ತುಳುನಾಡ ಹಾಸ್ಯಸಾರಥಿ – ಸಂದೀಪ್ ಶೆಟ್ಟಿ ರಾಯಿ.
ಬರಹ : ನೀತು ಬೆದ್ರ.
ನಗು ಮತ್ತು ಅಳು. ಮಾನವನ ಜೀವನದ ಅತ್ಯಮೂಲ್ಯ ಭಾವನೆ. ನಗುವಿನ ಸಿಹಿಯೊಂದಿಗೆ ಬಾಳುವುದರ ಜೊತೆಗೆ ಅಳುವಿನ ಕಹಿಯೊಂದಿಗೆ ಬೆರೆಯಬೇಕಷ್ಟೇ. Smile and find the world smiling at you ಎಂಬ ಮಾತಿದೆ. ನಾವು ನಕ್ಕರೆ ಜಗವು ನಗುವುದು. ಜಗತ್ತು ನಗುತ್ತಿರುವುದನ್ನು ನೀವು ನೋಡಬೇಕಾದರೆ ನೀವು ನಗುತ್ತಲಿರಬೇಕು.
ಒಂದು ಪಾತ್ರಕ್ಕೆ ಜೀವ ತುಂಬುತ್ತಾ. ತನ್ನ ನೈಜ ಬದುಕಿನ ಇಕ್ಕೆಲಗಳಲ್ಲಿ ಯಾವುದೇ ತೊಂದರೆ ಇದ್ದರು. ಪ್ರತಿ ಕ್ಷಣ ತನ್ನ ಅಭಿಮಾನಿಗಳನ್ನು ನಗಿಸುತ್ತಾನೆ, ತಾನು ನಗುತ್ತಾನೆ ಒಬ್ಬ ಕಲಾವಿದ. ಇಲ್ಲೊಬ್ಬರು ಕಲಾವಿದರ ಬಗ್ಗೆ ಹೇಳ ಹೊರಟಾಗ ಬಾಲ್ಯದಿಂದಲೂ ಜೀವನವೆಂಬ ಚಕ್ರದಲ್ಲಿ ಸದಾ ತಿರುಗುತ್ತಾ. ಹಾಸ್ಯ ನಟನಾಗಿ ತುಳುನಾಡ ಜನರನ್ನು ನಗೆಕಡಲಲ್ಲಿ ತೇಲಾಡಿಸಿದ ಅಪರೂಪದ ಪ್ರತಿಭೆ. ಜ್ಯೂನಿಯರ್ ವಾಮಂಜೂರು ಎಂಬ ಬಿರುದಾಂಕಿತ ಸಂದೀಪ್ ಶೆಟ್ಟಿ ರಾಯಿ.
ಬಂಟ್ವಾಳ ತಾಲೂಕಿನ ರಾಯಿ ಗ್ರಾಮದಲ್ಲಿ ರಮೇಶ್ ಶೆಟ್ಟಿ ಮತ್ತು ಬೇಬಿ ಶೆಟ್ಟಿ ದಂಪತಿಗಳ ಮಗನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ರಾಯಿಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಕೊಯಿಲದಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ವಾಮದಪದವಿನಲ್ಲಿ ಅಭ್ಯಸಿಸಿದರು.
ಬಾಲ್ಯದಲ್ಲಿಯೇ ಬಡತನದಲ್ಲಿ ಕೂಡಿದ ಕುಟುಂಬದಲ್ಲಿ ಬೆಳೆದ ಇವರು ಕಲೆಯಲ್ಲಿ ಬಡವರಾಗಿರಲಿಲ್ಲ. ಒಂದು ಮಾತಿದೆ ಬಾಲ್ಯದ ಪ್ರತಿಯೊಂದು ಶಿಕ್ಷಣವು ಆ ವ್ಯಕ್ತಿಯನ್ನು ಉತ್ತಮ ಸ್ಥಾನದೆಡೆಗೆ ಕೊಂಡ್ಯೊಯುವತ್ತ ಸಾಗುತ್ತದೆ ಎಂದು. ಇವರು ಕೂಡ ಇಂದು ಇಷ್ಟು ಬೆಳೆಯಲು ಸಹಕಾರಿಯಾದದ್ದು ಬಾಲ್ಯದ ದಿನಗಳಲ್ಲಿ ತಾನು ಕಂಡ ಕನಸ್ಸು ಮತ್ತು ಕನಸ್ಸನ್ನು ಸಹಕರಿಯಾಗಿಸಲು ಪಟ್ಟ ಶ್ರಮ.
