ಇಂಟರ್ನೆಟ್ ವೇಗದಲ್ಲಿ ವಿಶ್ವದಾಖಲೆ ನಿರ್ಮಿಸಿದೆ ಈ ದೇಶ | ಕೇವಲ ಒಂದೇ ಸೆಕೆಂಡ್ ನಲ್ಲಿ ಬರೋಬ್ಬರಿ 57,000 ಸಿನಿಮಾ ಡೌನ್ಲೋಡ್!!
ಈ ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್ ಜನಜೀವನವನ್ನು ಆವರಿಸಿಬಿಟ್ಟಿದೆ. ಫುಡ್ ಆರ್ಡರ್, ಗೇಮ್, ಸಿನಿಮಾ, ಮೀಟಿಂಗ್, ಕೆಲಸ, ಶಾಪಿಂಗ್ ಎಲ್ಲದಕ್ಕೂ ಬೇಕು ಇಂಟರ್‌ನೆಟ್. ಇಂತಹ ಇಂಟರ್‌ನೆಟ್ ಕ್ಷಣಕಾಲ ಸ್ವಲ್ಪ ನಿಧಾನವಾದರೆ ಆಗುವ ಅನುಭವ ಎಷ್ಟು ಕೆಟ್ಟದಾಗಿರುತ್ತದೆ ಅಲ್ವಾ? ಹಾಗಾಗಿ ಸ್ಪೀಡ್ ಇಂಟರ್‌ನೆಟ್ ಇದ್ದರೆ ಪ್ರಪಂಚವೇ ಅಂಗೈಲಿ. ಎಲ್ಲವೂ ಲೀಲಾಜಾಲ ಹಾಗೆಯೇ ಸುಸೂತ್ರ.
ಆದರೆ ಇದೀಗ ಪ್ರಪಂಚದಾದ್ಯಂತದ ವರ್ಕ್‌ಫ್ರಂ ಹೋಂ ಸಾಮಾನ್ಯವಾಗಿರುವುದರಿಂದ ಹೆಚ್ಚಿನ ಇಂಟರ್ನೆಟ್ ವೇಗವು ಇಂದಿನ ಅಗತ್ಯವಾಗಿದೆ. ಇದರ ಮೇಲೆ ಕೆಲಸ ಮಾಡುತ್ತಾ ಟೆಕ್ನಾಲಜಿ ಅಭಿವೃದ್ಧಿಪಡಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಸಾಮಾನ್ಯವಾಗಿ ವೀಡಿಯೋಗಳನ್ನು ಡೌನ್‌ಲೋಡ್ ಮಾಡುವುದೇ ಕಷ್ಟ. ಅದರಲ್ಲೂ ಎಚ್‌ಡಿ ಗುಣಮಟ್ಟದ ವೀಡಿಯೋವಾದರೆ ಮತ್ತಷ್ಟು ಕಷ್ಟ. ಆದರೆ ಇಲ್ಲೊಂದು ಕಡೆ ಕೇವಲ ಒಂದು ಸೆಕೆಂಡ್ ನಲ್ಲಿ 57,000 ಸಿನಿಮಾಗಳು ಡೌನ್ಲೋಡ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದೆ.
ಹೌದು, ಈಗ ಜಪಾನ್‌ನ ಎಂಜಿನಿಯರ್‌ಗಳ ತಂಡವು ಅತಿ ವೇಗದ ಡೇಟಾ ವರ್ಗಾವಣೆಯನ್ನು ಸಾಧಿಸಿದೆ. ಅವರ ದಾಖಲೆಯು ಇಂಟರ್‌ನೆಟ್ ವೇಗದಲ್ಲಿ ವಿಶ್ವ ದಾಖಲೆ. ಜಪಾನಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇನ್ಸಾರ್ಮೇಶನ್ ಅಂಡ್ ಕಮ್ಯೂನಿಕೇಶನ್ ಟೆಕ್ನಾಲಜಿ, (NICT) ಯ ಎಂಜಿನಿಯರ್ ಗಳು ಈ ಅದ್ಭುತ ಸಾಧನೆಯನ್ನು ಸಾಧಿಸಿದ್ದಾರೆ.
