ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

2021-22 ನೇ ಸಾಲಿನ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಮಂಜೂರು ಮಾಡಲು ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ (ಎಸ್.ಎಸ್.ಪಿ)ನಲ್ಲಿ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿರುತ್ತದೆ.

2021-22 ನೇ ಸಾಲಿನಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಆನ್‍ಲೈನ್ ಅರ್ಜಿ ಸಲ್ಲಿಸಬೇಕು. ಹಿಂದಿನ ವರ್ಷದಲ್ಲಿ ಎಸ್.ಎಸ್.ಪಿ ಮೂಲಕ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಲಾಗಿನ್ ಆಗಿ ಇ-ದೃಢೀಕರಣ ಹಂತದವರೆಗೆ ಅರ್ಜಿಯನ್ನು ಸಲ್ಲಿಸಿ ಕಾಲೇಜಿನ ಇ-ದೃಢೀಕರಣ ಅಧಿಕಾರಿಗಳಿಂದ ತಮ್ಮ ದಾಖಲೆಗಳನ್ನು ಇ-ದೃಢೀಕರಣ ಮಾಡಿ ಮತ್ತು ಇ-ದೃಢೀಕರಣ ಐಡಿಯನ್ನು ಪಡೆಯಬೇಕು. ನಂತರ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಲಾಗಿನ್ ಆಗಿ ಇ-ದೃಢೀಕರಣ ಐಡಿಗಳನ್ನು ನಮೂದಿಸಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಈ ಹಿಂದೆ 31-10-2021 ಕ್ಕೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿತ್ತು, ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆ ಪೋಷಕರು / ವಿದ್ಯಾರ್ಥಿಗಳು / ಶಿಕ್ಷಣ ಸಂಸ್ಥೆಗಳು ಮನವಿ ಸಲ್ಲಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಪ್ರಸ್ತುತ 30-11-2021 ರವರೆಗೆ ವಿಸ್ತರಿಸಲಾಗಿದೆ.

ಇದುವರೆಗೆ ಆನ್‍ಲೈನ್ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಆನ್‍ಲೈನ್ ಅರ್ಜಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆಯ ವೆಬ್ ವಿಳಾಸವಾದ www.sw.kar.nic.in ನ್ನು ಪ್ರವೇಶಿಸಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ 2021-22 (ಇ-ದೃಢೀಕರಣ ಪೋರ್ಟಲ್)ನ್ನು ಆಯ್ದುಕೊಂಡು ಅರ್ಜಿ ಸಲ್ಲಿಸಬೇಕು.

ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಕೂಡಲೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಆಧಾರನ್ನು NPCI ಗೆ ಜೋಡಣೆ ಮಾಡಿಸಿ ಆನ್‍ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

Leave A Reply

Your email address will not be published.