ತಂದೆಗೂ ಗುರುವಿಗೂ ಒಂದು ಅಂತರವುಟು. ತಂದೆ ತೋರುವ ಸದ್ಗುರುವ, ಗುರುರಾಯ ಬಂಧನವ ಕಳೆವ ಸರ್ವಜ್ಞ. ಹೌದು ಇವರ ಬೆಳವಣಿಗೆಗೆ ಆದಾರ ಇವರ ಬಾಲ್ಯದ ಗುರುಗಳಾದ ರಮೇಶ್ ನಾಯಕ್, ಗಿರಿಜಾ ಟೀಚರ್ ಮತ್ತು ಭಾರತಿ ಟೀಚರ್. ಮೂರನೇ ತರಗತಿಯಿಂದಲೂ ಈ ಹುಡುಗನ ಬಳಿ ಏನೋ ಒಂದು ಆಗಾಧವಾದ ಶಕ್ತಿಯಿದೆ ಅದನ್ನು ಹೊರತರಬೇಕೆಂಬ ನಿಟ್ಟಿನಲ್ಲಿ ತಮ್ಮ ಗುರು ಕರ್ತವ್ಯವನ್ನು ನಿರ್ವಹಿಸಿದರು. ಇವರು ಪ್ರಥಮ ಪಿಯುಸಿಯಲ್ಲಿರುವಾಗ ಒಂದು ನಾಟಕದಲ್ಲಿ ಅಭಿನಯಿಸಿ,ಅಲ್ಲಿ ಇವರ ಅಭಿನಯಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತದೆ.
ಸಾಮಾಜಿಕ ಜಾಲತಾಣ, ಟಿ ವಿ, ಮೊಬೈಲ್ ಇಲ್ಲದ ಆ ಸಮಯದಲ್ಲಿ ರೇಡಿಯೋದಲ್ಲಿ ,ಅಥವಾ ಅಂದಿನ ಟೇಪ್ ರೆಕಾರ್ಡರ್ ನಲ್ಲಿ ನಾಟಕ ಕೇಳಿ ತಾನು ಒಂದು ದಿನ ಇಂತವರಂತೆಯೇ ಆಗಬೇಕು ಎಂದು ಕನಸು ಕಂಡವರು.ನಂತರ ದಿನಗಳಲ್ಲಿ ಗುರುಗಣೇಶ್ ಕಲಾ ತಂಡ ಕೊಯಿಲದಲ್ಲಿ “ಸೇರಿ ಕಥೆ ಅಲ್ಲ ಜೀವನ”ಎನ್ನುವ ಹಾಸ್ಯ ಪ್ರಹಸನ ಮಾಡುತ್ತಾರೆ ಇದು ಇಂದಿಗೆ ಸುಮಾರು ಒಂದುಸಾವಿರಕ್ಕೂ ಮಿಕ್ಕಿ ಪ್ರದರ್ಶನ ಕಾಣುತ್ತದೆ. ಇಲ್ಲಿಂದ ಸಂದೀಪ್ ಅವರಿಗೆ ಅವಕಾಶಗಳು ತುಂಬಾನೆ ಒದಗಿ ಬರುತ್ತದೆ.
ತುಳುನಾಡಿನ ಅತೀ ದೊಡ್ಡ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಇವರ ತಂಡ ಭಾಗವಹಿಸಿ ಪ್ರತಿ ಸರಣಿಯಲ್ಲಿಯೂ ಪ್ರಶಸ್ತಿ ವಿಜೇತ ತಂಡವಾಗಿ ಮೂಡಿಬರುತ್ತದೆ. ಬಂಟ್ವಾಳ ತಾಲೂಕಿನ ನಾಟಕ ಸ್ಪರ್ಧೆಯಲ್ಲಿ ಸತತವಾಗಿ ಐದು ವರ್ಷ ಉತ್ತಮ ಹಾಸ್ಯನಟ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರಿಗಿದೆ. ಅದಲ್ಲದೆ ಜಿಲ್ಲಾ ಮಟ್ಟದ ನಾಟಕ ಸ್ಪರ್ದೆಯಲ್ಲಿ ಉತ್ತಮ ಹಾಸ್ಯನಟನಾಗಿಯೂ ಮೂಡಿಬಂದಿರುತ್ತಾರೆ.
