ಅಪ್ರಾಪ್ತ ಮಗಳಿಗೆ ಚಲಾಯಿಸಲು ಸ್ಕೂಟಿ ಕೊಟ್ಟ ತಂದೆಗೆ 25 ಸಾವಿರ ರೂ. ದಂಡ, ಜೈಲು
ಕೊಡಗು : ವಾಹನಗಳನ್ನು ಅಪ್ರಾಪ್ತರಿಗೆ ಹಾಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ಚಾಲನೆ ಮಾಡಲು ಕೊಟ್ಟರೆ ನೀವು ದಂಡ ಕಟ್ಟಲು ಹಾಗೂ ಜೈಲು ಶಿಕ್ಷೆಗೆ ಗುರಿಯಾಗುವುದು ಖಂಡಿತ.
ಅಪ್ರಾಪ್ತರು ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ವಾಹನ ನೀಡಿದ ಮಾಲೀಕರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತನ್ನ ಅಪ್ರಾಪ್ತ ಮಗಳಿಗೆ ಚಾಲನೆ ಮಾಡಲು ಸ್ಕೂಟಿ ನೀಡಿದ ತಂದೆಯೊಬ್ಬರಿಗೆ ಕುಶಾಲನಗರ ಜೆಎಂಎಫ್ಸಿ ನ್ಯಾಯಾಲಯ 25 ಸಾವಿರ ರೂ. ದಂಡ ಹಾಗೂ ಒಂದು ದಿನ ಸಜೆ ವಿಧಿಸಿ ತೀರ್ಪು ನೀಡಿದೆ.
ಸ್ಕೂಟಿ ಮಾಲೀಕತ್ವ ಹೊಂದಿದ್ದ ತಂದೆಗೆ ಶಿಕ್ಷೆ ವಿಧಿಸುವ ಜೊತೆಗೆ ಸ್ಕೂಟಿ ಚಾಲನೆ ಮಾಡಿದ ಅಪ್ರಾಪ್ತ ಬಾಲಕಿಗೂ 1700 ರೂ. ದಂಡ ವಿಧಿಸಲಾಗಿದೆ. ನಂಜರಾಯ ಪಟ್ಟಣದ ನಿವಾಸಿ ಅಂಥೋಣಿ ಎಂಬವರೇ ದಂಡ ಶಿಕ್ಷೆಗೆ ಗುರಿಯಾದವರು.
ಘಟನೆಯ ವಿವರ: ಕಳೆದ ಜನವರಿ 6ರಂದು ದುಬಾರೆ ಪೆಟ್ರೋಲ್ ಬಂಕ್ ಬಳಿ ತ್ಯಾಗತ್ತೂರಿನ ಸಮೀರ್ ಎಂಬವರು ಚಾಲನೆ ಮಾಡುತ್ತಿದ್ದ ಬುಲೆಟ್ ಬೈಕ್ ಮತ್ತು ಅಪ್ರಾಪ್ತ ಬಾಲಕಿ ಓಡಿಸುತ್ತಿದ್ದ ಸ್ಕೂಟಿ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಸಮೀರ್ ಅವರು ಕುಶಾಲನಗರ ಸಂಚಾರ ಠಾಣೆಗೆ ದೂರು ಸಲ್ಲಿಸಿದರು.
ತನಿಖೆ ನಡೆಸಿದ ಪೊಲೀಸರು ಅಪ್ರಾಪ್ತ ಬಾಲಕಿ ಚಾಲನೆ ಮಾಡಿದ ಸ್ಕೂಟಿಯ ಆರ್ಸಿ ಮಾಲೀಕನಾದ ಆಕೆ ತಂದೆಯ ವಿರುದ್ಧ ಅಪ್ರಾಪ್ತೆಗೆ ಚಾಲನೆ ಮಾಡಲು ವಾಹನ ನೀಡಿದ ಆರೋಪದ ಮೇರೆಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಂಥೋಣಿ ಅವರಿಗೆ 25 ಸಾವಿರ ದಂಡ ,ಒಂದು ದಿನದ ಜೈಲು ಶಿಕ್ಷೆ ವಿಧಿಸಿದ್ದಾರೆ.