ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ !! | 3-1 ಗೋಲುಗಳ ಅಂತರದಿಂದ ಗೆದ್ದು ಸೆಮಿಫೈನಲ್ ಪ್ರವೇಶ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ 3-1 ಗೋಲುಗಳಿಂದ ಪಾಕಿಸ್ತಾನವನ್ನು ಬಗ್ಗು ಬಡಿದಿದ್ದು, ಈ ಮೂಲಕ ಭಾರತದ ಸೆಮಿಫೈನಲ್ ಪ್ರವೇಶ ಮಾಡಿದೆ.

ಹರ್ಮನ್ಪ್ರೀತ್ ಸಿಂಗ್ 2 ಮತ್ತು ಆಕಾಶ್‍ದೀಪ್ ಸಿಂಗ್ ಸಿಡಿಸಿದ ಒಂದು ಗೋಲ್ ನೆರವಿನಿಂದ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ರೌಂಡ್ ರಾಬಿನ್ ಮೂರನೇ ಪಂದ್ಯವನ್ನು ಭಾರತ ಗೆದ್ದುಕೊಂಡಿದೆ.

ಪಂದ್ಯ ಆರಂಭವಾಗಿ ಮೊದಲ ಕ್ವಾರ್ಟರ್‌ನ 8ನೇ ನಿಮಿಷದಲ್ಲಿ ಭಾರತದ ಹರ್ಮನ್ಪ್ರೀತ್ ಸಿಂಗ್ ಗೋಲ್ ಸಿಡಿಸಿದರು. ಈ ಮೂಲಕ ಭಾರತ ತಂಡ 1-0 ಅಂತರದ ಮುನ್ನಡೆ ಪಡೆದುಕೊಂಡಿತು. ನಂತರ ಆಕಾಶ್‍ದೀಪ್ ಸಿಂಗ್ ಮೂರನೇ ಕ್ವಾರ್ಟರ್‌ನ 48ನೇ ನಿಮಿಷದಲ್ಲಿ ಸಿಡಿಸಿದ ಮತ್ತೊಂದು ಗೋಲ್‍ನಿಂದ 2-0 ಮುನ್ನಡೆ ಪಡೆದುಕೊಂಡಿತು.

ಮೂರನೇ ಕ್ವಾರ್ಟರ್ ಕಡೆಯ ಕ್ಷಣದಲ್ಲಿ ಪಾಕಿಸ್ತಾನದ ಜುನೈದ್ ಮಂಜೂರ್ ಸಿಡಿಸಿದ ಗೋಲ್‍ನಿಂದ ಪಾಕಿಸ್ತಾನ 2-1 ಅಂತರ ಕಾಯ್ದುಕೊಂಡಿತು. 4ನೇ ಕ್ವಾರ್ಟರ್‌ನಲ್ಲಿ ಭಾರತದ ಹರ್ಮನ್ಪ್ರೀತ್ ಸಿಂಗ್ ಸಿಡಿಸಿದ ಗೋಲ್‍ನಿಂದ ಭಾರತ ತಂಡ 3-1 ಅಂತರದಿಂದ ಪಾಕಿಸ್ತಾನವನ್ನು ಬಗ್ಗುಬಡಿಯಿತು.

ಈ ಮೊದಲು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ 2-2ರಲ್ಲಿ ಡ್ರಾ ಮಾಡಿಕೊಂಡಿತ್ತು. ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9-0 ಅಂತರದಿಂದ ಮಣಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿದೆ.

Leave A Reply

Your email address will not be published.