ರೈತರು ಕೃಷಿಯಿಂದ ವಿಮುಖರಾಗುವುದನ್ನು ತಡೆಯಲು ಹಲವು ಯೋಜನೆ -ಈರಣ್ಣ ಕಡಾಡಿ

ಕೃಷಿಯಿಂದ ರೈತರು ವಿಮುಖರಾಗುವುದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರ ಹಲವು ಯೋಜನೆಗಳನ್ನು ರೈತರಿಗಾಗಿ ಜಾರಿಗೊಳಿಸುತ್ತಿದ್ದು, ಇದನ್ನು ತಿಳಿದು ಯೋಜನೆಗಳ ಸದುಪಯೋಗಪಡಿಸಿ ಕೃಷಿಯಲ್ಲಿ ಉತ್ತಮ ಬೆಳವಣಿಗೆಯೊಂದಿಗೆ ರೈತರು ಸಮಾಜಕ್ಕೂ ಕೊಡುಗೆಯನ್ನು ನೀಡಬೇಕು ಮತ್ತು ಸರಕಾರದ ಯೋಜನೆಗಳನ್ನು ನಮ್ಮ ಕಾರ್ಯಕರ್ತರು ಪ್ರತಿಯೊಬ್ಬ ರೈತನಿಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ.

ಸುಳ್ಯ ಅಂಬಟೆಡ್ಕದ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ನಡೆದ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲಾ ಉದ್ಯೋಗ ನಿಂತರು ರೈತರು ಮಾತ್ರ ಕೃಷಿಯಿಂದ ದೂರ ನಿಂತಿಲ್ಲ. ಹೊಟ್ಟೆಗೆ ಅನ್ನ ನೀಡುವ ಕಾಯಕವನ್ನು ರೈತ ಮಾಡಿದ್ದಾನೆ ಅವರ ಕಾರ್ಯವನ್ನು ರೈತ ಮೋರ್ಚಾ ಶಾಘಿಸುತ್ತದೆ ಎಂದರು.

ಎಲ್ಲಾ ಕ್ಷೇತ್ರದಲ್ಲಿ ಇರುವಂತೆ ರೈತರಲ್ಲಿಯೂ ಸಮಸ್ಯೆಗಳಿವೆ. ಅದನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ರೈತರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಲ್ಲಿ ಕೇಂದ್ರ ಸರಕಾರ 14 ಲಕ್ಷದ 42 ಸಾವಿರದ 750 ಕೋಟಿ ರೂಪಾಯಿಗಳನ್ನು ನೀಡಿದೆ. ಮಣ್ಣು ಪರೀಕ್ಷೆ ನಡೆಸಿಯೇ ಕೃಷಿಮಾಡಲು ಕಾರ್ಯಕ್ರಮ, ರಸಗೊಬ್ಬರ ವಿತರಣೆ, ಕಿಸಾನ್ ಸಮ್ಮಾನ್ ಯೋಜನೆ, ಸಾಲ ಮನ್ನಾ ಪಂಪ್ ಸೆಟ್ ಗಳಿಗೆ ಸೋಲಾರ್ ಮೂಲಕ ಉಚಿತ ವಿದ್ಯುತ್ ಹೀಗೆ ರೈತರಿಗೆ ಬೇಕಾದ ಸವಲತ್ತುಗಳನ್ನು ನೀಡುತ್ತಿದೆ. ರೈತರ ಬೆಳೆಗೆ ಉತ್ತಮ ಮಾರುಕಟ್ಟೆ ದರ ಸಿಗಬೇಕೆಂಬ ನಿಟ್ಟಿನಲ್ಲಿ ರೈತ ತಾನು ಬೆಳೆದ ಬೆಳೆಯನ್ನು ಸ್ವತಂತ್ರವಾಗಿ ಮಾರಲು ಯೋಜನೆ ತಂದಿದೆ. ತಂತ್ರಜ್ಞಾನವನ್ನು ಅಳವಡಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರ ನೀಡುತ್ತಿದೆ. ವಿಷಮುಕ್ತ ಕೃಷಿ ಮಾಡಲು ಯೋಜನೆಯನ್ನು ನೀಡಿದೆ ಈ ಎಲ್ಲಾ ಯೋಜನೆಗಳು ರೈತರಿಗೆ ಸಿಗಬೇಕು. ಇದರ ಮಾಹಿತಿಯನ್ನು ರೈತ ಮೋರ್ಚಾದ ಪದಾಧಿಕಾರಿಗಳು ಪ್ರತೀ ರೈತನ ಮನೆಗೆ ತಲುಪಿಸುವ ಕಾರ್ಯ ಮಾಡಬೇಕು. ಸತ್ಯವನ್ನು ಸುಳ್ಳನ್ನಾಗಿ ಮಾಡುವ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಾರೆ. ಅದಕ್ಕೆ ಕಾರ್ಯಕರ್ತರು ಕಿವಿಕೊಡದೆ ರಾಜ್ಯ ಕೇಂದ್ರ ಸರಕಾರದ ಯೋಜನೆಯನ್ನು ಪ್ರಾಮಾಣಿಕವಾಗಿ ಮನೆ ಮನೆಗೆ ತಲುಪಿಸಿ ಎಂದರು.

ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರು ಗಳು ಈ ಭಾಗದ ಸಮಸ್ಯೆಗಳಾದ ಅಡಿಕೆ ಹಳದಿ ಎಲೆ ರೋಗ, ಅತಿವೃಷ್ಠಿ ಮರು ಸರ್ವೆ ಘೋಷಣೆ ಹೀಗೆ ಸಮಸ್ಯೆ ನಿವಾರಣೆಗಾಗಿ ಮನವಿಗಳನ್ನು ನೀಡಿದ್ದಾರೆ. ಅದೆಲ್ಲವನ್ನು ಅಧ್ಯಯನ ಮಾಡಿಕೊಂಡು ನಮ್ಮ ಪ್ರವಾಸ ಮುಗಿದ ಕೂಡಲೇ ಮುಖ್ಯಮಂತ್ರಿಗಳು, ಕೃಷಿ ಸಚಿವರು, ತೋಟಗಾರಿಕೆ ಸಚಿವರು ಅವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ರಾಜ್ಯಧ್ಯಕ್ಷರು ಭರವಸೆ ನೀಡಿದರು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ರಾಜ್ಯ ರೈತ ಉತ್ಪಾದಕ ಸಂಸ್ಥೆಯ ಡಾ.ನವೀನ್, ರಾಜ್ಯ ಉಪಾಧ್ಯಕ್ಷ ಎ.ವಿ. ತೀರ್ಥರಾಮ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಯಮುನಾ ಚಂಗಪ್ಪ ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಇದ್ದರು.

ದ.ಕ. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕೊಡಗು ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ರೈತರ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.

Leave A Reply

Your email address will not be published.