ಸಮುದ್ರತೀರದಲ್ಲಿ ಅಲೆಯೊಂದಿಗೆ ತೀರ ಸೇರುತ್ತಿವೆ ರಾಶಿರಾಶಿ ಚಿನ್ನ !! | ಮೀನಿಗೆ ಗಾಳ ಹಾಕುವ ಬದಲು ಚಿನ್ನಕ್ಕೆ ಗಾಳ ಹಾಕುವುದರಲ್ಲಿ ನಿರತರಾಗಿದ್ದಾರೆ ಇಲ್ಲಿನ ಮೀನುಗಾರರು
ಸಮುದ್ರ ತೀರಗಳಲ್ಲಿ ಕೆಲವೊಮ್ಮೆ ಬೆಲೆಬಾಳುವ ವಸ್ತುಗಳು ಕಂಡುಬರುತ್ತವೆ. ಆದರೆ ಅಲೆಗಳೊಂದಿಗೆ ರಾಶಿರಾಶಿ ಚಿನ್ನ ತೀರಕ್ಕೆ ಅಪ್ಪಳಿಸಿದರೆ ಹೇಗಿರಬೇಡ?? ಅಂತಹದೇ ಪರಿಸ್ಥಿತಿ ಇದೀಗ ಈ ಬೀಚ್ ನಲ್ಲಿ ಕಂಡುಬರುತ್ತಿದೆ.
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಾಡ ಕರಾವಳಿಯಲ್ಲಿ ಸ್ಥಳೀಯ ಜನರ ಚಿನ್ನದ ಬೇಟೆ ಭಾರೀ ಜೋರಾಗಿ ಸಾಗಿದೆ. ಮೀನುಗಾರರು ಕೂಡ ತಮ್ಮ ದಿನನಿತ್ಯದ ಕಾಯಕವನ್ನು ಬದಿಗಿಟ್ಟು ಚಿನ್ನದ ಬೇಟೆಯಲ್ಲಿ ಮುಳುಗಿದ್ದಾರೆ.
ಸ್ಥಳೀಯರೆಲ್ಲ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬೀಚ್ ನಲ್ಲಿ ಚಿನ್ನ ಹುಡುಕುತ್ತಾ ಕಾಲಕಳೆಯುತ್ತಿದ್ದಾರೆ. ಶಾಲಾ ಮಕ್ಕಳು ಕೂಡ ಶಾಲೆಗೆ ಚಕ್ಕರ್ ಹೊಡೆದು ಚಿನ್ನದ ಹುಡುಕಾಟದಲ್ಲಿ ತೊಡಗಿದ್ದಾರೆ. ಕೆಲವರು ಚಿನ್ನದ ಕಣಗಳನ್ನು ಪತ್ತೆಹಚ್ಚಿದ್ದರೆ, ಇನ್ನು ಕೆಲವರಿಗೆ ರಿಂಗ್ಸ್ ಮತ್ತು ಚಿನ್ನದ ಹೊಳ್ಳೆಗಳು ಸಿಗುತ್ತಿವೆ. ಇದೇ ಕರಾವಳಿಯಲ್ಲಿ ಈ ಹಿಂದೆ ಬೆಳ್ಳಿಯ ನಾಣ್ಯಗಳು ಪತ್ತೆಯಾಗಿದ್ದವು. ಈ ಬಾರಿ ಚಿನ್ನ ಕಾಣಿಸಿಕೊಂಡಿರುವುದರಿಂದ ಜನರ ದಂಡೇ ಕರಾವಳಿ ಪ್ರದೇಶದತ್ತ ಹರಿದು ಬರುತ್ತಿದೆ.
ಇತಿಹಾಸದಲ್ಲಿ ರಾಜರ ಕೋಟೆಗಳು ಮತ್ತು ಅನೇಕ ದೇವಾಲಯಗಳು ಸಮುದ್ರದ ಗರ್ಭದಲ್ಲಿ ವಿಲೀನಗೊಂಡಿದ್ದು, ಇದಕ್ಕೆ ಸಂಬಂಧಿಸಿದ ವಸ್ತುಗಳು ಚಂಡಮಾರುತಗಳಿಗೆ ಸಿಲುಕಿ ಹೊರ ಜಗತ್ತಿಗೆ ತೇಲಿ ಬರುತ್ತಿವೆ ಎಂದು ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.