ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹೆಚ್ಚುತ್ತಿದೆ ಕೊರೋನಾ ಪ್ರಕರಣಗಳು | ಶಾಲೆಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ | ಮಾರ್ಗಸೂಚಿಯಲ್ಲಿ ಏನಿದೆ? ಏನಿಲ್ಲ? ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ಕೊರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲಿಯೂ ಶಾಲೆ – ಕಾಲೇಜುಗಳಲ್ಲಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಸರ್ಕಾರವು ಶಾಲೆಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಹೊಸ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳು ತರಗತಿಗೆ ಬರುವುದು ಕಡ್ಡಾಯವಲ್ಲ. ಶಾಲೆಗಳು ಭೌತಿಕ ತರಗತಿಯೊಂದಿಗೆ ಆನ್ ಲೈನ್ ಸೇರಿದಂತೆ ಪರ್ಯಾಯ ಮಾರ್ಗದಲ್ಲಿ ತರಗತಿ ನಡೆಸಬೇಕು. ವಿದ್ಯಾರ್ಥಿಗಳು ತಮಗೆ ಇಷ್ಟವಾದ ರೀತಿಯಲ್ಲಿ ತರಗತಿಗೆ ಹಾಜರಾಗಬಹುದು. ಯಾವ ವಿದ್ಯಾರ್ಥಿಗಳಿಗೂ ಶಾಲೆಗೆ ಬರುವಂತೆ ಶಿಕ್ಷಕರು ಒತ್ತಾಯ ಮಾಡುವಂತಿಲ್ಲ. ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ ಪಾಲಕರ ಅನುಮತಿ ಕಡ್ಡಾಯಗೊಳಿಸಲಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ತರಗತಿಗಳು ನಡೆಯುತ್ತವೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರ ಶಾಲಾ ಅವಧಿ ಇರುತ್ತದೆ. ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಬೇಕು. 15 ರಿಂದ 20 ವಿದ್ಯಾರ್ಥಿಗಳ ಗುಂಪು ರಚಿಸಿ, ಒಂದು ದಿನ ತರಗತಿ, ಒಂದು ದಿನ ರಜೆಯ ವ್ಯವಸ್ಥೆಯಂತೆ ಶಿಕ್ಷಕರು ಪಾಠ ಮಾಡಬೇಕು. ಶನಿವಾರ ಹಾಗೂ ಭಾನುವಾರ ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಲೇಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ಹೇಳಿದೆ.
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಎರಡೂ ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ನೀಡಬೇಕು. ಶಾಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಈ ರೀತಿ ಕಟ್ಟುನಿಟ್ಟಾಗಿ ಶಾಲೆಗಳನ್ನು ಆರಂಭಿಸಬೇಕು ಎಂದು ಸರ್ಕಾರ ಎಲ್ಲ ಶಾಲೆಗಳಿಗೆ ಎಚ್ಚರಿಕೆ ನೀಡಿದೆ.
ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪಾಲನೆ ಆಗುತ್ತಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮಾರ್ಗಸೂಚಿ ಪಾಲಿಸ್ತಿಲ್ಲ. ಕೋಚಿಂಗ್ ಸೆಂಟರ್, ಟ್ಯುಟೋರಿಯಲ್ಗಳು ಪಾಲಿಸುತ್ತಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿ. ಶಿಕ್ಷಣ ಇಲಾಖೆಯಿಂದ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕೊರೋನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂರನೇ ಅಲೆ ಆತಂಕ ಶುರುವಾಗಿದೆ. ತಜ್ಞರು ಹೇಳಿದಂತೆ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀಳುತ್ತಾ ಎಂಬ ಭೀತಿ ಹೆಚ್ಚಾಗಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದರೆ ಶಾಲೆ, ಕಾಲೇಜುಗಳನ್ನು ಬಂದ್ ಮಾಡಲು ಸರ್ಕಾರ ಕೂಡಾ ಸಿದ್ಧವಾಗಿದೆ ಎಂದು ಸ್ವತಃ ಸಚಿವ ಬಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.