ಇತ್ತೀಚೆಗೆ ನಡೆದ ಆಪ್ಟಿಕಲ್ ಫೈಬರ್ ಕಮ್ಯುನಿಕೇಶನ್ ಕುರಿತ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನಾ ಪ್ರಬಂಧವಾಗಿ ಪ್ರಕಟಿಸಲಾಗಿದೆ. ಸಂಶೋಧನೆಯಲ್ಲಿ ಉಲ್ಲೇಖಿಸಿರುವಂತೆ, NICT ತಂಡವು ಸುಮಾರು 3,000 ಕಿಲೋಮೀಟರ್ ದೂರದಲ್ಲಿ ಡೇಟಾ ವರ್ಗಾವಣೆಗಾಗಿ ಪ್ರತಿ ಸೆಕೆಂಡಿಗೆ 319 ಟೆರಾಬಿಟ್ಸ್ (Tb/s) ವೇಗವನ್ನು ದಾಖಲಿಸಿದೆ.
ಸಾಮಾನ್ಯ ತಾಮ್ರದ ಕೇಬಲ್‌ಗಳ ಬದಲಿಗೆ ಬೆಳಕನ್ನು ಬಳಸಿ ಡೇಟಾವನ್ನು ವರ್ಗಾಯಿಸಲು 0.125 ಮಿಮೀ ಸ್ಟ್ಯಾಂಡರ್ಡ್ ಹೊರ ವ್ಯಾಸದ 4-ಕೋರ್ ಆಪ್ಟಿಕಲ್ ಫೈಬರ್ ಅನ್ನು ಬಳಸುವ ಮೂಲಕ ಹೊಸ ತಂತ್ರಜ್ಞಾನವು ಹಳೆಯ ಇಂಟರ್ನೆಟ್ ವೇಗವನ್ನು ಮೀರಿಸಿದೆ. ಅಂದರೆ ಒಂದು ಸೆಕೆಂಡ್‌ನಲ್ಲಿ ಬರೋಬ್ಬರಿ 57 ಸಾವಿರ ಫುಲ್ ಮೂವಿಗಳನ್ನು ಡೌನ್‌ಲೋಡ್ ಮಾಡಬಹುದು. ತಂಡವು 552-ಚಾನೆಲ್ ಲೇಸರ್ ಅನ್ನು ಬಳಸಿದ್ದು ಅದು ವಿವಿಧ ತರಂಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ರೀತಿಯ ಡೋಪ್ ಫೈಬರ್ ಆಂಪ್ಲಿಫೈಯರ್‌ಗಳನ್ನು ಬಳಸಿದ ಮರುಬಳಕೆಯ ಪ್ರಸರಣ ಲೂಪ್‌ನ ಪ್ರಾಯೋಗಿಕ ಸೆಟಪ್ ಇದು. ವಿಶೇಷ ಆಂಪ್ಲಿಫೈಯರ್‌ಗಳು ಅಂತರ್ಜಾಲದ ವ್ಯಾಪ್ತಿ ಮತ್ತು ವೇಗವನ್ನು ಹೆಚ್ಚಿಸಲು ಸಹಾಯ ಮಾಡಿದೆ. 3,000 ಕಿಲೋಮೀಟರ್ ದೂರದಲ್ಲಿ ಯಾವುದೇ ಕಾರ್ಯಕ್ಷಮತೆಯ ಕುಸಿತವಿಲ್ಲದೆ ತಂಡವು ವೇಗವಾಗಿ ಡೇಟಾ ವರ್ಗಾವಣೆಯನ್ನು ದಾಖಲಿಸಿದೆ. ಕುತೂಹಲಕಾರಿಯಾಗಿ,ನಮ್ಮ ಮನೆಗಳಲ್ಲಿ ವೈ-ಫೈಗಾಗಿ ನಿಯಮಿತವಾದ ಆಪ್ಟಿಕಲ್ ಫೈಬರ್ ಕೇಬಲ್‌ಗಳು ಈ ತಂತ್ರಜ್ಞಾನವನ್ನು ಬೆಂಬಲಿಸಬಹುದು ಎಂದು ಎಂಜಿನಿಯರ್‌ಗಳು ಹೇಳುತ್ತಾರೆ.
ಈ ಎಂಜಿನಿಯರ್‌ಗಳ ಸಾಧನೆಗೆ ಎಂತವರಾದರೂ ಬಹುಪರಾಕ್ ಹೇಳಲೇಬೇಕು. ತಂತ್ರಜ್ಞಾನವನ್ನು ಈ ರೀತಿಯಲ್ಲಿ ಉಪಯೋಗಿಸಿಕೊಂಡ ಇವರಿಗೆ ಪ್ರಪಂಚದಾದ್ಯಂತ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗುತ್ತಿದೆ.