ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ ಮಾಡಲು ತೆರಳಿದ್ದ ಪೊಲೀಸರ ಮೇಲೆಯೇ ಕಲ್ಲು ತೂರಾಟ !! | ಓರ್ವನ ಬಂಧನ
ಮಲ್ಪೆ : ಅಕ್ರಮ ಮರಳುಗಾರಿಕೆಯ ಸ್ಥಳಕ್ಕೆ ದಾಳಿ ಮಾಡಲು ತೆರಳಿದ ಮಲ್ಪೆ ಎಸೈ ಸಕ್ತಿವೇಲು ಮತ್ತು ಸಿಬ್ಬಂದಿ ಮೇಲೆ ಕೆಲವು ಯುವಕರು ಕಲ್ಲು ತೂರಿದ ಘಟನೆ ಹೊಡೆಯಲ್ಲಿ ನಡೆದಿದೆ.
ಹೊಡೆ ಕಡೆಯಿಂದ ಅಕ್ರಮ ಮರಳು ಸಾಗಿಸುವ ಲಾರಿಯೊಂದು ಅತಿವೇಗದಿಂದ ಸಾರ್ವಜನಿಕರಿಗೆ ಭಯಹುಟ್ಟಿಸುತ್ತಾ ಸಾಗುತ್ತಿದೆ ಎಂಬ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆಗ ಪೊಲೀಸರಿಗೆ ಹೂಡೆಯ ಖದೀಮಿ ಜಾಮೀಯಾ ಮಸೀದಿಯ ಬಳಿ ಇರ್ಷಾದ್ ಎಂಬಾತನ ಕಡೆಯವರು ಅಕ್ರಮವಾಗಿ ಮರಳು ತೆಗೆಯುತ್ತಿರುವುದಾಗಿ ಮಾಹಿತಿ ಸಿಕ್ಕಿದೆ.
ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೆ ಮಸೀದಿಯ ಬಳಿ ರಸ್ತೆಯ ಎರಡು ಬದಿಗಳಲ್ಲಿದ್ದ 10 – 12 ಯುವಕರು ಎಸ್‌ಐ ಮತ್ತು ಸಿಬ್ಬಂದಿಯ ಕಡೆಗೆ ಕಲ್ಲು ತೂರಿ, ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ.
ಕಲ್ಲು ತೂರಿದವರಲ್ಲಿ ಹೊಡೆ ನಿವಾಸಿಗಳಾದ ಇದಾಯತ್, ಅಹಾದ್, ಅಲ್ಪಾಜ್, ಶಾಹಿಲ್, ಇರ್ಫಾನ್, ಇರ್ಷಾದ್ ಹಾಗೂ ಇತರ 3-4 ಜನರಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಪುನಃ ಗಸ್ತು ನಡೆಸಿದಾಗ ವಾಹನದ ಮೇಲೆ ಹಾಗೂ ಗಸ್ತು ಸಿಬ್ಬಂದಿಯ ಮೇಲೆ ಮತ್ತೊಮ್ಮೆ ಕಲ್ಲು ತೂರಿದ್ದಾರೆ. ಇದರಿಂದ ಪೊಲೀಸ್ ಮತ್ತು ಇನ್ನೊಂದು ಖಾಸಗಿ ವಾಹನ ಜಖಂ ಆಗಿದೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಓರ್ವ ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.