ಮಂಗಳೂರು ವಿವಿ : ಎಸ್‌ಸಿಎಸ್‌ಟಿ ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಖರೀದಿಯಲ್ಲಿ ಅಕ್ರಮ!

ಮಂಗಳೂರು : ಯುಜಿಸಿ ಅನುದಾನದಲ್ಲಿ ಸೆಡ್ಯುಲ್ಡ್ ಕಾಸ್ಟ್ ಸಬ್ ಪ್ಲಾನ್(ಎಸ್‌ಸಿಎಸ್‌ಪಿ) ಮತ್ತು ಟ್ರೈಬಲ್ ಸಬ್ ಪ್ಲಾನ್(ಐಎಸ್‌ಪಿ) ಯೋಜನೆಯಲ್ಲಿ ಮಂಗಳೂರು ವಿವಿಯ ಎಸ್‌ಸಿ.ಎಸ್‌ಟಿ ವಿದ್ಯಾರ್ಥಿಗಳಿಗೆ ವಿತರಿಸಲು ಉದ್ದೇಶಿಸಿರುವ ಬಹುಕೋಟಿ ರೂಪಾಯಿ ಮೊತ್ತದ ಲ್ಯಾಪ್‌ಟಾಪ್ ಖರೀದಿಯಲ್ಲಿ ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಅಕ್ರಮದ ವಾಸನೆಯಲ್ಲಿ ವಿವಿ ಉಪಕುಲಪತಿ, ಸಿಂಡಿಕೇಟ್ ಸದಸ್ಯ, ಕಿಯೋನಿಕ್ಸ್ ಅಧ್ಯಕ್ಷರ ಹೆಸರು ಕೇಳಿಬರುತ್ತಿದೆ.
2021ರ ಸೆ.28 ರಂದು ಇ-ಟೆಂಡರ್ ಕರೆದು ವಿವಿ ಎಸ್‌ಸಿಎಸ್‌ಟಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಲ್ಯಾಪ್‌ಟಾಪ್ ಖರೀದಿಗೆ ಯೋಜನೆ ರೂಪಿಸಲಾಗಿತ್ತು. ಟೆಂಡರ್ ಕಾರ್ಯ ಪೂರ್ಣಗೊಂಡು ಇನ್ನೇನು ಲ್ಯಾಪ್‌ಟಾಪ್ ವಿತರಿಸಲು ಸಜ್ಜಾಗುತ್ತಿದ್ದಂತೆ ವಿವಿ ಉಪಕುಲಪತಿಗಳು ಏಕಾಏಕಿ ಟೆಂಡರ್‌ನ್ನು ಸ್ಥಗಿತಗೊಳಿಸಿ ಹೆಚ್ಚುವರಿ ಮೊತ್ತಕ್ಕೆ ಕಿಯೋನಿಕ್ಸ್ ಸಂಸ್ಥೆಯಿಂದ ಲ್ಯಾಪ್‌ಟಾಪ್ ಖರೀದಿಗೆ ಏಕಾಏಕಿ ಏಕ ನಿರ್ಣಯ ಕೈಗೊಂಡಿರುವುದರ ಹಿಂದೆ ಕೋಟ್ಯಾಂತರ ರೂಪಾಯಿ ಅಕ್ರಮದ ವಾಸನೆ ಬಡಿಯುತ್ತಿದೆ.

ಸಿಸಿ ಕ್ಯಾಮರ ಹಗರಣ ಹೋಲಿಕೆ
ಮಂಗಳೂರು ವಿವಿ ಈ ಹಿಂದಿನ ಉಪಕುಲಪತಿ ಪ್ರೊ. ಬೈರಪ್ಪ ಕಾಲವಧಿಯಲ್ಲಿ ನಡೆದ ಸೋಲಾರ್, ಸಿಸಿ ಕ್ಯಾಮರಾ ಖರೀದಿ ಪ್ರಕರಣದಂತೆ (ಪ್ರಸ್ತುತ ಈ ಹಗರಣ ರಾಜ್ಯಪಾಲರ ಅಂಗಳದಲ್ಲಿ ವಿಚಾರಣಾ ಹಂತದಲ್ಲಿದೆ) ಕಂಡುಬಂದಿದೆ. ಮಂಗಳುರು ವಿವಿ ಅಧಿಕಾರಿಗಳು ಎಸ್‌ಸಿಎಸ್‌ಟಿ ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಖರೀದಿಯಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರ ನಡೆಸಿ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ಮಂಗಳಗಂಗೋತ್ರಿ ಎಸ್‌ಸಿ.ಎಸ್‌ಟಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ತಂಡ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ನೀಡಿದೆ. ಈ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ವಿವಿಯ ಕೆಲವು ಎಸ್‌ಸಿಎಸ್‌ಟಿ ವಿದ್ಯಾರ್ಥಿ, ಇತಿಹಾಸ ವಿಭಾಗದ ಪ್ರೋಪೆಸರ್ ಹಾಗೂ ಓರ್ವ ಕಾನೂನು ಪಂಡಿತ ಸಿಂಡಿಕೇಟ್ ಸದಸ್ಯರನ್ನೊಳಗೊಂಡ ತಂಡ ಇಡೀ ಪ್ರಕರಣದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂಬುದಾಗಿ ವಿವಿಗೆ ವಿವರಣೆ ನೀಡಿ ಪ್ರಕರಣ ಮುಚ್ಚಿಹಾಕಲು ವ್ಯವಸ್ಥೆ ಮಾಡಿದೆ.

