ಕೆರೆಗಳ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಸೂಚನೆ | ಕೆರೆಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸುವಂತೆ ಪಿಡಿಓ ಗಳಿಗೆ ನಿರ್ದೇಶನ

Share the Article

ಮಂಗಳೂರು : ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳ ತೆರವಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ನಿರ್ದೇಶನ ನೀಡಿದರು.

ಅವರು ಜಿಲ್ಲಾಧಿಕಾರಿಯವರ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ನಿರ್ವಹಣೆಯ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಾಖಲಾತಿಗಳ ಪ್ರಕಾರ ಜಿಲ್ಲೆಯಲ್ಲಿ 644 ಕೆರೆಗಳಿವೆ, ಇನ್ನೂ ಹೆಚ್ಚುವರಿ ಕೆರೆಗಳಿದ್ದಲ್ಲೀ ಆರ್‍ಟಿಸಿಯನ್ನು ತಪಾಸಣೆ ಮಾಡಿ, ಕೂಲಂಕುಷವಾಗಿ ಪರಿಶೀಲಿಸಿ, ಈ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು, ಒತ್ತುವರಿ ತೆರವುಗೊಂಡಿರುವ ಕೆರೆಗಳ ದಂಡೆಗಳಲ್ಲಿ ಗಿಡಗಳನ್ನು ನೆಡಬೇಕು, ಅವುಗಳ ಸೌಂದರ್ಯಿಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಇದಕ್ಕಾಗಿ ಇದೇ ಡಿ.31ರೊಳಗೆ ಸೂಕ್ತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಜಿಲ್ಲೆಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಅದರೊಂದಿಗೆ ಕೆರೆಗಳ ನೀರಿನ ಗುಣಮಟ್ಟದ ಬಗ್ಗೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಮೂಲಕ ಪರಿಶೀಲಿಸಿ ವರದಿ ನೀಡಬೇಕು, ಕೆರೆಗಳಿಗೆ ಮಲಿನ ನೀರು ಸೇರುವ ಬಗ್ಗೆ ಮಾಹಿತಿ ಸಲ್ಲಿಸಬೇಕು ಎಂದು ಅವರು ತಾಕೀತು ಮಾಡಿದರು.
ಭೂದಾಖಲೆಗಳ ಇಲಾಖೆಯ ಉಪ ನಿರ್ದೇಶಕರು ಕೆರೆಗಳ ಸರ್ವೆ ಕಾರ್ಯವನ್ನು ಕೈಗೊಳ್ಳಬೇಕು, ಮಂಗಳೂರು ತಾಲೂಕಿನಲ್ಲಿಯೇ 306 ಕೆರೆಗಳಿದ್ದು, 140 ಹೆಚ್ಚುವರಿ ಕೆರೆಗಳಿರುವುದಾಗಿ ತಹಶೀಲ್ದಾರ್ ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ, ಈ ಬಗ್ಗೆ ಸರ್ವೆ ನಡೆಸಬೇಕು ಹಾಗೂ ಅವುಗಳನ್ನು ಆರ್‍ಟಿಸಿ ಮೂಲಕ ಪತ್ತೆ ಮಾಡುವಂತೆ ಅವರು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತ ಗೋಕುಲ್ ದಾಸ್ ಮಾತನಾಡಿ, ಎಲ್ಲಾ ಕೆರೆಗಳ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ವಿವರಗಳನ್ನು ನಮೂದಿಸಬೇಕಿದೆ, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಕೆರೆಗಳ ಹೆಸರು, ಗ್ರಾಮ, ಸರ್ವೆ ನಂ., ಹೋಬಳಿ, ತಾಲೂಕಿನ ವಿವರಗಳನ್ನು ನಮೂನೆಯಲ್ಲಿ ಭರ್ತಿಮಾಡಿ ತಾಲೂಕುವಾರು ಗೂಗಲ್ ಸ್ಪ್ರೆಡ್ ಶೀಟ್ ತಯಾರಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಸಹಾಯಕ ಆಯುಕ್ತ ಮದನ್ ಮೋಹನ್, ಡಿಡಿಎಲ್‍ಆರ್ ನಿರಂಜನ್, ತಹಶೀಲ್ದಾರ್ ಗುರುಪ್ರಸಾದ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವೃಥ್ವಿರಾಜ ವರ್ಣೇಕರ್ ಹಾಗೂ ಪಿಡಿಓಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಆನ್‍ಲೈನ್ ಮೂಲಕ ಭಾಗವಹಿಸಿದ್ದರು.
ಇ-ಮೇಲ್ ಮೂಲಕ ದೂರು ಸಲ್ಲಿಸಲು ಮನವಿ:
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಜಿಲ್ಲಾ ಕೆರೆ ಸಮಿತಿ ಈಗಾಗಲೇ ರಚನೆಯಾಗಿದೆ, ಈ ಸಮಿತಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಕಾರ್ಯದರ್ಶಿಗಳಾಗಿರುತ್ತಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸದಸ್ಯರಾಗಿರುತ್ತಾರೆ.
ಜಿಲ್ಲೆಯ ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಈ ಮೂರು ಅಂಶಗಳ ಆಧಾರದಲ್ಲಿ ಸಮಿತಿಗೆ ದೂರು ನೀಡಬಹುದು.
ಅವು ಇಂತಿವೆ:

ಕೆರೆಗಳಿಗೆ ಹರಿದು ಬರುವ ನೀರಿನ ಕಾಲುವೆಗಳನ್ನು ಸಮರ್ಪಕವಾಗಿ ಕಾಪಾಡುವುದು ಹಾಗೂ ಕಲುಷಿತ ನೀರು ಕೆರೆಗೆ ಸೇರಬಾರದು.
ಕೆರೆ ಪ್ರದೇಶದಿಂದ 30 ಮೀಟರ್ ಅಂತರದೊಳಗೆ ಯಾವುದೇ ಅನಧಿಕೃತ ಕಟ್ಟಡಗಳು ಇರಬಾರದು.
ಕೆರೆ ಭೂಮಿಯ ಮೇಲೆ ಯಾವುದೇ ರಚನೆ ಹಾಗೂ ಕೆರೆ ಭೂಮಿಯನ್ನು ಅಥವಾ ಅದರ ಯಾವುದೇ ಭಾಗವನ್ನು ಅಧಿಭೋಗಕ್ಕೆ ತೆಗೆದುಕೊಳ್ಳುವಂತಿಲ್ಲ.

ದೂರು ಸಲ್ಲಿಸಲು ಮನವಿ
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಮೆಯ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಜಿಲ್ಲಾ ಕೆರೆ ಸಮಿತಿ ಈಗಾಗಲೇ ರಚನೆಯಾಗಿದೆ. ಜಿಲ್ಲೆಯ ಕೆರೆಗಳ ಸಂರಕ್ಷಣೆಗೆಸಂಬಂಧಿಸಿ ಸಾರ್ವಜನಿಕರು ದೂರುಗಳನ್ನು ಸಮಿತಿಯ ಇ-ಮೇಲ್‌ tdadakshinakannada@gmail.com ಗೆ ಸ‌ಲ್ಲಿಸ ಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಕಚೇರಿ ದೂರವಾಣಿ ಸಂ: 0824-2440720ಗೆ ಸಂಪರ್ಕಿಸ ಬಹುದಾಗಿದೆ.

Leave A Reply

Your email address will not be published.