ಕರಾವಳಿಯಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ !! |’ಆರೆಂಜ್ ಅಲರ್ಟ್’ ಘೋಷಣೆ, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ !!
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾನುವಾರ ವರುಣರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕರಾವಳಿಯಲ್ಲಿ ಒಂದು ರೀತಿಯ ಕಳವಳ ಸೃಷ್ಟಿಯಾಗಿದೆ. ನವೆಂಬರ್ ಅರ್ಧ ಕಳೆದರೂ ಆದರೂ ಮಳೆ ಹನಿ ಮತ್ತು ಹಾನಿ ನಿಲ್ಲುತ್ತಿಲ್ಲ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನವೆಂಬರ್ 15 ಮತ್ತು 16ರಂದು ಸಹ ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನಾವೆಂದೂ ಕಾಣದೆ ಇದ್ದ ಹವಾಮಾನ ವೈಪರೀತ್ಯಕ್ಕೆ ಭೂಮಿ ಸಾಕ್ಷಿಯಾಗಿದೆ.
ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿ, ಟ್ರಫ್ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಮತ್ತು ಒಳನಾಡಿನಲ್ಲಿ ಮಳೆ ಅಬ್ಬರಿಸಿದೆ. ಒಳನಾಡಿನ ಕೆಲ ಜಿಲ್ಲೆಗಳಿಗೆ ಸೀಮಿತವಾಗಿದ್ದ ‘ಯೆಲ್ಲೋ ಅಲರ್ಟ್’ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿದೆ.
ಅದೇ ರೀತಿ ಕರಾವಳಿ ಜಿಲ್ಲೆಗಳಿಗೆ ನೀಡಲಾಗಿದ್ದ ಭಾರಿ ಮಳೆಯ ಯೆಲ್ಲೋ ಅಲರ್ಟ್ ಅನ್ನು ‘ಅತಿ ಭಾರಿ ಮಳೆಯ ಆರೆಂಜ್ ಅಲರ್ಟ್’ ಆಗಿ ಪರಿವರ್ತಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಕೊಡಗು ಜಿಲ್ಲೆಗೆ ಸೋಮವಾರ (ನ.15) ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಮಂಗಳವಾರ (ನ.16)ಮಳೆ ಪ್ರಮಾಣ ತುಸು ಕಡಿಮೆ ಆಗುವ ಸಾಧ್ಯತೆಯಿದ್ದು ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ , ಹಾಸನ, ಚಿಕ್ಕಮಗಳೂರು, ಶಿವಮೊಗ್ಗ , ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿಯವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮಂಗಳವಾರದವರೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಕೆಲ ಕಡೆ ಜಿಟಿಜಿಟಿ ಮಳೆ, ಸಾಧಾರಣ ಮಳೆಯಾದರೆ ಇನ್ನೂ ಕೆಲವೆಡೆ ಭಾರಿ ಮಳೆ ಆಗುತ್ತಿದೆ. ಮಳೆ ಚೆನ್ನಾಗಿ ಆಗುತ್ತಿರುವುದು ಮತ್ತು ಶೀತಗಾಳಿಯಿಂದ ರಾಜ್ಯದ ತಾಪಮಾನದಲ್ಲಿ ಇಳಿಕೆ ದಾಖಲಾಗಿದ್ದು ಚಳಿ ಜಾಸ್ತಿ ಆಗಿದೆ.