ಸರ್ವೆ : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನಃ ನಿರ್ಮಾಣ ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ
ದೇವಸ್ಥಾನ ನಿರ್ಮಾಣವೆಂದರೆ ಇತಿಹಾಸ ಸೃಷ್ಟಿಸಿದಂತೆ- ಸಂಜೀವ ಮಠಂದೂರು
ಸವಣೂರು: ದೇವಸ್ಥಾನ ನಿರ್ಮಾಣವೆಂದರೆ ಇತಿಹಾಸ ಸೃಷ್ಟಿಸಿದಂತೆ. ಈ ಮಹಾಕಾರ್ಯ ಎಲ್ಲರಿಗೂ ಸಿಗುವುದಿಲ್ಲ. ಜೀವನದಲ್ಲಿ ಭಗವಂತ ಕೊಟ್ಟ ಅವಕಾಶದಲ್ಲಿ ಶ್ರದ್ಧೆಯಿಂದ ಭಾಗವಹಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಡಿ.21ರಿಂದ 28ರವರೆಗೆ ನಡೆಯಲಿರುವ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ರಾಜರ ಕಾಲದಲ್ಲಿ ಕಟ್ಟಿದ್ದ ದೇವಳಗಳ ವಾಸ್ತುಶಿಲ್ಪ, ಕೆತ್ತನೆಗಳಲ್ಲಿ ಆ ಕಾಲದ ಜೀವನ ಪದ್ಧತಿ, ಸಂಪ್ರದಾಯ ಪ್ರತಿಬಿಂಬಿತವಾಗಿದೆ. ಅದೇ ರೀತಿ ನಮ್ಮ ಕಾಲಘಟ್ಟದಲ್ಲಿ ನಿರ್ಮಾಣವಾಗುವ ದೇವಸ್ಥಾನಗಳು ಮುಂದಿನ ಪೀಳಿಗೆ ಶ್ರದ್ಧೆ, ಭಕ್ತಿಯನ್ನು ವರ್ಗಾಯಿಸುವಂತಾಗಬೇಕು. ಹಿಂದು ಸಮಾಜ ಜಗತ್ತಿಗೆ ಮಾರ್ಗದರ್ಶನ ನೀಡುವಂತಾಗಬೇಕು ಎಂದ ಶಾಸಕರು ಕೋವಿಡ್ನಿಂದ ಕಂಗೆಟ್ಟ ಕಾಲಘಟ್ಟದಲ್ಲೂ ಸರ್ವೆಯ ಭವ್ಯ ದೇಗುವ ನಿರ್ಮಾಣ ಎಂದಿಗೂ ಮರೆಯದ ಕಾರ್ಯ ಎಂದು ಶ್ಲಾಘಿಸಿದರು.
ನೆರವು ಭರವಸೆ: ದೇವಸ್ಥಾನದ ಅಂಗಳಕ್ಕೆ ಇಂಟರ್ಲಾಕ್, ತಡೆಗೋಡೆ, ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಸರ್ಕಾರದಿಂದ ನೆರವು ದಗಿಸುವಂತೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕರು ದೇವಸ್ಥಾನದ ಮೂಲಸೌಕರ್ಯ ಬೇಡಿಕೆಗಳಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಮೋಹನ್ ರೈ ಓಲೆಮುಂಡೋವು ಮಾತನಾಡಿ, ದೇವಳದ ನಿರ್ಮಾಣದಲ್ಲಿ ಅವಿರತ ಶ್ರಮಿಸುತ್ತಿರುವ ಗ್ರಾಮಸ್ಥರ ಶ್ರಮ ಅಪೂರ್ವ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲೋಕಪ್ಪಗೌಡ ಕರೆಮನೆ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಆನಂದ ಭಂಡಾರಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ ಸರ್ವೆದೋಳಗುತ್ತು, ದೇವಳದ ಪ್ರಧಾನ ಅರ್ಚಕ ಶ್ರೀರಾಮ ಕಲ್ಲೂರಾಯ, ವಿವಿಧ ಸಮಿತಿ ಸದಸ್ಯರಾದ ಬೆಳಿಯಪ್ಪಗೌಡ ಸರ್ವೆ, ವಿನಯ ಕುಮಾರ್ ರೈ, ತಾರನಾಥ ರೈ ಮೇಗಿನಗುತ್ತು, ರಸಿಕಾ ರೈ ಮೇಗಿನಗುತ್ತು, ಗೌತಮ್ ರೈ ಸರ್ವೆ, ವಸಂತ ರೈ ಸೊರಕೆ, ರಾಧಾಕೃಷ್ಣ ರೈ ರೆಂಜಲಾಡಿ, ಕುಕ್ಕ ಕಾಡಬಾಗಿಲು ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ ವಂದಿಸಿದರು.