿ.ಮೀಗೆ ರೂ.51.67 ದರದಲ್ಲಿ ಪ್ರತಿದಿನ ಇಂತಿಷ್ಟು ಅಂತ ಕಿಲೋಮೀಟರ್‌ಗಳಿಗೆ 10 ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸಲಿದೆ.

ಎಲೆಕ್ಟ್ರಿಕ್ ಬಸ್‌ಗಳಲ್ಲಿ ಎಸಿ ಸೌಲಭ್ಯ ಅಳವಡಿಸಲಾಗಿಲ್ಲ, ಆದರೆ ವಾಹನ ಟ್ರ್ಯಾಕಿಂಗ್ ಸಾಧನವನ್ನು ಹೊಂದಿವೆ. ಅಲ್ಲದೇ ತುರ್ತು ಸಂದರ್ಭದಲ್ಲಿ ಬಳಸಬಹುದಾದ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಸಹ ಸೇಫ್ಟಿಗಾಗಿ ಈ ಬಸ್ಸುಗಳು ಹೊಂದಿರಲಿವೆ.

Leave A Reply

Your email address will not be published.