ಲ್ಯಾಪ್‌ಟಾಪ್ ಖರೀದಿಗೆ ವಿವಿಯಿಂದ ಟೆಂಡರ್

ಆದರೆ ಒರ್ಕಿಡ್ ಸಂಸ್ಥೆ 62,950 ಕನಿಷ್ಟ ದರಪಟ್ಟಿಯಲ್ಲೇ ಕೀಬೋಡ್ ಬ್ರೈಟ್ ಲೈಟ್ ಅಳವಡಿಸಿ ನೀಡುವಂತೆ ತಿಳಿಸಿದರೂ ವಿವಿ ಅಧಿಕಾರಿಗಳು ಮಾತ್ರ ಒಪ್ಪಿಗೆ ಸೂಚಿಸಿಲ್ಲ. ಈ ಲೈಟ್ ಅಳವಡಿಕೆಗೆ ಕೇವಲ 500 ರೂ. ಮಾತ್ರ ವೆಚ್ಚ. ಆದರೆ 62,950 ಕನಿಷ್ಟ ದರಪಟ್ಟಿಯ ಲ್ಯಾಪ್‌ಟಾಪ್‌ನಲ್ಲಿ 500 ರೂ. ವೆಚ್ಚದ ಲೈಟ್ ಇಲ್ಲ ಎಂಬ ಕಾರಣಕ್ಕೆ 99,750ರೂ. ದರಪಟ್ಟಿಯಲ್ಲಿ ವಿವಿ ಪಕುಲಪತಿಗಳು ಟೆಂಡರ್ ನೀಡಿದರೆ 4ಜಿ ನಿಯಮ ಅಳವಡಿಸಿ ಕಿಯೋನಿಕ್ಸ್ ಸಂಸ್ಥೆಯಿಂದ ಲ್ಯಾಪ್‌ಟಾಪ್ ಖರೀದಿಸಿದೆ.
ಖರೀದಿ ವೇಳೆ ಮಾರುಕಟ್ಟೆ ಬೆಲೆಗಿಂತ ಅಧಿಕಬೆಲೆಯಿರುವುದರಿಂದ ಕಿಯೋನಿಕ್ಸ್‌ಯ ಜತೆ ವಿವಿ ವ್ಯವಹರಿಸದಂತೆ ವರ್ಷದ ಹಿಂದೆ ಸಿಂಡಿಕೇಟ್ ನಿರ್ಣಯವೂ ಆಗಿತ್ತು. ಕಿಯೋನಿಕ್ಸ್ ಸಂಸ್ಥೆಯಿಂದ ಯಾವುದೇ ಪರಿಕರ, ವಸ್ತುಗಳನ್ನು ವಿವಿ ಖರಿದಿಸದಂತೆ ಈ ಹಿಂದೆಯೇ ಮಂಗಳೂರು ವಿವಿ ಸಿಂಡಿಕೇಟ್ ನಿರ್ಣಯವಾಗಿತ್ತು.

