ದಿನಕ್ಕೊಂದು ಮೊಟ್ಟೆ ಬಗೆಯಲಿದೆಯೇ ಬಿಜೆಪಿ ಸರ್ಕಾರದ ಹೊಟ್ಟೆ ?! | ಶಾಲೆಗಳಲ್ಲಿ ಊಟಕ್ಕೆ ಮೊಟ್ಟೆ ನೀಡುವುದಕ್ಕೆ ಪೇಜಾವರ ಸೇರಿ ಹಲವು ಮಠಾಧೀಶರಿಂದ ತೀವ್ರ ವಿರೋಧ

ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ಮುಂದಾಗಿರುವ ಬಿಜೆಪಿ ಸರ್ಕಾರದ ಮೇಲೆ ಮಠಾಧೀಶರುಗಳ ಕೋಪ ಹೆಚ್ಚಾಗಿದೆ. ಶಾಲೆಯಲ್ಲಿ ಮೊಟ್ಟೆ ನೀಡುವುದಕ್ಕೆ ಇದೀಗ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಶಾಲೆ ಮಕ್ಕಳಿಗೆ ತಿಳುವಳಿಕೆ ಇರುವುದಿಲ್ಲ. ತಮ್ಮ ಪರಂಪರೆಯಿಂದ ಬಂದ ಆಹಾರ ಕ್ರಮವನ್ನು ಬದಲಿಸಬಾರದು. ಸರ್ಕಾರ ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯ ನೀಡಿದಂತಾಗುತ್ತದೆ. ಸರ್ಕಾರ ಮಕ್ಕಳ ಮಧ್ಯೆ ಮತಬೇಧ ಉಂಟು ಮಾಡಬಾರದು. ಯಾರು ಏನು ಸೇವಿಸುತ್ತಾರೋ ಅದರ ಖರ್ಚುನ್ನು ಸರ್ಕಾರ ನೀಡಲಿ. ಶಾಲೆ ಇರುವುದು ಶಿಕ್ಷಣಕ್ಕೋಸರ, ಹೀಗಾಗಿ ಅಲ್ಲಿ ಜೀವನಶೈಲಿಯನ್ನು ಬದಲಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಟೀಕಿಸಿದ ಮೂಲಕ ಸಲಹೆಯನ್ನೂ ಪೇಜಾವರ ಶ್ರೀಗಳು ನೀಡಿದರು.

ಈ ಬಗ್ಗೆ ಉತ್ತರ ಕರ್ನಾಟಕದ ಸ್ವಾಮೀಜಿಗಳಿಂದಲೂ ವಿರೋಧ ಉಂಟಾಗಿವೆ.ನಿನ್ನೆಯೂ ಉತ್ತರ ಕರ್ನಾಟಕದ ಹಲವು ಮಠಗಳ ಸ್ವಾಮೀಜಿಗಳು ಒಟ್ಟಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಶಾಲೆಗಳಲ್ಲಿ ಮೊಟ್ಟೆ ವಿತರಣೆ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದರು.

ಮೊಟ್ಟೆ ಮುಂದಿನ ದಿನ ಬಗೆದೀತು ಸರ್ಕಾರದ ಹೊಟ್ಟೆ !!

ಶಾಲೆಗಳಲ್ಲಿ ಮೊಟ್ಟೆ ಯೋಜನೆ ವಾಪಸ್ ಪಡೆಯದೇ ಇದ್ದಲ್ಲಿ ಲಿಂಗಾಯತರಿಂದಲೇ ಸರ್ಕಾರ ಪತನವಾಗುತ್ತೆ ಎಂದು ವಿವಿಧ ಮಠಾಧೀಶರು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರು ದಯಾನಂದ ಸ್ವಾಮೀಜಿ, ರಾಷ್ಟ್ರೀಯ ಬಸವದಳದ ಚನ್ನಬಸವಾನಂದ ಸ್ವಾಮೀಜಿ, ಬಸವಧರ್ಮ ಪೀಠದ ಮಾತೆ ಗಂಗಾದೇವಿ ಮೊದಲಾ ಸ್ವಾಮೀಜಿಗಳು, ಬ್ರಾಹ್ಮಣ, ಜೈನ ಸಮುದಾಯದ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಮೊಟ್ಟೆ ಅಗತ್ಯ ಎನ್ನುವುದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿಕೊಳ್ಳಲಾಗಿದೆ ಹಾಗೂ ಮೊಟ್ಟೆಯನ್ನು ‘ಪರಿಪೂರ್ಣ ಆಹಾರ’ ಎಂದು ಗುರುತಿಸಲಾಗಿದೆ. ಹಾಗಾಗಿ ಮಕ್ಕಳಿಗೆ ಬಿಸಿಯೂಟದೊಂದಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಆದರೂ ಈ ಯೋಜನೆಗೆ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ಸರ್ಕಾರ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

Leave A Reply

Your email address will not be published.