ಶಾಲೆ ರದ್ದಾಗೋ ಪ್ರಶ್ನೆಯೇ ಇಲ್ಲ | ಅಂತೆ ಕಂತೆಗಳಿಗೆ ಅಡ್ಡ ಗೆರೆ ಎಳೆದ ಶಿಕ್ಷಣ ಸಚಿವರು !!
ಕೊರೋನಾ ಮೂರನೇ ಅಲೆಯ ಆತಂಕದ ನಡುವೆ ಇದೀಗ ಶೈಕ್ಷಣಿಕ ಚಟುವಟಿಕೆ ಭಯದಲ್ಲೇ ನಡೆಯುತ್ತಿದೆ. ಹೀಗಿರುವಾಗ ಶಾಲಾ ಮಕ್ಕಳ ಭವಿಷ್ಯದ ಕುರಿತು ರಾಜ್ಯ ಶಿಕ್ಷಣ ಸಚಿವ ಬಿಸಿ ನಾಗೇಶ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏನು ಕಟ್ಟು ನಿಟ್ಟು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಮಾಡಿಲ್ಲ. ಕೊರೋನಾ ವಿಚಾರದಲ್ಲಿ ಪ್ರತಿಷ್ಠೆಗೆ ಬಿದ್ದು 1.20 ಕೋಟಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಲು ಅವಕಾಶ ಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಳೆದ 20 ತಿಂಗಳು ಶಾಲೆಗಳನ್ನು ಮುಚ್ಚಲಾಗಿತ್ತು. ಬಹುತೇಕ ಪರೀಕ್ಷೆಗಳನ್ನು ಸಹ ರದ್ದು ಮಾಡಲಾಗಿತ್ತು. ಕಳೆದ ಜುಲೈನಿಂದ ಈವರೆಗೆ ಹಂತ ಹಂತವಾಗಿ ಶಾಲೆಗಳನ್ನು ತೆರೆಯಲಾಗಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ. ಸದ್ಯ ಸರ್ಕಾರಿ ಶಾಲೆಗಳು ಸೇರಿದಂತೆ 1.20 ಕೋಟಿ ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಇದೀಗ ರೂಪಾಂತರಿ ಒಮಿಕ್ರಾನ್ ಸೋಂಕು ಮತ್ತೆ ಶಾಲೆಗಳಿಗೆ ಆತಂಕ ಹೆಚ್ಚಿಸಿದೆ.
ಓಮಿಕ್ರಾನ್ ರೂಪಾಂತರಿ ಕೊರೊನಾ ಸೋಂಕು ಕುರಿತು ತಜ್ಞರ ಸಮಿತಿ ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ತಜ್ಞರ ಸಮಿತಿ ಕೂಡ ಶಾಲೆಗಳನ್ನು ಮುಂದುರಿಸಲು ಸಮ್ಮಿತಿ ಸೂಚಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಈ ಕುರಿತು ಚರ್ಚೆ ನಡೆಯಲಿದೆ. ಮುಖ್ಯಮಂತ್ರಿಗಳಿಗೂ ತಜ್ಞರ ಕಮಿಟಿ ಸದಸ್ಯರು ಹೇಳಿರುವ ವಿಚಾರವನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲಾಗುವುದು. ಹೊರತು ಪಡಿಸಿ ಯಾವ ಕಾರಣಕ್ಕೂ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ವಸತಿ ಶಾಲೆಗಳ ಬಗ್ಗೆ ಗಾಬರಿ ಹುಟ್ಟಿದ್ದು ನಿಜ. ಸದ್ಯದ ಸ್ಥಿತಿಯಲ್ಲಿ ಯಾರೂ ತೊಂದರೆಗೆ ಒಳಗಾಗಿಲ್ಲ. ಆದರೆ, ಓಮಿಕ್ರಾನ್ ಸೋಂಕಿನಿಂದ ಯಾರಿಗೂ ತೊಂದರೆ ಆಗಿಲ್ಲ. ಓಮಿಕ್ರಾನ್ ತಡೆಯುವ ಜವಾಬ್ದಾರಿ ಸಮಾಜದ ಮೇಲೆ. ಸಮಾಜವನ್ನು ಎಚ್ಚರಿಸುವ ಕೆಲಸ ಆಗುತ್ತಿದೆ ಎಂದವರು ಹೇಳಿದರು.
ಕರ್ನಾಟಕದಲ್ಲಿ ನರ್ಸಿಂಗ್, ಶಾಲೆ ಸೇರಿದಂತೆ ಮೂರು ಶಾಲಾ – ಕಾಲೇಜಿನ 120 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಶಾಲೆಗಳನ್ನು ಮತ್ತೆ ಮುಚ್ಚಲಾಗುತ್ತದೆ ಎಂಬ ಗೊಂದಲ ಹುಟ್ಟು ಹಾಕಿತ್ತು. ಈ ಗೊಂದಲಗಳಿಗೆ ಸಚಿವ ಬಿ.ಸಿ. ನಾಗೇಶ್ ಅವರು ಸ್ಪಷ್ಟನೆ ನೀಡಿ ತೆರೆ ಎಳೆದಿದ್ದಾರೆ.