ಪ್ರತಿಬಾರಿ ನಗಿಸುತ್ತಾ ತಾನು ನಗು ನಗುತ್ತಿರುವ ಸಂದೀಪ್ ಐದು ನಾಟಕಗಳನ್ನು ಬರೆದು ಅಭಿನಯಿಸಿದ್ದಾರೆ. ಇವರ ಮೊದಲ ನಾಟಕ “ಎನ್ನ ತಂಗಡಿ” ನಂತರ ,ಉಲಾಯಿಲೆಪ್ಪುಗ, ಮುಗಲ್, ನಾಲಾಯಿ ಮಗುರುಜಿ, ಮುಂದಿನ ಬಾರಿ ಪ್ರದರ್ಶನವಾಗಲು “ಲಗಾಡಿ ದೆತ್ತೆರ್” ನಾಟಕ ಸಿದ್ದವಾಗುತ್ತಿದೆ. ಇದಲ್ಲದೇ ಇವರು ದೇವದಾಸ್ ಕಾಪಿಕಾಡ್ ರವರ ನಾಟಕಗಳು ಸೇರಿದಂತೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕಿರುಚಿತ್ರಗಳಲ್ಲಿ, ತುಳು ಕನ್ನಡ,ಮಾಲಯಾಳಂ ಅಲ್ಬಮ್ ಹಾಡಿನಲ್ಲಿಯೂ ನಟಿಸಿದ ಕೀರ್ತಿ ಸಂದೀಪ್ ಅವರಿಗಿದೆ. ಇವರ ಕಲಾಶ್ರೀ ಕುಡ್ಲ ತಂಡದ “ಕುಸಲ್ದ ಕುರ್ಲರಿ” ಅನ್ನುವ ಹಾಸ್ಯ ಪ್ರಹಸನ ಮುಂಬೈ ಸೇರಿದಂತೆ ಹೊರ ರಾಜ್ಯಗಳಲ್ಲಿ ಪ್ರದರ್ಶನಗೊಂಡು ಪ್ರಸಿದ್ದಿಯನ್ನು ಪಡೆದುಕೊಂಡಿದೆ.
ಇಂದಿನ ದಿನಗಳಲ್ಲಿ ತುಳು ಚಿತ್ರರಂಗ ಯಶಸ್ವಿನತ್ತ ದಾಪುಗಾಲು ಹಾಕುತ್ತಿದೆ. ಇವರು ಹಲವಾರು ತುಳು ಚಿತ್ರಗಳಲ್ಲಿ ಅಭಿನಯಿಸಿ ತುಳು ಸಿನಿ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಇವರು ಅಭಿನಯಿಸಿದ ಪ್ರಮುಖ ಚಿತ್ರಗಳೆಂದರೆ, ರೈಟ್ ಬೊಕ್ಕ ಲೆಪ್ಟ್, ದಂಡ್, ಅಮ್ಮೆರ್ ಪೋಲಿಸ್, ಎನ್ನ ,ಜಬರ್ದಸ್ತ್ ಶಂಕರ, ಗಿರಿಗಿಟ್,ಇಂಗ್ಲೀಷ್,ವಿಕ್ರಾಂತ್. ಮುಂಬರುವ ವೈಟ್ ಆ್ಯಂಡ್ ಬ್ಲ್ಯಾಕ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಇವರು ಅಭಿನಯಿಸಿದ ಲಕ್ಕಿಬಾಬು, ಗಮ್ಮತ್, ಪುರುಷೋತ್ತಮ ಪ್ರಸಂಗ ಕನ್ನಡ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಅದಲ್ಲದೇ “ಜೀವನ ಯಜ್ಞ” ಎನ್ನುವಂತಹ ಕನ್ನಡ ಚಿತ್ರದಲ್ಲಿಯೂ ಅಭಿನಯಿಸಿದ ಕೀರ್ತಿ ಇವರಿಗಿದೆ. ಅದಲ್ಲದೇ ಇನ್ನು ಮುಂದಕ್ಕೆ ಅರವಿಂದ್ ಬೋಳಾರ್ ಪ್ರಸ್ತುತತೆಯಲ್ಲಿ ನಮ್ಮ ಕುಡ್ಲ ವಾಹಿನಿಯಲ್ಲಿ ಮೂಡಿಬರುವ “ಬೊಂಬಾಟ್ ಬೋಳಾರ್” ಟಿವಿ ರಿಯಾಲಿಟಿ ಶೋನಲ್ಲಿ ಕೂಡ ಇವರು ಕಾಣಿಸಿಕೊಳ್ಳಲ್ಲಿದ್ದಾರೆ.
ತುಳು ರಂಗಭೂಮಿಗೆ ಹಲವಾರು ವರ್ಷಗಳ ಇತಿಹಾಸವಿದೆ. ತುಳು ರಂಗಭೂಮಿ ಮತ್ತು ಸಿನೆಮಾ, ಅದಲ್ಲದೇ ದೇವದಾಸ್ ಕಾಪಿಕಾಡ್ ಸರ್ ನನಗೆ ಸ್ಪೂರ್ತಿ ಅನ್ನುವ ಇವರು ಬೆಳೆದಾಗ ಸಾಮಾಜಿಕ ಜಾಲತಾಣದ ಯಾವುದೇ ಪ್ರಚಾರವಿರಲಿಲ್ಲ. ಇವರ ಅಭಿನಯದ ಕೀರ್ತಿ ಬಾಯಿಂದ ಬಾಯಿಗೆ ಪಸರಿಸಿದ್ದು. ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ಧರ್ಮ,ಆಚಾರ ವಿಚಾರಗಳಿಗೆ ಯಾವುದೇ ದಕ್ಕೆಯಾಗದಂತೆ ಹಾಸ್ಯವನ್ನು ಪ್ರಸ್ತುತ ಪಡಿಸಬೇಕೆನ್ನುತ್ತಾರೆ ಸಂದೀಪ್.
