ಅಭಿನಯವನ್ನು ಅಕ್ಕರೆಯಿಂದ ಆರಾಧಿಸುವ ಶ್ರೀಮತಿ ಸರೋಜಿನಿ ಶೆಟ್ಟಿ, ಮಂಗಳೂರು        

ಮಾನವ ತಾನು ಮಾಡುವ ಕಾಯಕವನ್ನು ಭಗವಂತನ ಪೂಜೆ ಎಂಬ ಆರಾಧನಾ ಭಾವದಿಂದ ಮಾಡಬೇಕು. ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲುಗಳನ್ನು ಏರಬೇಕು. ಸೋಲು ಗೆಲುವುಗಳನ್ನು ಏಕಪ್ರಕಾರವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಒದ್ದಾಗ, ಎಡವಿದಾಗ, ಬಿದ್ದಾಗ, ಸಾವರಿಸಿ ಎದ್ದೇಳಬೇಕು. ಸೋಲು ಹೃದಯಕ್ಕೆ ಇಳಿಯಲು, ಗೆಲುವು ತಲೆಗೇರಲು ಬಿಡಬಾರದು. ಅನುಭವಗಳು ಭಾರವಾಗಬಾರದು. ನಾನಿನ್ನು ಕಲಿಯುವ ಮಗುವೆಂಬ ಮುಗ್ಧತೆ, ಪ್ರಾಂಜಲತೆಗಳು ಮನದಲ್ಲಿ ಮನೆಮಾಡಬೇಕು. ಅದೃಷ್ಟದ ಗುರುವಾಗುವ ಬದಲು ಪರಿಶ್ರಮದ ಗುಲಾಮರಾಗಬೇಕು. ಪರಿಪೂರ್ಣತೆ ಪರಿಪಾಠವಾಗಬೇಕು. ಸಿಗುವ, ಪಡೆಯುವ ಹಣದ ಅನುಪಾತಕ್ಕೆ ಕಲಾ ಸೇವೆ ಎಂದೂ ಮಾನದಂಡವಾಗಬಾರದು. ತನ್ನಲ್ಲಿರುವ ಪ್ರತಿಭೆ, ಪ್ರೌಢಿಮೆ, ಪ್ರಕರತೆಗಳನ್ನು ಒರೆಗೆ ಹಚ್ಚಿ, ಲೋಕ ಮೆಚ್ಚಿ ಹೌದೌದೆಂದು ಉಲಿಯುವಂತೆ ಮಾಡಬೇಕು. ಈ ಎಲ್ಲ ಗುಣ ಹಾಗೂ ಸೌಜನ್ಯವುಳ್ಳವರು, ಮನಸಾರೆ ಅಭಿನಯನ್ನು ಆರಾಧಿಸಿ ಅಭಿನಯಿಸುವವರು ಶ್ರೀಮತಿ ಸರೋಜಿನಿ ಶೆಟ್ಟಿ, ಶಕ್ತಿನಗರ, ಮಂಗಳೂರು ಇವರು.

