ಪೇಜಾವರ ಶ್ರೀ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಾದಬ್ರಹ್ಮ ಹಂಸಲೇಖ | ಹಂಸಲೇಖ ಹೇಳಿಕೆಗೆ ಭಕ್ತರಿಂದ ಭಾರೀ ಆಕ್ರೋಶ, ಕೊನೆಗೂ ಕ್ಷಮೆಯಾಚಿಸಿದ ನಾದಬ್ರಹ್ಮ

Share the Article

ದಲಿತರನ್ನು ಒಳಗೊಳ್ಳುವಿಕೆ ಕುರಿತು ಉಡುಪಿ ಪೇಜಾವರ ಮಠದ ಸ್ವಾಮೀಜಿ ನಡೆಸಿದ ಪಾದಯಾತ್ರೆಗಳು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಡೆಸಿದ ಗ್ರಾಮ ವಾಸ್ತವ್ಯ ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ಕುರಿತು ಹಂಸಲೇಖ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ವಿವಾದ ಸೃಷ್ಟಿಸಿದೆ. ಪೇಜಾವರ ಶ್ರೀಗಳ ಭಕ್ತರಿಂದ ಭಾರಿ ಆಕ್ರೋಶ ವ್ಯಕ್ತವಾದ ಕಾರಣ ಇದೀಗ ಹಂಸಲೇಖ ಅವರು ತಮ್ಮ ಹೇಳಿಕೆಯ ಕುರಿತು ಕ್ಷಮೆ ಕೋರಿದ್ದಾರೆ.

ಅಷ್ಟಕ್ಕೂ ಹಂಸಲೇಖ ಹೇಳಿದ್ದೇನು??

ಪೇಜಾವರರ ಸ್ವಾಮಿಗಳು ದಲಿತ ಮನೆಯಲ್ಲಿ ಇದ್ದು ಬಂದಿದ್ದರು ಎಂದು ಇತ್ತೀಚೆಗೆ ನೋಡಿದೆ. ಅವರು ಮನೆಯಲ್ಲಿ ಕೋಳಿ ಕೊಟ್ಟರೆ ತಿನ್ನೋಕಾಗುತ್ತಾ? ಕೋಳಿ ಬೇಡ, ಕುರಿಯ ರಕ್ತ ಪ್ರೈ ಮಾಡಿ ಕೊಟ್ಟರೆ, ಲಿವರ್ ಕೊಟ್ಟರೆ ತಿನ್ನುತ್ತಾರಾ ಇವರು? ದಲಿತರ ಮನೆಗೆ ಬಲಿತರು ಹೋಗುವುದು ಏನು ದೊಡ್ಡ ವಿಚಾರ? ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಶುರು ಮಾಡಿದರು. ಅದು ಗೀಳಾಗಿ ಅಶೋಕ್, ಅಶ್ವತ್ಥನಾರಾಯಣ ಅದನ್ನೇ ಮಾಡುತ್ತಿದ್ದಾರೆ.

ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಹೆಣ್ಣಿನ ಜೊತೆ ಇರುತ್ತಾನೆ, ಬೆಳಗಾಗುವ ಹೊತ್ತಿಗೆ ವಾಪಸ್ ಬಂದು ಕಲ್ಲಾಗುತ್ತಾನೆ ಎನ್ನಲಾಗುತ್ತದೆ. ಅದರಲ್ಲಿ ಏನು ದೊಡ್ಡ ವಿಚಾರ? ದಲಿತರನ್ನು ಕರೆದುಕೊಂಡು ಹೋಗಿ ತನ್ನ ದೇವರ ಗುಡಿಯಲ್ಲಿ ಆಕೆಯನ್ನು ಕೂರಿಸಿದ್ದರೆ ಅದು ದೊಡ್ಡ ವಿಚಾರ. ಇದೊಂದು ನಾಟಕ, ಬೂಟಾಟಿಕೆ, ದಲಿತರ ಮನೆಗೆ ಬಲಿತರು ಬರಬೇಕು, ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ನಮ್ಮ ಮನೆಯ ಲೋಟವನ್ನು ನೀನು ಮುಟ್ಟು, ಅದನ್ನು ನಾವು ತೊಳೆಯುತ್ತೇವೆ ಎನ್ನಬೇಕು. ಈಗ ಭಾರತದಲ್ಲಿ ಇದೊಂದು ಬೂಟಾಟಿಕೆ ನಡೆಯುತ್ತಿದೆ ಎಂದು ಹಂಸಲೇಖ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಹಂಸಲೇಖ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಆಹಾರ ಸೇವನೆ ಅವರವರ ಸ್ವಾತಂತ್ರ್ಯವಾಗಿದ್ದು, ಮಾಂಸಾಹಾರ ಸೇವಿಸಬೇಕು ಎನ್ನುವುದು ಸರಿಯಲ್ಲ ಎಂದಿದ್ದಾರೆ.

ಬಿಳಿಗಿರಿರಂಗನಾಥನ ಭಕ್ತರು, ಪೇಜಾವರ ಶ್ರೀಗಳ ಶಿಷ್ಯವೃಂದ, ಸಾಮಾಜಿಕ ಕಾರ್ಯಕರ್ತರು ಹಾಗೂ ಅಖಿಲ ಕರ್ನಾಟಕ ಮಾಧ್ವ ಮಹಾ ಸಭಾ ಹೆಸರಿನಲ್ಲಿ ಹೇಳಿಕೆಯೊಂದು ಹರಿದಾಡುತ್ತಿದೆ. ಬಿಳಿಗಿರಿ ರಂಗನಾಥನ ಮಹಿಮೆಯನ್ನು ಬೂಟಾಟಿಕೆ ಅಂತ ಅವಹೇಳನ ಮಾಡಿ ಬಿಳಿಗಿರಿರಂಗನಾಥನ ಭಕ್ತರಿಗೆ ಬಹಳ ನೋವುಂಟುಮಾಡಿದೆ. ಯಾರನ್ನೋ ಮೆಚ್ಚಿಸಲು ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ಈ ರೀತಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರೆ ಸಮಾಜದಲ್ಲಿ ಸಾಮರಸ್ಯ ಉಳಿಯುವುದೇ? ಇದು ಅವರ ವ್ಯಕ್ತಿತ್ವಕ್ಕೆ ಶೋಭೇಯೇ? ಪದ್ಮವಿಭೂಷಣ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹಿಂದೂ ಸಮಾಜದ ಏಕತೆಗಾಗಿ ಹಿಂದವಃ ಸೋದರಾಃ ಸರ್ವೆ, ನ ಹಿಂದೂ ಪತಿತೋ ಭವೇತ್ ಎಂಬ ಸಂದೇಶ ಕೊಟ್ಟು ದಲಿತರನ್ನು ಅಸ್ಪೃಶ್ಯ ಎಂದು ದೂರ ಇಡುವುದು ಸರಿಯಲ್ಲ ಎಂದು ಸಂದೇಶ ನೀಡಿದರು. ಹಂಸಲೇಖರ ಹೇಳಿಕೆಯಿಂದ ಹಿಂದೂ ಸಮಾಜಕ್ಕೆ ನೋವುಂಟಾಗಿದೆ. ಹಂಸಲೇಖ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಹಾಗೂ ಭಕ್ತರು ಹಂಸಲೇಖ ಮಾತುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ವಿಡಿಯೋ ಮುಖಾಂತರ ಕ್ಷಮೆ ಕೇಳಿದ್ದಾರೆ.

Leave A Reply

Your email address will not be published.