ಮಂಗಳೂರು : ಆಲ್ಕೋಹಾಲ್ ಕುಡಿಸಿ ಅಪ್ರಾಪ್ತೆಯ ಅತ್ಯಾಚಾರ ,ಮೂವರ ಬಂಧನ | ಅನುಚಿತ ವರ್ತನೆ ಪೊಲೀಸ್ ಸಿಬ್ಬಂದಿ ವಿರುದ್ದವೂ ಕ್ರಮ
ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಮೂವರು ಅತ್ಯಾಚಾರ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಮಂಗಳೂರು ಮೂಲದ ಇಬ್ಬರು ಹಾಗೂ ಕೇರಳ ಮೂಲದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಮುಡಿಪು ಹತ್ತಿರದ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರಗೊಂದಲಮಯ ವಾತಾವರಣ ನಿರ್ಮಾಣವಾಗಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಬಾಲಕಿಯ ತಾಯಿ ನೀಡಿರು ದೂರಿನಂತೆ ಪ್ರಕರಣ ದಾಖಲಾಗಿದೆ.
“ಅಪ್ರಾಪ್ತ ವಯಸ್ಸಿನವಳಾಗಿರುವ ಮಗಳಿಗೆ ಆಲ್ಕೋಹಾಲ್ ಕುಡಿಸಿ ಮತ್ತು ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ” ಎಂದು ಸಂತ್ರಸ್ತ ಬಾಲಕಿಯ ತಾಯಿ ದೂರು ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಬಾಲಕಿಯನ್ನು ಆಪ್ತ ಸಮಾಲೋಚನೆಗಾಗಿ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಬಜೈ ಠಾಣಾ ವ್ಯಾಪ್ತಿಯ ಚಿಲಿಂಬಿಗುಡ್ಡೆಯಲ್ಲಿ ನಡೆದ ಪ್ರಕರಣದ ಆರೋಪಿಗಳಲ್ಲಿ ಓರ್ವ ಈ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಚಿಲಿಂಬಿ ಗುಡ್ಡದ ಪ್ರಕರಣದಲ್ಲೂ ಬಾಲಕಿ ತಾಯಿಯ ದೂರಿನ ಮೇರೆಗೆ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬಾಲಕಿ ಈ ಹಿಂದೆ ನಾಪತ್ತೆಯಾಗಿದ್ದಾಳೆಂದು ಪೋಷಕರು ದೂರು ನೀಡಿದ್ದರು. ಬಳಿಕ ನಾಪತ್ತೆಯಾಗಿಲ್ಲ ಬದಲಿಗೆ ಆಕೆಗೆ ಯಾರೋ ಚುಡಾಯಿಸಿರುವುದು ಗಮನಕ್ಕೆ ಬಂದಿದ್ದು, ಬಾಲಕಿ ಆ ಸಂದರ್ಭ ಠಾಣೆಗೆ ಬಂದಿದ್ದಾಗ, ಹೆಡ್ ಕಾನ್ಸ್ ಸ್ಟೆಬಲ್ ಒಬ್ಬರು ಆಕೆಯ ನಂಬರ್ ಪಡೆದು ಆಕೆಯ ಜತೆ ಅನುಚಿತವಾಗಿ ಮೊಬೈಲ್ ಸಂದೇಶಗಳನ್ನು ಹಂಚಿಕೊಂಡಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿ ಹೆಡ್‌ಕಾನ್‌ಸ್ಟೇಬಲ್ ನನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿತ್ತು. ಅಮಾನತುಗೊಳಿಸಿ ಇಲಾಖಾ ಶಿಸ್ತಿನ ಕ್ರಮ ಜಾರಿಗೊಳಿಸಲಾಗಿತ್ತು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ನಿನ್ನೆ ನಡೆದ ಘಟನೆಯ ಬಗ್ಗೆ ಬಾಲಕಿಯ ತಾಯಿ ಹೇಳುವ ಪ್ರಕಾರ ಅವರೆಲ್ಲಾ ಪರಿಚಯಸ್ಥರಾಗಿದ್ದು, ಅಕೆಯನ್ನು ತಮ್ಮ ಜತೆ ಕರೆದೊಯ್ದಿದ್ದರು. ಈ ಹಿಂದೆಯೂ ತನ್ನ ಸ್ನೇಹಿತೆಯರ ಜತೆ ಹೋಗುತ್ತಿದ್ದಳು. ಇದೀಗ ಹುಡುಗರ ಜತೆ ಹೋಗಿದ್ದಾಳೆಂಬ ಹಿನ್ನೆಲೆಯಲ್ಲಿ ದೂರು ನೀಡಿದ್ದು, ಪ್ರಸಕ್ತ ಪೊಕ್ಸೋ ಪ್ರಕರದಡಿ ಮೂರು ಮಂದಿಯನ್ನು ಬಂಧಿಸಲಾಗಿದೆ.
ಈ ಪ್ರಕರಣದ ಆರೋಪಿಯಾಗಿರುವ ವ್ಯಕ್ತಿ ಈ ಹಿಂದೆ ಚಿಲಿಂಬಿ ಗುಡ್ಡ ಪ್ರಕರಣದಲ್ಲಿ ತನ್ನನ್ನು ಪೊಕ್ಸೋ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆಂಬ ದ್ವೇಷದಿಂದ ಇಲ್ಲಿನ ಕೆಲವು ಹುಡುಗರಿಗೆ ಹಣ ನೀಡಿ ನಾಗಬನದ ಧ್ವಂಸ ಪ್ರಕರಣಕ್ಕೂ ಬೆಂಬಲ ಸೂಚಿಸಿದ್ದ.
ಈ ಆರೋಪಿಯ ಮೇಲೆ ಈಗಾಗಲೇ ಎರಡು ಪೊಕ್ಸೋ ಪ್ರಕರಣವಲ್ಲದೆ, ದರೋಡೆ, ಎನ್‌ಡಿಪಿಎಸ್ ಕಾಯ್ದೆ ಸೇರಿದಂತೆ ಐದು ಪೊಲೀಸ್ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ ಶಶಿ ಕುಮಾರ್ ತಿಳಿಸಿದ್ದಾರೆ.