ಕ್ಯಾನಿಸ್ ನ ಮನೆಯ ಮುದ್ದು ಈ ಮಿಡಾಸ್ !! | ನಾಲ್ಕು ಕಿವಿ ಹೊಂದಿರುವ ಮಿಡಾಸ್ ಎಷ್ಟು ಕ್ಯೂಟಾಗಿದೆ ಗೊತ್ತಾ??

ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದರಿಂದ ಬಹಳ ಉಪಯೋಗಗಳಿವೆ ಎನ್ನುತ್ತವೆ ಸಂಶೋಧನೆಗಳು. ಆರೋಗ್ಯ, ಮಾನಸಿಕ ನೆಮ್ಮದಿ ಎಲ್ಲವನ್ನು ಮನೆಯಲ್ಲಿನ ಸಾಕು ಪ್ರಾಣಿಗಳು ಸುಧಾರಿಸುತ್ತವಂತೆ. ಸಾಕು ಪ್ರಾಣಿಗಳ ಒಡನಾಟ, ಮನಸ್ಸಿಗೆ ಉಲ್ಲಾಸ ತರುತ್ತದೆ. ಇನ್ನು ಸದಾ ಒಂದಲ್ಲ ಒಂದು ಸಾಕು ಪ್ರಾಣಿಯೊಂದಿಗೆ ಬಿಝಿಯಾಗಿರುವವರು ತುಂಬಾ ಆ್ಯಕ್ಟಿವ್‌ ಆಗಿರುತ್ತಾರಂತೆ.

ಪ್ರಾಣಿಗಳು ತುಂಬಾ ಸೂಕ್ಷ್ಮ, ಸಣ್ಣ ಶಬ್ಧವಾದರೂ ಸಹ ಅವುಗಳ ಕಿವಿ ನೆಟ್ಟಗಾಗುತ್ತದೆ. ಇರುವ ಎರಡೇ ಕಿವಿಗಳು ಅಷ್ಟೊಂದು ಸೂಕ್ಷ್ಮವಾಗಿದ್ದರೆ, ಇನ್ನು ನಾಲ್ಕು ಕಿವಿಗಳಿದ್ದರೆ ಹೇಗಿರಬಹುದು ಊಹಿಸಿ..? ಸಾಧ್ಯವಿರದ್ದನ್ನು ಊಹಿಸುವುದೇಕೆ ಅಂತೀರಾ..? ತಪ್ಪು, ಎರಡಕ್ಕಿಂತ ಹೆಚ್ಚು ಕಿವಿಗಳು ಇರುವ ಪ್ರಾಣಿಯೂ ಇದೆ.

ಹೌದು, ಟರ್ಕಿಯ ರಷ್ಯನ್ ಬೆಕ್ಕೊಂದು ಎರಡು ಜೋಡಿ ಕಿವಿಗಳೊಂದಿಗೆ ಜನಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿ, ಲೆಕ್ಕವಿಲ್ಲದಷ್ಟು ಹಿಂಬಾಲಕರನ್ನು ಹೊಂದಿರುವ ಈ ಬೆಕ್ಕನ್ನು , ಈಗಾಗಲೇ ಎರಡು ಸಾಕು ಪ್ರಾಣಿಗಳನ್ನು ಹೊಂದಿರುವ ಡೊಸೆಮೆಸಿ ಕುಟುಂಬ ದತ್ತು ಪಡೆದಿದೆ.

ಇನ್​ಸ್ಟಾಗ್ರಾಂನಲ್ಲಿ ಈ ಬೆಕ್ಕು ಸಖತ್​ ಫೇಮಸ್​!

ಬೆಕ್ಕಿನ ಮಾಲೀಕ ಕ್ಯಾನಿಸ್ ಡೊಸೆಮೆಸಿ ಇನ್‍ಸ್ಟಾಗ್ರಾಂ ಖಾತೆ ರಚಿಸಿದ್ದಾರೆ. ಮಾಧ್ಯಮ ವರದಿಯೊಂದರ ಪ್ರಕಾರ, ಮಿಡಾಸ್ ಎಂಬ ಹೆಸರಿನ ಈ ಬೀದಿ ಬೆಕ್ಕನ್ನು, ಕ್ಯಾನಿಸ್ ಮತ್ತು ಕುಟುಂಬ ದತ್ತು ತೆಗೆದುಕೊಂಡಿತು. ಅವರ ಬಳಿ ಈಗಾಗಲೇ ‘ಸೂಜಿ’ ಮತ್ತು ‘ಜೆನ್ಯೋ’ ಎಂಬ ಎರಡು ಗೋಲ್ಡನ್ ರಿಟ್ರೀವರ್ ನಾಯಿಗಳಿವೆ. ಮಿಡಾಸ್‍ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ, ಆ ಎರಡು ನಾಯಿಗಳ ಜೊತೆ ವಿಶ್ರಾಂತಿ ಪಡೆಯುವುದು, ಆಟವಾಡುವುದು ಮತ್ತು ಅವುಗಳನ್ನು ತಬ್ಬಿಕೊಳ್ಳುವ ಫೋಟೋಗಳನ್ನು ಅಪ್​ಲೋಡ್​ ಮಾಡಲಾಗಿದೆ.