ಉಪಕುಲಪತಿಗಳಿಂದ ಅಧಿಕಾರ ದುರ್ಬಳಕೆ

ಮಂಗಳೂರು ವಿವಿಗೆ ಸಂಬಂಧಿಸಿದ ಯಾವುದೇ ವಸ್ತು ಖರೀದಿ ವಿಚಾರದಲ್ಲಿ 1 ಲಕ್ಷ ರೂ. ವರೆಗೆ ಉಪಕುಲಪತಿಗಳಿಗೆ ಅಧಿಕಾರ, 1ರಿಂದ 5 ಲಕ್ಷ ವರೆಗೆ ಜಿಲ್ಲಾ ಬುಲೆಟಿನ್ ಟೆಂಡರ್, 5 ಲಕ್ಷ ರೂ.ಕ್ಕಿಂತ ಅಧಿಕ ಖರೀದಿ ಪ್ರಕ್ರೀಯೆಗೆ ವಿವಿ ಸಿಂಡಿಕೇಟ್ ನಿರ್ಣಯ ಅಗತ್ಯ. ಆದರೆ ಲ್ಯಾಪ್‌ಟಾಪ್ ಖರೀದಿಯಲ್ಲಿ ಈ ನಿಯಮವನ್ನೇ ಉಪಕುಲಪತಿಗಲು ಗಾಳಿಗೆ ತೂರಿದ್ದಾರೆ. ಸರ್ಕಾರದ ಅಂಗಸಂಸ್ಥೆಯಾಗಿದ್ದರಿಂದ ಕಿಯೋನಿಕ್ಸ್ ಮೂಲಕ 1ಕೋ.ರೂವರೆಗಿನ ಖರೀದಿಗೆ ಟೆಂಡರ್ ನೀಡದೆ ನೇರವಾಗಿ ಖರೀಸಿಸುವ ನಿಯಮವೇ 4ಜಿ ನಿಯಮ. ಒರ್ಕಿಡ್ ಸಂಸ್ಥೆ ಯಿಂದ 62,950 ಕನಿಷ್ಟ ದರಪಟ್ಟಿಯ ಟೆಂಡರ್ ಹಿಂಪಡೆದು 4ಜಿ ನಿಯಮದ ಪ್ರಕಾರ ಕಿಯೋನಿಕ್ಸ್ ಸಂಸ್ಥೆಯಿಂದ ಇದೇ ಮಾನದಂಡದ ಲಾಪ್‌ಟಾಪ್‌ನ್ನು ಸಿಂಡಿಕೇಟ್ ನಿರ್ಣಯ ಪಡೆಯದೆ 99,750ರೂ.ಗೆ ಮೊದಲ ಹಂತದಲ್ಲಿ 100 ಲ್ಯಾಪ್‌ಟಾಪ್ ಏಕಾಏಕಿ ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಿದೆ. ಒಟ್ಟು 3 ಹಂತದಲ್ಲಿ 330 ಲಾಪ್‌ಟಾಪ್ ಖರೀದಿಗೂ ವಿವಿ ಯೋಜನೆ ರೂಪಿಸಿದೆ. ಕೇವಲ 62,950 ಕನಿಷ್ಟ ದರಪಟ್ಟಿಯ ಲಾಪ್‌ಟಾಪ್‌ನ್ನು ಕೈಬಿಟ್ಟು ಅದೇ ಮಾನದಂಡಗಳಿರುವ ಲ್ಯಾಪ್‌ಟಾಪ್‌ನ್ನು ಕಿಯೋನಿಕ್ಸ್ ಸಂಸ್ಥೆಯಿಂದ 99,750ರೂ.ಗೆ ಖರೀದಿಸಿರುವುದು ಅಕ್ರಮ. ಲ್ಯಾಪ್‌ಟಾಪ್ ಖರೀದಿಗೆ ಸಿಂಡಿಕೇಟ್ ನಿರ್ಣಯ ಪಡೆದು ಟೆಂಡರ್‌ಗೆ ಟೆಂಡರ್ ಕರೆದು ಕನಿಷ್ಟ ದರಪಟ್ಟಿ ಅಂಗೀಕರಿಸಿ ಖರೀದಿ ಸಮಿತಿ ಸಭೆಗೆ ಮಂಡಿಸಿದ ನಂತರ ಸಿಂಡಿಕೇಟ್ ಸಮಿತಿ ಗಮನಕ್ಕೆ ನೀಡಿದೆ ಏಕಾಏಕಿ ಟೆಂಡರ್ ಹಿಂಪಡೆದಿದ್ದು ಅಕ್ರಮ. ವಿವಿ ಸಿಂಡಿಕೇಟ್ ಸಮಿತಿಯ ಒಪ್ಪಿಗೆ ಪಡೆಯದೆ ಹಾಗೂ ಗಮನಕ್ಕೆ ತರದೆ ಕಿಯೋನಿಕ್ಸ್ ಸಂಸ್ಥೆಗೆ 4ಜಿ ನಿಯಮದ ಮೂಲಕ ಲ್ಯಾಪ್‌ಟಾಪ್ ಖರೀದಿಸಿದ್ದು ಅಕ್ರಮ. ಈ ಎಲ್ಲಾ ಅಕ್ರಮಗಳು ಈ ಹಿಂದಿನ ವಿ.ಸಿ ಬೈರಪ್ಪರ ಕಾಲದ ಸೋಲಾರ್, ಸಿಸಿ ಕ್ಯಾಮರ ಹಗರಣದಂತೆ ಕಂಡುಬಂದಿದ್ದು, ಪ್ರಕರಣದಲ್ಲಿ ವಿವಿ ಕುಲಪತಿ, ಸಿಂಡಿಕೇಟ್ ಸದಸ್ಯ, ಕಿಯೋನಿಕ್ಸ್ ಅಧ್ಯಕ್ಷರ ಹೆಸರು ಮುನ್ನೆಲೆಗೆ ಬಂದಿದೆ.

Leave A Reply

Your email address will not be published.