ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಪತಿಗೆ ದೃಷ್ಟಿ ತೆಗೆದ ಮಂಜಮ್ಮ ಜೋಗತಿ | ರಾಷ್ಟ್ರಪತಿಗಳ ಮುಖದಲ್ಲಿ ಬೀರಿತ್ತು ನಗು !!
ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕರ್ನಾಟಕದ ಹಲವರಿಗೆ ಮಂಗಳವಾರ 2021ನೇ ಸಾಲಿನ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜೋಗತಿ ನೃತ್ಯದ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ಮಂಜಮ್ಮ ಜೋಗತಿ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೃಷ್ಟಿ ತೆಗೆದು ದೇಶಾದ್ಯಂತ ತಮ್ಮ ಗಮನ ಸೆಳೆದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಮುಖದಲ್ಲಿ ನಗು ಮೂಡಿಸಿದರು ಮಂಜಮ್ಮ.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆಯಾಗಿರುವ ಮಂಜಮ್ಮ ಜೋಗತಿ ಅವರು ರಾಷ್ಟ್ರಪತಿ ಅವರ ದೃಷ್ಟಿ ತೆಗೆದರು. ಹಾಗೆ ದೃಷ್ಟಿ ತೆಗೆಯುವಾಗ ರಾಷ್ಟ್ರಪತಿಗಳು ಸಂತೋಷದಿಂದ ನಗೆ ಬೀರಿದರು. ನಂತರ ಮಂಜಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದನೆ ತಿಳಿಸಿದರು. ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ತೃತೀಯಲಿಂಗಿ ಎಂಬ ಹೆಗ್ಗಳಿಕೆಗೂ ಮಂಜಮ್ಮ ಜೋಗತಿ ಪಾತ್ರರಾಗಿದ್ದಾರೆ.
2021ರ ಸಾಲಿನ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‍ನಲ್ಲಿ ನಡೆಯಿತು. ಕರ್ನಾಟಕದ ಖ್ಯಾತ ವೈದ್ಯ ಡಾ. ಬಿ.ಎಂ.ಹೆಗ್ಡೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಗಾಯಕ ದಿವಂಗತ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರ ಪದ್ಮವಿಭೂಷಣ ನೀಡಲಾಯಿತು. ಪ್ರಶಸ್ತಿಯನ್ನು ಎಸ್‌ಪಿಬಿ ಪರವಾಗಿ ಪುತ್ರ ಚರಣ್ ಸ್ವೀಕರಿಸಿದರು. ಅಲ್ಲದೆ ಸಾಹಿತಿ ಚಂದ್ರಶೇಖರ ಕಂಬಾರರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ಎಲ್.ಎಸ್.ಕಶ್ಯಪ್ ಅವರಿಗೂ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರದಾನ ಮಾಡಿದರು.