ಕಲಾವಿದ ಏನ್ನಾನದರೂ ತಪ್ಪು ಮಾಡಿದರೆ, ಆತನನ್ನು ವೈಯುಕ್ತಿಕವಾಗಿ ತೇಜೋವದೆ ಮಾಡುವ ಬದಲು, ಆತನ ತಪ್ಪನ್ನು ತಿದ್ದಿ ಹೇಳುವಂತಹ ಕೆಲಸವನ್ನು ಮಾಡಬೇಕು. ಒಬ್ಬ ಕಲಾವಿದನ ಆತ್ಮಸ್ತೈರ್ಯವನ್ನು ಕುಗ್ಗಿಸುವ ಕೆಲಸವನ್ನು ಎಂದಿಗೂ ಮಾಡಬೇಡಿ ಎನ್ನುವ ಸಂದೀಪ್ ಇವರು. ಷಣ್ಮುಕ ಕಲಾತಂಡ ಬದಿನಡಿಯ ಸದಸ್ಯರಾಗಿ, ಕಲಾಶ್ರೀ ಬೆದ್ರದ ನಾಟಕ ರಚನೆಗಾರ,ನಿರ್ದೇಶಕನಾಗಿ ಬೆಳೆಯುತ್ತಿದ್ದಾರೆ. ಇವರ ಮುಂದಿನ ಕಲಾಜೀವನವು ಉತ್ತಮವಾಗಿರಲಿ,ತುಳುನಾಡ ದೈವ ದೇವರ ಆಶೀರ್ವಾದ ಸದಾ ಇವರ ಮೇಲಿರಲಿ ಎನ್ನುವುದೇ ನನ್ನ ಆಶಯ..
ಚಪ್ಪೆಸೋಡಾ ಪರಮಸುಂದರಿಯರ ನಿರ್ದೇಶಕ ::—–
ಇತ್ತೀಚೆಗೆ ತುಳುವಿನಲ್ಲಿ ಮೂಡಿಬಂದಂತಹ, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ತುಳುವಿನ ವಿನೂತನ ಹಾಸ್ಯ ಅಲ್ಬಮ್ ಹಾಡು “ಚಪ್ಪೆಸೋಡಾ” ಇದರ ಸಾಹಿತ್ಯ, ನಿರ್ದೇಶನದೊಂದಿಗೆ ಆ ಹಾಡಿನಲ್ಲಿ ನಟಿಸಿದ್ದಾರೆ. ಮುಂದಿನ ದಿನದಲ್ಲಿ ಇದೇ ತಂಡ “ಹಾಪ್ ಸುಕ್ಕ ” ಅನ್ನುವಂತಹ ವಿಶಿಷ್ಟವಾದ ಹಾಸ್ಯವನ್ನು ನಿಮ್ಮೆದುರು ಹೊರತರುವ ಪ್ರಯತ್ನದಲ್ಲಿದ್ದಾರೆ.
ಬಾಲ್ಯದ ಕಷ್ಟದೊಳಗೆ, ಮೊಗದ ತುಂಬಾ ನಗುವಿನ ಚಿತ್ತಾರ. ಅಭಿನಯಕ್ಕೆ ಕೀರ್ತಿ ಹೆಚ್ಚಿಸಿದ ತುಳುನಾಡು ಬೆಳಗುವ ಸೂರ್ಯ. ರಂಗಭೂಮಿಯ ಉಸಿರು, ತುಳು ಸಿನೆಮಾ ಲೋಕದ ಕಣ್ಣು. ಬಲೇ ತೆಲಿಪಾಲೆಯಲ್ಲಿ ನಗಿಸಿದ ಸಾಧಕ. ” ವಾ ಏಸಲಾ ಕಟ್ಟುಲೇ ಜನಕುಲೆನ್ ತೆಲಿಪಾಲೇ” ಅನ್ನುತ್ತಾ ನಗೆಕಡಲಲ್ಲಿ ನಗಿಸುವ ತುಳುನಾಡ “ಹಾಸ್ಯಸಾರಥಿ.”ಇದು ಸಂದೀಪನ ಕಹಾನಿ.