ಇಂದಿನಿಂದ ಕುಕ್ಕೇ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವ!! ಪ್ರತೀ ವರ್ಷವೂ ಕುಕ್ಕೇ ಜಾತ್ರೆಗೆ ಬರುವ ವಿಶೇಷ ಅತಿಥಿಗಳು ಯಾರು-ಮೊದಲು ಪೂಜೆ ಸಲ್ಲಿಸುವುದೆಲ್ಲಿ!?
ಇಂದಿನಿಂದ ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ, ಸರ್ಪಸಂಸ್ಕಾರಕ್ಕೆ ಹೆಸರುವಾಸಿಯಾದ, ಅನಾದಿ ಕಾಲದಿಂದಲೂ ತುಳುನಾಡನ್ನು ಸಲಹುತ್ತ, ಅತೀ ಹೆಚ್ಚು ಆದಾಯ ತಂದುಕೊಡುವ ಶ್ರೀಮಂತ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಮಹೋತ್ಸವದ ಸಂಭ್ರಮ.
ವಿದ್ಯುತ್ ಅಲಂಕಾರದಿಂದ ಕೂಡಿದ ರಥಬೀದಿ, ಭಕ್ತರನ್ನು ತನ್ನೆಡೆಗೆ ಆಕರ್ಷಸಲು ಸಾಲು ಸಾಲು ವೈವಿಧ್ಯಮಯ ಆಕರ್ಷಣೆಗಳು.ನಿನ್ನೆಯ ದಿನ ಅಂದರೆ ನವೆಂಬರ್ 30 ರಂದು ಮೂಲವೃತ್ತಿಕೆ ಪ್ರಸಾದ ತೆಗೆದು,ಇಂದಿನಿಂದ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ.ಇಂದು ಕೊಪ್ಪರಿಗೆ ಏರಿ ರಾತ್ರಿ ಶೇಷಷಯನಯುಕ್ತ ಬಂಡಿ ಉತ್ಸವ. ಹೀಗೆ ಒಂದರಿಂದ 15 ರ ವರೆಗೆ ಕ್ಷೇತ್ರದಲ್ಲಿ ಉತ್ಸವ ಜರುಗಲಿದ್ದು,07 ರಂದು ಹೂವಿನ ತೇರು,08 ರಂದು ಪಂಚಮಿ ರಥೋತ್ಸವ ನಡೆದು 09 ರ ಮುಂಜಾನೆ ಕುಕ್ಕೆನಾಥನ ಚಂಪಾಷಷ್ಠಿ ರಥೋತ್ಸವ ನಡೆಯಲಿದೆ.
ಪುರಾತನ ಹಿನ್ನೆಲೆಯುಳ್ಳ ದೇವಾಲಯಕ್ಕೆ ಅದರದ್ದೇ ಆದ ಹಿನ್ನೆಲೆ ಇದೆ. ದೇವಾಲಯದ ಮುಂದೆ ನಿಂತು ಬಾನೆತ್ತರಕ್ಕೆ ಒಮ್ಮೆ ಕಣ್ಣು ಹಾಯಿಸಿದರೆ ಕಾಣುವುದೇ ಕುಮಾರ ಪರ್ವತ. ಆ ಪಾರ್ವತಕ್ಕೂ ಕ್ಷೇತ್ರದ ದೇವರಿಗೂ ಅಜಗಜಾಂತರ ಸಂಬಂಧವಿದೆ ಎಂದು ಪುರಾಣಗಳು ಹೇಳುತ್ತಿವೆ.ಜಾತ್ರೆ ಮುಗಿದ ಬಳಿಕ ಪರ್ವತಕ್ಕೆ ತೆರಳಿ ಪೂಜೆ ಸಲ್ಲಿಸುವ ಕ್ರಮವೂ ಇದೆ.
