ಅಡಿಕೆ ಸೇವನೆಯಿಂದ ಮಾರಕ ಕ್ಯಾನ್ಸರ್ ರೋಗ ಬರುತ್ತದೆಯೆಂದು ಮೋದಿಗೆ ಪತ್ರ ಬರೆದ ಸಂಸದ !! | ಹಾಗಾದ್ರೆ ಬ್ಯಾನ್ ಆಗುತ್ತಾ ಅಡಿಕೆ??

ನವದೆಹಲಿ:ಇತ್ತೀಚೆಗೆ ಅಡಕೆ ಪ್ರಿಯರಿಗೆ ಭರ್ಜರಿ ಆಫರ್ ಎಂಬಂತೆ ದಿನದಿಂದ ದಿನಕ್ಕೆ ಮಾರುಕಟ್ಟೆ ಬೆಲೆ ಏರಿಕೆಯತ್ತಲೇ ಸಾಗುತಿತ್ತು.ಆದರೆ ಇದೀಗ ರೈತರ ಆದಾಯಕ್ಕೆ ಮೋದಿ ಬ್ರೇಕ್ ಹಾಕಲಿದ್ದಾರೆಯೇ!? ಅಡಿಕೆ ಬ್ಯಾನ್ ಆಗತ್ತಾ ಇತ್ಯಾದಿ ಚರ್ಚೆಗಳು ಶುರುವಾಗಿವೆ.

ಹೌದು.’ಅಡಕೆ ಸೇವನೆಯಿಂದ ಮಾರಕ ಕ್ಯಾನ್ಸರ್‌ನಂಥ ರೋಗಗಳು ಉಂಟಾಗುತ್ತಿದೆ. ಹೀಗಾಗಿ ಜನರು ಅಡಕೆ ಸೇವಿಸದಂತೆ ನಿಷೇಧಿಸಬೇಕು’ ಎಂದು ಒತ್ತಾಯಿಸಿ ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ಜಾರ್ಖಂಡ್‌ನ ಸಂಸದನಾಗಿ ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುತ್ತಿದ್ದೇನೆ. ಪಾನ್‌ ಮಸಾಲದ ಪ್ರಮುಖ ಭಾಗವಾದ ಅಡಕೆ ಸೇವಿಸುವ ಮೂಲಕ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಗೆ ಜನರು ತುತ್ತಾಗಿ ತೊಂದರೆ ಅನುಭವಿಸುವುದನ್ನು ಸ್ವತಃ ನಾನೇ ನೋಡಿದ್ದೇನೆ. ಹೀಗಾಗಿ ಮಾನವರ ಬಳಕೆಗೆ ಅಡಕೆ ನಿಷೇಧಿಸಬೇಕು ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ’ ಎಂದಿದ್ದಾರೆ.

‘ಅಡಕೆ ಸೇವನೆಯಿಂದ ಆಸ್ತಮಾ ರೋಗ ಉಲ್ಬಣವಾಗುತ್ತದೆ. ಹೃದಯದ ರಕ್ತನಾಳ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಉಸಿರಾಟ ಸಮಸ್ಯೆ, ಉಸಿರಾಟದ ಏರಿಳಿತದಂಥ ಸಮಸ್ಯೆಗಳು ಉಂಟಾಗುತ್ತವೆ. ಇದೇ ಕಾರಣಗಳಿಗಾಗಿಯೇ 2018ರಲ್ಲಿ ಮಹಾರಾಷ್ಟ್ರ ಸರ್ಕಾರ ಅಡಕೆ ಮಾರಾಟ ಮತ್ತು ಬಳಕೆಯ ನಿಷೇಧಿಸಿತ್ತು. ಹೀಗಾಗಿ ಮಾನವರ ಬಳಕೆಗೆ ಅಡಕೆ ನಿಷೇಧಿಸಬೇಕು. ಆದರೆ ಧಾರ್ಮಿಕ ವಿಧಿ ವಿಧಾನಗಳಿಗೆ ಬಳಸಲು ಅನುಮತಿ ಮುಂದುವರೆಸಬೇಕು’ ಎಂದು ದುಬೆ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಈಗ ಮೌಲ್ಯವರ್ಧಿತ ಉತ್ಪನ್ನವಾಗಿ ಶುಕ್ರ ದೆಸೆ ಬಂದಿದೆ. ಆದರೆ ಮೋದಿ ನಿರ್ಧಾರದ ಮೇರೆಗೆ ಅಡಕೆ ಮಾನವನ ಬಳಕೆಗೆ ನಿಷೇಧವಾದರೆ ಬೆಲೆ ಜಗ್ಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.