ಬಿಪಿನ್ ರಾವತ್ ವಿರುದ್ಧ ಅವಮಾನಕರ ಪೋಸ್ಟ್ ಹಾಕಿದರೆ ಕಠಿಣ ಕಾನೂನು ಕ್ರಮ | ಸಿಎಂ ಬೊಮ್ಮಾಯಿ ಎಚ್ಚರಿಕೆ
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಒಟ್ಟು 13 ಜನ ದುರ್ಮರಣ ಹೊಂದಿದ್ದಾರೆ. ಅದರಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೂಡ ಒಬ್ಬರು. ಇವರ ಈ ಬಲಿದಾನ ಇಡೀ ದೇಶವನ್ನೇ ದುಃಖಕ್ಕೆ ತಳ್ಳಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ದೇಶದ್ರೋಹಿಗಳು ಇವರ ಸಾವನ್ನು ಸಂಭ್ರಮಿಸುತ್ತಿರುವುದು ಬಹಳ ಶೋಚನೀಯವಾಗಿದೆ.
ಸೇನಾ ಪಡೆಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸುವುದು ಮತ್ತು ಅವರ ವಿರುದ್ಧ ಅವಮಾನಕರ ಪೋಸ್ಟ್ ಹಾಕಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಮುಖ್ಯಮಂತ್ರಿ, ‘ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರನ್ನು ಕಳೆದುಕೊಂಡಿದ್ದೇವೆ, ದುರಂತದ ಕುರಿತು ಟ್ವಿಟರ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅವಮಾನಕರ ಪೋಸ್ಟ್ ಗಳನ್ನು ಪ್ರಕಟಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಅಂಥ ಸಂದೇಶಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತುಕ್ರಮ, ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಅಂಥ ವ್ಯಕ್ತಿಗಳ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಹೇಳಿದ್ದಾರೆ.