ಕುಕ್ಕೆಯ ಇತಿಹಾಸವನ್ನು ಪೌರಾಣಿಕವಾಗಿ ಕಾಣುವುದಾದರೆ ಕುಮಾರ ಪರ್ವತದಲ್ಲಿ ತಾರಕಾಸುರನ ಸಂಹಾರ ನಡೆದಲ್ಲಿಂದ ಕಥೆ ಪ್ರಾರಂಭವಾಗಿ ಮುಂದುವರಿಯುತ್ತದೆ.ಇನ್ನೊಂದು ಮೂಲಗಳ ಪ್ರಕಾರ ಮಲೆಕುಡಿಯ ಬುಡಕಟ್ಟು ಜನಾಂಗದವರು ತಮ್ಮ ಕುಲ ಕಸುಬಿಗೆ ಕುಮಾರ ಪರ್ವತದತ್ತ ತೆರಳಿದ್ದಾಗ ಕಾಡಿಗೆ ಬೆಂಕಿ ಹತ್ತಿಕೊಂಡಿದ್ದು,ಬೆಂಕಿಯ ಮಧ್ಯೆ ನಾಗರ ಹಾವೊಂದು ಇರುವುದು ಪತ್ತೆಯಾಗಿತ್ತು.ಆ ಹಾವು ಜನರನ್ನು ಕಂಡು ಬದುಕಿಸಲು ಪರಿತಪಿಸಿದ್ದರ ಪರಿಣಾಮ ಆ ಹಾವನ್ನು ತಂದು ಕುಕ್ಕೆಯಲ್ಲಿ ಇಟ್ಟಾಗ ಅಲ್ಲೇ ದೇವರ ನೆಲೆಯಾಯಿತು ಎಂದು ಹೇಳಲಾಗುತ್ತಿದೆ.
ಕುಮಾರ ಪರ್ವತದಲ್ಲಿ ಕಾಣಸಿಗುವ ಪುಷ್ಪಗಿರಿ ಬೆಟ್ಟದಲ್ಲಿ ಹಲವಾರು ಜಾತಿಯ ಗಿಡಮೂಲಿಕೆಗಳು, ಬಗೆಬಗೆಯ ಪುಷ್ಪಗಳು, ಅಸುರನ ವಧೆಯ ಸಂದರ್ಭ ದೇವತೆಗಳು ಎರೆದ ಪುಷ್ಪತರ್ಪಣ ಎಂದೂ ಹೇಳಲಾಗುತ್ತಿದೆ. ಕುಮಾರ ಪರ್ವತದಿಂದ ಹರಿದುಬರುವ ನದಿಯು ಮುಂದಕ್ಕೆ ಕುಮಾರಧಾರೆಯಾಗಿ ಪುಷ್ಪಗಿರಿಯ ಗಿಡಮೂಲಿಕೆಗಳ ಮಧ್ಯೆ ಹರಿದು ಕುಕ್ಕೆ ತಲುಪುತ್ತದೆ.ಆ ನೀರಿನಲ್ಲಿ ಹಲವಾರು ಬಗೆಯ ಔಷಧಿಯ ಗುಣಗಳಿದೆ ಎಂಬುವುದು ಅಕ್ಷರಕ್ಷರ ಸತ್ಯ. ಪಾಪ ಪರಿಹಾರಕ್ಕೆ ಕುಮಾರಧಾರೆಯಲ್ಲಿ ಮಿಂದು ಧನ್ಯನಾಗು ಎಂಬ ಹಿರಿಯರ ಮಾತು ಕೂಡಾ ಸತ್ಯ.
ಇನ್ನು ಮುಂದಕ್ಕೆ ಹೇಳುವುದಾದರೆ, ಕುಕ್ಕೆಯ ಜಾತ್ರೆಗೂ ಮೊದಲು ಕುಮಾರ ಪರ್ವತದಲ್ಲಿ ಆರು ಮುಖಗಳ ಲಿಂಗವೊಂದಕ್ಕೆ ಪೂಜೆ ನಡೆದು, ಆ ಬಳಿಕ ಅಲ್ಲಿ ಇರುವ ದೀಪ ಹಚ್ಚಿ ಕುಕ್ಕೆಯ ಜಾತ್ರೆಗೆ ಚಾಲನೆ ನೀಡಲಾಗುತ್ತದೆ.ಜಾತ್ರೆಗೆ ವಿಶೇಷ ಮೆರುಗು ಎಂದರೆ ಕುಮಾರಧಾರೆಯ ನದಿಯಲ್ಲಿನ ಮೀನುಗಳು.
