ರೈತ ವಿರೋಧಿ ಎಂದು ಹಣೆಪಟ್ಟಿ ಹೊತ್ತಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಪ್ರಧಾನಿ ನರೇಂದ್ರ ಮೋದಿ !
ದೇಶದ ಹಲವೆಡೆ ನಿರಂತರ ಮಳೆಯಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶದ ರೈತರನ್ನುದ್ದೇಶಿಸಿ ಮಾತನಾಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿರುವುದಾಗಿ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರಿಂದ ಸಾಕಷ್ಟು ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಕೇಂದ್ರ ಸರ್ಕಾರ ಇಂದು ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆದಿದೆ.
ಇಂದು ಬೆಳಗ್ಗೆ 9 ಗಂಟೆಗೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಹತ್ವದ ಘೋಷಣೆ ಮಾಡಿದರು. ಕಳೆದ ಒಂದು ವರ್ಷಗಳಿಂದ ರೈತರು ನಿರಂತರವಾಗಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿಕೊಂಡು ಬಂದಿದ್ದರು. ಕೊನೆಗೂ ರೈತರ ಪ್ರತಿಭಟನೆಗಳಿಗೆ ಮಣಿದಿರುವ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ.
ಇದಕ್ಕೂ ಮುನ್ನ ಶ್ರೀ ಗುರುನಾನಕ್ ದೇವ್‌ಜಿ ಪ್ರಕಾಶ್ ಪುರಬ್ ಹಾಗೂ ದೇವ್ ದೀಪಾವಳಿ ಶುಭಕೋರುವ ಮೂಲಕ ಮಾತು ಆರಂಭಿಸಿದ ಪ್ರಧಾನಿ ಮೋದಿ, ಒಂದೂವರೆ ವರ್ಷಗಳ ನಂತರ ಕರ್ತಾರ್‌ಪಿರ್ ಕಾರಿಡಾರ್ ಮತ್ತೆ ತೆರೆದಿರುವುದು ಸಂತಸ ತಂದಿದೆ. ಗುರುನಾನಕ್
ಅವರು ‘ವಿಚ್ ದುನಿಯಾ ಸೇವ್ ಕಮೈಯೆ, ತಾನ್ ದರ್ಗಾ ಬೈಸನ್ ಪೈಯೆಯಾ’ ಎಂದು ಹೇಳಿದ್ದರು. ಅಂದರೆ ದೇಶ ಸೇವೆಯ ಹಾದಿ ಹಿಡಿದರೆ ಮಾತ್ರ ಬದುಕು ಹಸನಾಗಲು ಸಾಧ್ಯ. ಜನರ ಜೀವನವನ್ನು ಸುಲಭಗೊಳಿಸಲು ನಮ್ಮ ಸರ್ಕಾರ ಈ ಸೇವಾ ಭಾವನೆಯೊಂದಿಗೆ ಕೆಲಸ ಮಾಡುತ್ತಿದೆ ಎಂದರು.
ನಾನು 2014ರಲ್ಲಿ ಪ್ರಧಾನಿ ಆದಾಗಿನಿಂದಲೂ ನಮ್ಮ ಸರ್ಕಾರವು ರೈತರ ಕಲ್ಯಾಣ ಮತ್ತು ಅಭಿವೃದ್ಧಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದೆ. ರೈತರ ಶ್ರಮಕ್ಕೆ ತಕ್ಕ ಮೊತ್ತ ಸಿಗುವಂತೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾವು ಗ್ರಾಮೀಣ ಮೂಲಸೌಕರ್ಯ ಮಾರುಕಟ್ಟೆಯನ್ನು ಬಲಪಡಿಸಿದ್ದೇವೆ. ನಾವು ಎಂಎಸ್‌ಪಿ ಹೆಚ್ಚಿಸಿರುವುದು ಮಾತ್ರವಲ್ಲದೆ ದಾಖಲೆಯ ಸರ್ಕಾರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ನಮ್ಮ ಸರ್ಕಾರದ ಸಂಗ್ರಹಣೆಯು ಕಳೆದ ಹಲವು ದಶಕಗಳ ದಾಖಲೆಯನ್ನು ಮುರಿದಿದೆ. ರೈತರಿಗೆ ಸಮಂಜಸವಾದ ದರದಲ್ಲಿ ಬೀಜಗಳನ್ನು ಒದಗಿಸಲು ಮತ್ತು ಸೂಕ್ಷ್ಮ ನೀರಾವರಿ, 22 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್‌ಗಳಂತಹ ಸೌಲಭ್ಯಗಳನ್ನು ಒದಗಿಸಲು ನಾವು ಯೋಜನೆ ಮಾಡಿದ್ದೇವೆ. ಇಂತಹ ಅಂಶಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಗಿವೆ. ನಾವು ಫಸಲ್ ಬಿಮಾ ಯೋಜನೆಯನ್ನು ಬಲಪಡಿಸಿದ್ದೇವೆ, ಹೆಚ್ಚಿನ ರೈತರನ್ನು ಅದರ ಅಡಿಯಲ್ಲಿ ತಂದಿದ್ದೇವೆ ಎಂದರು.
ಹಾಗೆಯೇ ನಾವು ಎಲ್ಲಾ 3 ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ತಿಂಗಳು ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಕಾರ್ಯವಿಧಾನವನ್ನು ಪ್ರಾರಂಭಿಸುತ್ತೇವೆ. ರೈತರು ತಮ್ಮ ಕುಟುಂಬಗಳಿಗೆ ಮರಳಲು ನಾನು ಒತ್ತಾಯಿಸುತ್ತೇನೆ. ಇಲ್ಲಿಯವರೆಗೆ ನಾನೇನು ಮಾಡಿದ್ದೇನೆ, ಅದೆಲ್ಲವು ರೈತರಿಗಾಗಿ ಮಾಡಿದ್ದೇನೆ. ನಾನು ಮಾಡುತ್ತಿರುವುದೆಲ್ಲ ನನ್ನ ದೇಶಕ್ಕಾಗಿ ಎಂದು ಹೇಳಿದರು.
ನಮ್ಮ ಸರ್ಕಾರ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಂಪೂರ್ಣ ಪ್ರಯತ್ನ ಮಾಡುತ್ತಿದೆ. ದೇಶದಲ್ಲಿರುವ ಸಣ್ಣ ರೈತರು ಬಲಿಷ್ಠರಾಗಲು ನಾವು ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ. ಈ ಹಿಂದಿನ ಸರ್ಕಾರಗಳು ಕೂಡಾ ಈ ಕಾನೂನು ತರಲು ಚಿಂತನೆ ನಡೆಸಿದ್ದವು. ದೇಶದ ಕೋಟಿ ಕೋಟಿ ರೈತರು ಈ ಮೂರು ಕೃಷಿ ಕಾನೂನುಗಳನ್ನು ಸ್ವಾಗತಿಸಿದ್ದಾರೆ. ಆದರೂ ಪ್ರತಿಭಟನೆಗೆ ಮಣಿದು, ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವುದಾಗಿ ಭಾವುಕರಾಗಿ ಮೋದಿ ನುಡಿದರು.