ಐದನೆಯ ತರಗತಿಯ ಕಿಶೋರಿ; ಕಠೋರ, ಕಟುಕತೆಯ ಕಂಸನಾಗಿ ರಂಗವೇರಿದವರು. ಶಿವರಾಮ ಕಾರಂತರ ಕಾದಂಬರಿ, ಬಿ. ವಿ. ಕಾರಂತರ ನಿರ್ದೇಶನದ ‘ಚೋಮನ ದುಡಿ’ ಚಲನಚಿತ್ರದಿಂದ ಬೆಳ್ಳಿತೆರೆಗೆ ಪ್ರವೇಶ. ನಾಲ್ಕುವರೆ ದಶಕಗಳಿಂದ ರಂಗಭೂಮಿ, ಚಲನಚಿತ್ರ, ಕಿರುತೆರೆಗಳಲ್ಲಿ ಅಭಿನಯಿಸಿದ “ಅಭಿನಯ ಅಭಿನೇತ್ರಿ, ರಂಗ ಶಾರದೆ” ಬಿರುದಾಂಕಿತೆ. ಕಂಡನೆ ಬುಡೆದಿ, ಕಾಸ್ದಾಯೆ ಕಂಡನೆ, ತಮ್ಮಲೆ ಅರ್ವತ್ತನ ಕೋಲ, ಏರ್ ಮಲ್ದಿನ ತಪ್ಪು, ವಿಶ್ವಾಮಿತ್ರ ಮೇನಕೆ, ಪೊರ್ತ್ ಕಂತ್ಂಡ್, ತೆಲ್ಪೆರೆ ಕಲ್ಪಿ, ನೆತ್ತೆರಾ ನೀರಾ? ಬಂಗಾರ್ ಬಾಲೆ, ಈರ್ ದೂರ, ಗಂಟೇತಾಂಡ್, ಬಲೇ ಚಾ ಪರ್ಕ, ಕಟಿಲ್ದಪ್ಪೆ ಉಳಾಲ್ದಿ ಇವು ಉಲ್ಲೇಖಿಸಲೇ ಬೇಕಾದ ತುಳು ನಾಟಕಗಳು. ಮಣ್ಣಿನ ಮಗಳು, ಬೆಳವಾಡಿ ಮಲ್ಲಮ್ಮ, ವೀರ ರಾಣಿ ಅಬ್ಬಕ್ಕ, ಕಿತ್ತೂರ ಚನ್ನಮ್ಮ, ವೀರ ಎಚ್ಚಮ್ಮ ನಾಯಕ, ಸತ್ಯ ಹರಿಶ್ಚಂದ್ರ, ಭಕ್ತ ಪ್ರಹ್ಲಾದ, ಶನಿ ಪ್ರಭಾವ ಮುಂತಾದವು ಕನ್ನಡ ನಾಟಕಗಳು. ಉಭಯ ಭಾಷೆಗಳಲ್ಲಿ
2500ಕ್ಕೂ ಮಿಕ್ಕಿ ಬಣ್ಣ ಹಚ್ಚಿದ ನಾಟಕ ಕಲಾವಿದೆ.

ತುಳುನಾಡ ಸಿರಿ, ಬಂಗಾರ್ ಪಟ್ಲೆರ್, ಸಂಗಮ ಸಾಕ್ಷಿ, ಬೊಳ್ಳಿದೋಟ, ದಾರೆದ ಸೀರೆ, ಸೆಪ್ಟೆಂಬರ್ ಎಡ್ಮ, ಮಾರಿ ಬಲೆ, ಚಂಡಿಕೋರಿ, ತೆಲಿಕೆದ ಬೊಳ್ಳಿ, ಅರೆ ಮರ್ಲೆರ್, ಏರೆಗಾವುಯೆ ಕಿರಿಕಿರಿ, ಬದಿ, ಚಾಲಿ ಪೋಲಿಲು, ದಬಕ್ ದಬ ಐಸಾ, ರೀಕ್ಷಾ ಡ್ರೈವರ್, ಜೈ ತುಳುನಾಡ್ ಮುಂತಾದ ತುಳು ಚಲನಚಿತ್ರಗಳಲ್ಲಿ ಅಭಿನಯ. ಚೋಮನ ದುಡಿ, ಮಾತೃ ವಾತ್ಸಲ್ಯ, ಶಿವಶಂಕರ, ಅರ್ಜುನ, ಗೋಲಿಬಾರ್, ಲವ್, ಶುಭಮಂಗಳ, ಪುಟ್ಟ ಹೆಂಡತಿ, ಈ ಜೀವ ನಿನಗಾಗಿ, ಕೃಷ್ಣ ನೀ ಬೇಗನೆ ಬಾರೋ, ಹಳ್ಳಿಯಾದರೇನು ಶಿವ, ಚೆಲ್ಲಾಪಿಲ್ಲಿ ಮೊದಲಾದವು ಕನ್ನಡ ಚಿತ್ರಗಳು. ಮಾಂಗಲ್ಯ ನೇಣಲ್ಲ, ಜೀವನ್ಮುಖಿ, ಚಿರಸ್ಮರಣೆ, ಸರಸಮ್ಮನ ಸಮಾಧಿ, ಇರುಳು ಇವುಗಳು ಕನ್ನಡ ಧಾರಾವಾಹಿಗಳಾದರೆ ಬರವುದ ಬಂಡಸಾಲೆ ತುಳು ಧಾರಾವಾಹಿಯಲ್ಲಿ ಅಭಿನಯ. ಮನಮೋಹನ್ ದೇಸಾಯಿ ದಿಗ್ದರ್ಶನದ ಹಿಂದಿಯ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅಭಿನಯದ “ಗಂಗಾ ಯಮುನಾ ಸರಸ್ವತಿ” ಚಿತ್ರದಲ್ಲಿ ಮೀನಾಕ್ಷಿ ಶೇಷಾದ್ರಿ ಅವರ ಗೆಳತಿಯಾಗಿ ಅಭಿನಯ. ಕಡೂರ್ ಗೋಪಾಲಕೃಷ್ಣನ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಮಲೆಯಾಳಿ ಚಿತ್ರ ‘ವಿಧೇಯನ್’ ನಲ್ಲಿ ದೈತ್ಯ ಪ್ರತಿಭೆ ಮಮ್ಮುಟ್ಟಿ ಜತೆಯಲ್ಲಿ ಅಭಿನಯಿಸಿದ ನೆಗಳ್ತೆ ಸರೋಜಿನಿ ಅವರದ್ದು.
 