ಸುಳ್ಯ ತಾಲೂಕಿನ ಏನೇಕಲ್ಲು ಶಂಕಪಾಲ-ಸುಬ್ರಮಣ್ಯ ದೇವರ ಮೀನುಗಳು ಕುಕ್ಕೆಯ ಜಾತ್ರೆಯ ಸಂದರ್ಭ ಕುಮಾರಧಾರೆಯಲ್ಲಿ ಉಪಸ್ಥಿತಿ ಇರುತ್ತವೆ. ಕುಕ್ಕೆಯೊಡೆಯನ ಜಳಕ ಆದ ಬಳಿಕ ನೈವೇದ್ಯ ಪಡೆದು ತಮ್ಮ ಮೂಲಕ್ಕೆ ಮರಳುತ್ತವೆ. ಇತಿಹಾಸ ಪ್ರಸಿದ್ಧ ಎನ್ನಲು ಅಲ್ಲಿ ಎಲ್ಲವೂ ಉದಾಹರಣೆಗಳಿವೆ.ಜಾತ್ರೆಯ ಜೊತೆಗೆ ಸ್ಥಳದ ದೈವಗಳ ನೇಮೋತ್ಸವವೂ ನಡೆಯುತ್ತದೆ.ಉರುಳು ಸೇವೆಯೂ ನಡೆಯುತ್ತದೆ.
ಕಳೆದ ಎರಡು ವರ್ಷಗಳಿಂದ ಕುಕ್ಕೆಯ ಜಾತ್ರೆ ಕೋವಿಡ್ ಮುಂಜಾಗ್ರತೆಯಲ್ಲಿ ನಡೆಯುತ್ತಿದೆಯಾದರೂ ಕುಕ್ಕೆಯ ಅಂಗಡಿಗುಡ್ಡೆಯಲ್ಲಿ ನಡೆಯುತ್ತಿದ್ದ ಬೃಹತ್ ಅನ್ನಛತ್ರ ಈ ಬಾರಿ ನೆನಪು ಮಾತ್ರವಾಗಿದೆ.ಮಾಸ್ಟರ್ ಪ್ಲಾನ್ ವತಿಯಿಂದ ನಡೆಯುವ ಕಾಮಗಾರಿಗಳ ಹಿನ್ನೆಲೆಯಲ್ಲಿ ಲಕ್ಷಾಂತರ ಜನರಿಗೆ ಜಾತ್ರೆ ಸಂದರ್ಭ ಭೋಜನದ ವ್ಯವಸ್ಥೆಗೆ ಸಹಕಾರಿಯಾಗಿದ್ದ ಅಂಗಡಿಗುಡ್ಡೆ ಇಂದು ಕಿರಿದಾಗಿದೆ.ಕುಕ್ಕೆಯ ನಗರ ಕಾಂಕ್ರೀಟ್ ಮಯವಾಗಿ ಎಲ್ಲಾ ಕಾಮಗಾರಿಗಳು ಕೂಡಾ ಮುಕ್ತಾಯದ ಹಂತದಲ್ಲಿದೆ.ಈ ಬಾರಿಯೂ ವೈರಸ್ ನ ಮುಂಜಾಗ್ರತೆಯಲ್ಲಿ ನಡೆಯಲಿರುವ ಕುಕ್ಕೆ ಜಾತ್ರೆಗೆ ಈ ಮೊದಲಿನ ಮೆರೆಗು ಬರಬೇಕಾದರೆ ತೊಟ್ಟಿಲು, ಸಂತೆಗಳು, ಮನೋರಂಜನ ಕಾರ್ಯಕ್ರಮಗಳು ಅಗತ್ಯವಾಗಿದೆ.
ಅದೇನೇ ಇರಲಿ, ಕುಕ್ಕೆಯ ಸೌಂದರ್ಯ, ಸೊಬಗನ್ನು ಮಾತಿನಲ್ಲಿ ವರ್ಣಿಸಲಾಗದು.ಕುಕ್ಕೆಯ ಇತಿಹಾಸ ತಿಳಿದಷ್ಟರ ಮಟ್ಟಿಗೆ ವಿವರಿಸಬಹುದಾಗಿದೆ. ಪೌರಾಣಿಕವಾಗಿ-ಐತಿಹಾಸಿಕವಾಗಿ ಎರಡೆರಡು ಕಥೆಗಳನ್ನು ಹೊಂದಿರುವ ಕುಕ್ಕೆಯ ಇತಿಹಾಸ ತಿಳಿದ ಅಳಿದುಳಿದ ಹಳೆಯ ತಲೆಮಾರುಗಳು ಹೇಳಿದ ಸತ್ಯವನ್ನೇ ಇಂದಿಗೂ ನಂಬಲಾಗುತ್ತಿದೆ.
✍️ಬರಹ :ದೀಪಕ್ ಹೊಸ್ಮಠ