ಸೇನಾ ಹೆಲಿಕಾಪ್ಟರ್ ಪತನ | ನಾಲ್ವರ ಮೃತದೇಹ ಪತ್ತೆ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಥಿತಿ ಚಿಂತಾಜನಕ | ಒಟ್ಟು 14 ಮಂದಿ ಇದ್ದ ಹೆಲಿಕಾಪ್ಟರ್ ನಲ್ಲಿ ಮೂವರ ರಕ್ಷಣೆ, ಉಳಿದವರಿಗಾಗಿ ಮುಂದುವರಿದ ಶೋಧ ಕಾರ್ಯ

ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕುನೂರಿನಲ್ಲಿ ಪತನಗೊಂಡಿದ್ದು, ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು ನಾಲ್ವರ ಮೃತದೇಹ ಪತ್ತೆಯಾಗಿದೆ.

ಬಿಪಿನ್ ರಾವತ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪತ್ನಿ ಮಧುಲಿಕಾ ಸೇರಿ ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಸೇನೆಯ ಎರಡು ಹೆಲಿಕಾಪ್ಟರ್‌ಗಳು ಬುಧವಾರ ಕೊಯಮತ್ತೂರಿನಿಂದ ವೆಲ್ಲಿಂಗ್ಟನ್ ಸೇನಾ ಕೇಂದ್ರಕ್ಕೆ ಹೋಗುತ್ತಿದ್ದವು. ಈ ಪೈಕಿ ಒಂದು ಹೆಲಿಕಾಪ್ಟರ್ ಪತನಗೊಂಡಿದ್ದು, ಇದರಲ್ಲಿ ಬಿಪಿನ್ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಇದೇ ಹೆಲಿಕಾಪ್ಟರ್‌ನಲ್ಲಿ ಸೇನಾ ಕಮಾಂಡರ್ ನರವಾಣೆ ಕೂಡ ಇದ್ದರು ಎನ್ನಲಾಗಿದೆ.

ತಕ್ಷಣದ ಸಾವುನೋವುಗಳ ಬಗ್ಗೆ ಏನನ್ನೂ ಖಚಿತಪಡಿಸಲು ಸಾಧ್ಯವಾಗಿಲ್ಲ. ಹೆಲಿಕಾಪ್ಟರ್ ಪತನವಾದ ಸ್ಥಳದಲ್ಲಿ ಸೇನಾಪಡೆಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಇಬ್ಬರು ಪೈಲಟ್‌ಗಳು, ಬ್ರಿಗೇಡಿಯರ್ ಶ್ರೇಣಿಯ ಸಿಬ್ಬಂದಿ ಇದ್ದರು. ಅಪಘಾತದ ನಂತರ, ಸ್ಥಳೀಯ ಜನರು ಮೊದಲು ಸ್ಥಳಕ್ಕೆ ಆಗಮಿಸಿ ಹೆಲಿಕಾಪ್ಟರ್‌ನ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅಪಘಾತ ಸಂಭವಿಸಿದ ಸ್ಥಳವು ದಟ್ಟವಾದ ಕಾಡಿನಿಂದ ಕೂಡಿದ್ದು, ಸುಲಭವಾಗಿ ತಲುಪಲು ಸಾಧ್ಯವಾಗದ ಕಾರಣ, ರಕ್ಷಣಾ ತಂಡಕ್ಕೆ ತಲುಪಲು ಕೊಂಚ ಕಷ್ಟವಾಯಿತು. ಬೆಟ್ಟದ ಮೇಲೆ ಅಪಘಾತ ಸಂಭವಿಸಿದೆ. ಈ ಸ್ಥಳವು 2667 ಮೀಟರ್ ಎತ್ತರವಾಗಿದೆ. ಅಪಘಾತದ ಬಳಿಕ ಹೆಲಿಕಾಪ್ಟರ್ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಬೂದಿಯಾಗಿದೆ.

ಮಧ್ಯಾಹ್ನ 12:20ಕ್ಕೆ ಹೆಲಿಕಾಪ್ಟರ್ ಪತನಗೊಂಡಿದೆ. ಲ್ಯಾಂಡಿಂಗ್ ಸ್ಥಳದಿಂದ ಕೇವಲ 10 ಕಿ.ಮೀ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ಕೇವಲ ಐದು ನಿಮಿಷ ಇತ್ತು. ಘಟನೆಯ ಬಗ್ಗೆ ಮಾಹಿತಿ ಪಡೆದ ವೈದ್ಯರು, ಸೇನಾ ಅಧಿಕಾರಿಗಳು ಮತ್ತು ಕೋಬ್ರಾ ಕಮಾಂಡೋಗಳ ತಂಡವು ಸ್ಥಳಕ್ಕೆ ತಲುಪಿವೆ.

ಪ್ರಾಥಮಿಕ ವರದಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇಂಜಿನ್ ನಿಷ್ಕ್ರಿಯಗೊಂಡು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮಂಜು ಮುಸುಕಿದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಖಚಿತ ಮಾಹಿತಿ ಹೊರಬಿದ್ದಿಲ್ಲ.

ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ವಾಯುಸೇನೆ ಟ್ವಿಟ್ ಮಾಡಿದೆ. ನಾಳೆ ಈ ಘಟನೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.