“ಶಾಂತಿ ಮಂತ್ರ ಪಠಿಸುತ್ತಾ ಕುಳಿತರೆ ಆಗೋದಿಲ್ಲ, ಗೋರಕ್ಷಣೆ ಮಾಡೋದಾದ್ರೆ ಕೈಯಲ್ಲಿ ತಲ್ವಾರ್ ಹಿಡಿಯಿರಿ…” | ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಗುಡುಗಿದ ಸಾಧ್ವಿ ಸರಸ್ವತಿ

ಗೋಕಳ್ಳತನದ ಹಾವಳಿ ಹೆಚ್ಚುತ್ತಿದ್ದು, ರಾತ್ರೋರಾತ್ರಿ ದನ-ಕರುಗಳನ್ನು ಕದ್ದೊಯ್ಯುತ್ತಿರುವವರ ವಿರುದ್ಧ ಕಿಡಿ ಕಾರಿರುವ ಸಾಧ್ವಿ ಸರಸ್ವತಿ, ಶಾಂತಿ ಮಂತ್ರ ಪಠಿಸುತ್ತಾ ಕುಳಿತುಕೊಂಡ್ರೆ ಆಗಲ್ಲ, ತಲ್ವಾರ್ ಖರೀದಿಸಿ, ಗೋವುಗಳನ್ನು ರಕ್ಷಿಸಿ ಎಂದು ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದ ಗಾಂಧಿ ಮೈದಾನದಲ್ಲಿ ವಿಎಚ್ಪಿ ಮತ್ತು ಭಜರಂಗದಳದಿಂದ ಆಯೋಜಿಸಲಾಗಿದ್ದ ಹಿಂದು ಸಂಗಮ ಸಮಾರಂಭದಲ್ಲಿ ಮಾತನಾಡಿದ ಅವರು, ಗೋಮಾತೆಯ ರಕ್ಷಣೆ ಅತ್ಯಗತ್ಯ ಎಂದು ಹೇಳಿದ್ದಾರೆ.

ಜಗತ್ತಿನಾದ್ಯಂತ ಗೋಮಾತೆಯನ್ನು ಗೌರವಿಸುತ್ತಾರೆ, ಪೂಜಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಹಸುವನ್ನು ಅದರ ಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ. ಈ ದೇಶದಲ್ಲಿ ಗೋವು ಹಂತಕರಿಗೆ ಬದುಕಲು ಹಕ್ಕಿಲ್ಲ. ಈಗೀಗಂತೂ ಗೋಶಾಲೆ, ಕೊಟ್ಟಿಗೆಗಳಿಂದ ಗೋವುಗಳನ್ನು ಕದ್ದುಕೊಂಡು ಹೋಗಿ ಕೊಲ್ಲುತ್ತಿರುವ ಘಟನೆಗಳೂ ಬೆಳಕಿಗೆ ಬರುತ್ತಿವೆ. ಇಂತಹ ಜನರಿಗೆ ಅವರ ಭಾಷೆಯಿಂದಲೇ ಉತ್ತರ ಕೊಡಬೇಕಿದೆ. ಕಲ್ಲಿಗೆ ಕಲ್ಲೇ ಉತ್ತರ, ಬಾಣಕ್ಕೆ ಬಾಣವೇ ಉತ್ತರ. ಆದ್ದರಿಂದ ಪ್ರತಿಯೊಬ್ಬರೂ ತಲ್ವಾರ್ ಖರೀದಿ ಮಾಡಿ ನಿಮ್ಮ ನಿಮ್ಮ ಮನೆಯ ಗೋವುಗಳನ್ನು ರಕ್ಷಿಸಿಕೊಳ್ಳಿ ಎಂದಿದ್ದಾರೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಸಾದ್ವಿ, ‘ಸ್ಮಾರ್ಟ್‌ಫೋನ್, ಕಂಪ್ಯೂಟರ್ ಎಂದೆಲ್ಲಾ ಹಲವಾರು ಸಾವಿರ, ಲಕ್ಷ ಲಕ್ಷ ಕೊಟ್ಟು ಖರೀದಿ ಮಾಡುತ್ತೀರಾ. ಆದರೆ ತಲ್ವಾರ್‌ಗೆ ಒಂದೇ ಸಾವಿರ ರೂಪಾಯಿ ಸಾಕು. ಅದನ್ನು ಮೊದಲು ಖರೀದಿ ಮಾಡಿ. ಗೋವಿನ ಪಾಲನೆ-ಪೋಷಣೆ ಎಷ್ಟು ಕಷ್ಟ ಎಂದು ಅದನ್ನು ಸಾಕಿದವರಿಗೆ ತಿಳಿದಿದೆ. ಆದರೆ ಈ ಕಳ್ಳರು ಅದನ್ನು ಕದ್ದು ಕಡಿಯುತ್ತಿದ್ದಾರೆ. ಇನ್ನು ಸುಮ್ಮನೇ ಕುಳಿತುಕೊಂಡು ಪ್ರಯೋಜನವಿಲ್ಲ. ಆದ್ದರಿಂದ ಅವರ ಭಾಷೆಯಲ್ಲಿಯೇ ಉತ್ತರ ಕೊಡಿ’ ಎಂದು ಗುಡುಗಿದ್ದಾರೆ.

ಇನ್ನು ಕರ್ನಾಟಕದಲ್ಲಿ ಕೆಲವು ರಾಷ್ಟ್ರವಿರೋಧಿಗಳು ಟಿಪ್ಪು ಸುಲ್ತಾನನನ್ನು ಹೊಗಳುತ್ತಿದ್ದಾರೆ. ಅಂತಹ ಜನರಿಂದಲೂ ದೇಶವನ್ನು ರಕ್ಷಣೆ ಮಾಡಿಕೊಳ್ಳುವುದು ತುಂಬ ಮುಖ್ಯ. ಗೋಹತ್ಯೆ, ಮತಾಂತರ, ಲವ್​ ಜಿಹಾದ್​ನಂತಹ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸುವ ಅಗತ್ಯ ಹೆಚ್ಚಾಗಿ ಕಾಣುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ ಗೌರಿಗದ್ದೆ, ಆನೆಗುಂದಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ವಿಎಚ್​ಪಿ ನಾಯಕ ಎಂ.ಬಿ.ಪುರಾಣಿಕ್​ ಇತರರು ಇದ್ದರು.

Leave A Reply

Your email address will not be published.