ಕುಂದಾನಗರಿಯಲ್ಲಿ MES ಪುಂಡರ ಅಟ್ಟಹಾಸ | ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಹಾನಿಗೊಳಿಸಿದ ಕಿಡಿಗೇಡಿಗಳು | ಬಸ್ ಮೇಲೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

ಕುಂದಾನಗರಿಯಲ್ಲಿ ಒಮ್ಮಿಂದೊಮ್ಮೆಲೆ MES ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಬೆಳಗಾವಿ ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ತಡರಾತ್ರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ.

ಮಧ್ಯರಾತ್ರಿ ದುಷ್ಕರ್ಮಿಗಳು ಆಗಮಿಸಿ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಹಾನಿಪಡಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ವಿಕೃತಿಗೊಳಿಸಿ ದುಷ್ಕೃತ್ಯವೆಸಗಿದ್ದಾರೆ. ಇದೀಗ ಸ್ಥಳಕ್ಕೆ ಟೀಳಕವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಹಾನಿಗೊಳಿಸಿರುವ ಕುರಿತಂತೆ ಕನ್ನಡಪರ ಹೋರಾಟಗಾರರು ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಮತ್ತೊಂದೆಡೆ ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ, ಆರೋಪ ಘಟನೆಯನ್ನು ಖಂಡಿಸಿ ತಡರಾತ್ರಿಯಿಂದ ಬೆಳಗಾವಿಯಲ್ಲಿ ಎಂಇಎಸ್, ಶ್ರೀರಾಮಸೇನೆ ಹಿಂದೂಸ್ತಾನ್ ಸೇರಿ ವಿವಿಧ ಸಂಘಟನೆಗಳ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 20ಕ್ಕೂ ಹೆಚ್ಚು ವಾಹನಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಿಂಸಾಚಾರ ಕೃತ್ಯವೆಸಗಿದ್ದಾರೆ.

ಅಲ್ಲದೇ ನಗರದ ವಿವಿಧೆಡೆ ಲಾಡ್ಜ್‌ಗಳ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದ್ದು, ಆರ್‌ಟಿಒ ವೃತ್ತದ ಬಳಿಯ ನಿರ್ಮಾಣ ಹಂತದ ಪೊಲೀಸ್ ಕಾಂಪ್ಲೆಕ್ಸ್ ಪಾರ್ಕಿಂಗ್‍ನಲ್ಲಿ ವಾಹನಗಳು ಜಖಂಗೊಂಡಿದೆ. ಇನ್ನೂ ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳು ಪತ್ತೆಗೆ ಬಲೆ ಬೀಸಿದ್ದಾರೆ.

ಬೆಳಗಾವಿ ಹೊರವಲಯದಲ್ಲಿ ಕೂಡ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಕಿಡಿಕೇಡಿಗಳು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಓರ್ವ ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದುಕೊಂಡು ಬಸ್‍ಗೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ದುಷ್ಕರ್ಮಿಗಳ ಅಟ್ಟಹಾಸಕ್ಕೆ ನಲುಗಿ ಹೋಗಿರುವ ಬೆಳಗಾವಿ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆಗೊಳಿಸಲಾಗಿದ್ದು, ನಾಳೆ ಬೆಳಗ್ಗೆ 8 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದೀಗ ಕುಂದಾನಗರಿ ಬೆಳಗಾವಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಈ ಘಟನೆಯನ್ನು ಸಿಎಂ ಬೊಮ್ಮಾಯಿ ವ್ಯಾಪಕವಾಗಿ ಖಂಡಿಸಿದ್ದಾರೆ. ಅದಲ್ಲದೆ ಪೊಲೀಸರು ಇದೀಗ 27 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.