ತನ್ನಲ್ಲಿರುವ ಸುಪ್ತವಾದ ಅಭಿನಯ ಕಲೆ ಲೋಕಮುಖವಾಗಿ ಪ್ರಕಟಗೊಳ್ಳಲು
ಮಂಗಳೂರಿನ ಶ್ರೀ ಗಣೇಶ್ ನಾಟಕ ಸಭಾ, ಚಾ ಪರ್ಕ ಕಲಾವಿದರು, ಶ್ರೀಲಲಿತೆ ಕಲಾವಿದರು ಹಾಗೂ ಶರವು ಕಲಾವಿದರು
ಮೊದಲಾದ ತಂಡಗಳನ್ನು ಸದಾ ಸ್ಮರಿಸುತ್ತಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಕೌಟುಂಬಿಕ ಕಥನಗಳ ಪಾತ್ರಗಳಿಗೆ ಜೀವಕಲೆ ತುಂಬುವ ಅಪರೂಪದ ಕಲಾವಿದೆ ಸರೋಜಿನಿಯವರು. ‘ಅಪ್ಪೆ ಭಗವತಿ’ ನಾಟಕದ ಭಗವತಿ ಪಾತ್ರ, ಕದ್ರಿ ನವನೀತ ಶೆಟ್ಟಿ ವಿರಚಿತ “ಕಟಿಲ್ದಪ್ಪೆ ಉಳಾಲ್ದಿ’ಯ ಶ್ರೀದೇವಿ ಪಾತ್ರಗಳನ್ನು ನಾಟಕ ರಸಿಕರು ಮೆಚ್ಚುವಂತೆ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ತುಳುನಾಡಿನ ಸಾಂಸ್ಕೃತಿಕ ಇತಿಹಾಸದ ಮೇರು ಪ್ರತಿಭೆ ದಿವಂಗತ ಕೆ. ಎನ್. ಟೈಲರ್ ಅವರು ‘ತುಳುನಾಡ ಸಿರಿ’ ಚಿತ್ರದ ಸಮಯದಲ್ಲಿ ‘ಶರ್ವಾಣಿ’ ಹೆಸರಿದ್ದ ಇವರನ್ನು ‘ಸರೋಜಿನಿ’ ಎಂದು ನಾಮಾಂತರಿಸಿದ್ದು. ಮುಂದೆ ಆ ಹೆಸರೇ ಖಾಯಂ ಆಯಿತು.