https://www.instagram.com/p/CWTspHLIeqg/?utm_source=ig_web_copy_link

ಕ್ಯಾನಿಸ್ ಸ್ನೇಹಿತರೊಬ್ಬರ ಮನೆಯ ತೋಟದಲ್ಲಿ ಬೀದಿ ಬೆಕ್ಕೊಂದು 6 ಮರಿಗಳಿಗೆ ಜನ್ಮ ನೀಡಿತ್ತು, ಆ ಮರಿಗಳಲ್ಲಿ ಒಂದು ಮಿಡಾಸ್. ಆಗ ಕ್ಯಾನಿಸ್ ಮಿಡಾಸನ್ನು ರಕ್ಷಿಸಿದ್ದರು. ಮಿಡಾಸ್‍ನ ಪ್ರಥಮ ಚಿತ್ರವನ್ನು ಹಂಚಿಕೊಂಡಾಗಿನಿಂದ ಅದು ಇನ್‍ಸ್ಟಾಗ್ರಾಂನಲ್ಲಿ 45,000ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದೆ. ಮಿಡಾಸ್ ಈಗ ಕ್ಯಾನಿಸ್ ಮನೆಗೆ ಚೆನ್ನಾಗಿ ಹೊಂದಿಕೊಂಡಿದ್ದು, ಬೆಡ್ ಮೇಲೆ ವಿಶ್ರಾಂತಿ ಪಡೆಯುತ್ತಾ ಮತ್ತು ಆಟಿಕೆಗಳೊಂದಿಗೆ ಆಟವಾಡುತ್ತಾ ಖುಷಿಯಾಗಿ ಬದುಕುತ್ತಿದೆ ಎಂಬುದನ್ನು ಕ್ಯಾನಿಸ್ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಆ ಫೋಟೊಗಳಿಗೆ ಕ್ಯಾನಿಸ್, “ಅವಳು ತುಂಬಾ ತಮಾಷೆಯ ಬೆಕ್ಕು.ಆದರೆ ತುಂಬಾ ಸ್ನೇಹಪರಳು. ಅವಳು ದಿನವಿಡೀ ಮಲಗುತ್ತಾಳೆ ಮತ್ತು ರಾತ್ರಿಯೆಲ್ಲಾ ಎಚ್ಚರವಿರುತ್ತಾಳೆ” ಎಂದು ಬರೆದುಕೊಂಡು ಪೋಸ್ಟ್​ ಮಾಡಿದ್ದಾರೆ. ಮೊದಲೇ ತಿಳಿಸಿದಂತೆ, ಮಿಡಾಸ್ ಸಾಮಾನ್ಯ ಬೆಕ್ಕುಗಳಂತೆ ಇಲ್ಲ. ಅದರ ಕಿವಿಯ ಇಬ್ಬದಿಯಲ್ಲಿ ಇನ್ನೆರಡು ಪುಟ್ಟ ಕಿವಿಗಳು ಬೆಳೆದಿವೆ. ಅದಕ್ಕೆ ತನ್ನ ಪೋಷಕರಿಂದ ಅನುವಂಶೀಯವಾಗಿ ಬಂದಿರುವ ಅನುವಂಶಿಕ ಅಸಹಜತೆ ಕಾರಣವಾಗಿರಬಹುದು.

ಹೆಚ್ಚುವರಿ ಕಿವಿಗಳಿಂದ ಯಾವುದೇ ತೊಂದರೆ ಇಲ್ಲ!

4 ಕಿವಿಗಳಿವೆ ಎಂದ ಮಾತ್ರಕ್ಕೆ ಕೇಳಿಸಿಕೊಳ್ಳುವ ಕ್ಷಮತೆ ಇನ್ನಷ್ಟು ಹೆಚ್ಚಿದೆ ಅಂದುಕೊಳ್ಳಬೇಡಿ, ಹಾಗೇನೂ ಇಲ್ಲ. ಅದೇ ರೀತಿ ಆ ಹೆಚ್ಚುವರಿ ಕಿವಿಗಳಿಂದ ಯಾವುದೇ ತೊಂದರೆಯೂ ಆಗಿಲ್ಲ. ಮಿಡಾಸ್ ತನ್ನ 4 ಕಿವಿಗಳ ಕಾರಣದಿಂದ ಮಾತ್ರವಲ್ಲ, ತನ್ನ ಹೊಟ್ಟೆಯ ಭಾಗದ ಮೇಲೆ ಇರುವ ಬಿಳಿ ಬಣ್ಣದ ಹೃದಯದ ಆಕೃತಿಯ ಪ್ಯಾಚ್‍ನ ಕಾರಣದಿಂದ ಕೂಡ ನೆಟ್ಟಿಗರ ಮನ ಗೆದ್ದಿದೆ. ಅಸಹಜ ಕಿವಿಗಳಿವೆ ಎಂದ ಮಾತ್ರಕ್ಕೆ, ಬೆಕ್ಕಿಗೆ ಕಿವುಡಂತೂ ಇಲ್ಲ. ಕಿವಿ ಚೆನ್ನಾಗಿಯೇ ಕೇಳಿಸುತ್ತದೆ ಎನ್ನುತ್ತಾರೆ ಕ್ಯಾನಿಸ್. ಇನ್‍ಸ್ಟಾಗ್ರಾಂನಲ್ಲಿ ಮಿಡಾಸ್‍ನ ಫೋಟೋಗಳಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಅಸಂಖ್ಯ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

‘ನೀನು ಎಂದೆಂದಿಗೂ ಮುದ್ದು’ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು ‘ಎರಡು ಜೋಡಿ ಕಿವಿಗಳು ದುಪ್ಪಟ್ಟು ಸೌಂದರ್ಯಕ್ಕೆ ಸಮನಾಗಿರುತ್ತದೆ’ ಎಂದು ಮೆಚ್ಚುಗೆಯ ನುಡಿಗಳನ್ನು ಬರೆದಿದ್ದಾರೆ.

Leave A Reply

Your email address will not be published.