ಸರೋಜಿನಿಯವರ ಅಭಿನಯದ ಕ್ಷೇತ್ರ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ದೆಹಲಿ ಮಾತ್ರವಲ್ಲದೆ ಅರಬ್ ರಾಷ್ಟ್ರಗಳಾದ ದುಬಾಯಿ, ಅಬುಧಾಬಿ, ಬ್ಯಾರೀನ್, ಓಮನ್ ಗಳಿಗೂ ವ್ಯಾಪಿಸಿದೆ. ಇನ್ನು ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಹೇಳುವುದಾದರೆ ದೊಡ್ಡ ಪಟ್ಟಿಯೇ ಆಗುತ್ತದೆ. 1984ರ ಪ್ರಥಮ ತುಳು ವಿಶ್ವ ಸಮ್ಮೇಳನದಲ್ಲಿ ಧರ್ಮಸ್ಥಳದ ಹೆಗ್ಗಡೆ ದಂಪತಿಗಳಿಂದ ವಿಶೇಷ ಮನ್ನಣೆ, 1989ರಲ್ಲಿ ರಂಗಭೂಮಿ ಪ್ರಶಸ್ತಿ, 1990ರ ಉದಯವಾಣಿ ವಿಂಶತಿ ಪ್ರಶಸ್ತಿ, 1999ರಲ್ಲಿ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ, 2003ರಲ್ಲಿ ತೌಳವ ಪ್ರಶಸ್ತಿ, 2005ರಲ್ಲಿ ತುಳು ಸಿರಿ ಪ್ರಶಸ್ತಿ, 2007ರಲ್ಲಿ ರಂಗ ಭಾರತಿ ದೆಹಲಿ ಪ್ರಶಸ್ತಿ, 2008ರಲ್ಲಿ ಸ್ವರ್ಣ ಕಮಲ ಪ್ರಶಸ್ತಿ, 2010ರಲ್ಲಿ ದಿ| ಎಂ. ವಿಷ್ಣುಮೂರ್ತಿ ಸ್ಮಾರಕ ಪ್ರಶಸ್ತಿ, 2011ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2011ರಲ್ಲಿ ನಡೆದ ಕಲೋತ್ಸವದಲ್ಲಿ ಶ್ರೀ ಕಟಿಲ್ದಪ್ಪೆ ಉಳಾಲ್ದಿ ನಾಟಕದ ಶ್ರೀ ದೇವಿ ಪಾತ್ರಕ್ಕೆ ಶ್ರೇಷ್ಠ ನಟಿ ಪ್ರಶಸ್ತಿ, 2016ರಲ್ಲಿ ವಿಶ್ವ ತುಳುವೆರೆ ಆಯನೊ ಸಂದರ್ಭದಲ್ಲಿ ‘ಜೀವನಮಾನ ಸಾಧನಾ’ ಪ್ರಶಸ್ತಿ ಇನ್ನೂ ಅನೇಕಾನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು ಸರೋಜಿನಿಯವರು.

ಸರೋಜಿನಿ ಶೆಟ್ಟಿಯವರ ಹುಟ್ಟೂರು ಪೊಳಲಿಯ ಹತ್ತಿರದ ಬೆಳ್ಳೂರು. (ಕೊಂಚಾಡಿ) ಶ್ರೀರಾಮಾಶ್ರಮ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಕೆನರಾ ಕಾಲೇಜಿನಿಂದ ಮಾಡಿದವರು. ಬಣ್ಣದ ಜೀವನ ಹಾಗೂ ಸಂಸಾರಿಕ ಜೀವನ ಎರಡನ್ನೂ ಸುಲಲಿತವಾಗಿ ನಿಭಾಯಿಸುವ ಕಲೆಯನ್ನು ಬಲ್ಲವರಾದ ಸರೋಜಿನಿಯವರದ್ದು ಚಿಕ್ಕ ಚೊಕ್ಕ ಸಂಸಾರ. ಪತಿ ಸುಭಾಶ್ ಶೆಟ್ಟಿ, ಸುತ ಹರಿಪ್ರಸಾದ್ ಅವರೊಂದಿಗಿನ ಒಲುಮೆಯ ಸಂಸಾರ. ಅವರ ಮುಂದಿನ ಬಾಳು ಸುಖಪ್ರದವಾಗಿರಲಿ. ಕಲಾ ಮಾತೆಯ ಅನುಗ್ರಹ ಅನವರತ ಅವರಿಗಿರಲಿ ಎಂಬ ಪ್ರಾರ್ಥನೆ ನಮ್ಮದು.

ಲೇಖನ : ಉದಯ ಶೆಟ್ಟಿ, ಪಂಜಿಮಾರು.

Leave A Reply

Your email address will not be published.