ಆರ್ಡರ್ ಮಾಡಿದ ಆಹಾರವನ್ನು ಸ್ವಿಗ್ಗಿ ತಂದುಕೊಡಲಿಲ್ಲವೆಂದು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದ ಸಿನಿಮಾ ಸೂಪರ್ ಸ್ಟಾರ್ !!
ನಗರ ಪ್ರದೇಶಗಳಲ್ಲಿ ಹಲವರು ಈಗ ಊಟಕ್ಕೋಸ್ಕರ ಸ್ವಿಗ್ಗಿ, ಝೋಮ್ಯಾಟೋ ಹಾಗೂ ಇನ್ನಿತರ ಆಹಾರ ವಿತರಣಾ ಕಂಪನಿಗಳ ಡೋರ್ ಡೆಲಿವರಿ ಆಹಾರಗಳನ್ನು ಅವಲಂಬಿಸಿರುತ್ತಾರೆ. ಅದರಲ್ಲಿ ತಾವು ಆರ್ಡರ್ ಮಾಡಿದ ಆಹಾರ ಬರದಿದ್ದರೆ ಕಂಪನಿಗೆ ಕರೆ ಮಾಡಿ ದೂರು ಸಲ್ಲಿಸುವ ಆಯ್ಕೆಯೂ ಇದೆ. ಹೀಗಿದ್ದೂ ಇಲ್ಲೊಬ್ಬ ನಟ ಏನು ಮಾಡಿದ್ದಾನೆ ನೋಡಿ.
ಸ್ವಿಗ್ಗಿಯಲ್ಲಿ ಊಟ ಸರಿಯಾಗಿ ಸಮಯಕ್ಕೆ ಬರಲಿಲ್ಲ ಎಂದರೆ ಕಂಪನಿಗೆ ಕರೆ ಮಾಡಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ದೂರುವುದನ್ನು ನಾವು ನೋಡಿದ್ದೇವೆ. ಆದರೆ ಬೆಂಗಾಳಿ ಸಿನಿಮಾ ಸೂಪರ್ ಸ್ಟಾರ್ ಪ್ರಸೂನ್‌ಜಿತ್ ಚಟರ್ಜಿ, ಸ್ವಿಗ್ಗಿ ವಿರುದ್ಧ ಪ್ರಧಾನಿ ಮೋದಿ ಹಾಗೂ ಬಂಗಾಳ ಮುಖ್ಯಮಂತ್ರಿ ಮಮತಾಗೆ ಬಹಿರಂಗ ಪತ್ರ ಬರೆದಿದ್ದಾರೆ.
ತಾವು ಆರ್ಡರ್ ಮಾಡಿದ ಆಹಾರವನ್ನು ಸ್ವಿಗ್ಗಿ ತಂದುಕೊಡಲಿಲ್ಲ. ಇದರ ಕುರಿತಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. ಮೋದಿ ಹಾಗೂ ಮಮತಾ ಅವರಿಗೆ ಬರೆದಿರುವ ಪತ್ರ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಬ್ಬದ ಶುಭಾಶಯಗಳು. ನೀವು ಚೆನ್ನಾಗಿರುತ್ತೀರಿ ಎಂದು ಭಾವಿಸುತ್ತೇವೆ. ನಾನು ಇತ್ತೀಚೆಗೆ ಎದುರಿಸಿದ ಸಮಸ್ಯೆಯನ್ನು ನಿಮ್ಮ ಗಮನಕ್ಕೆ ತರುತ್ತೇನೆ. ನವೆಂಬರ್ 3 ರಂದು ನಾನು ಆಹಾರ ವಿತರಣಾ ಅಪ್ಲಿಕೇಶನ್ ಆಗಿರುವ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡಿದ್ದೆ. ಆದರೆ ನಾನು ಆಹಾರವನ್ನು ಸ್ವೀಕರಿಸಲಿಲ್ಲ. ಸ್ವಿಗ್ಗಿ ಅವರಿಗೆ ನಾನು ಆಗಿರುವ ಸಮಸ್ಯೆಯನ್ನು ಹೇಳಿಕೊಂಡೆ. ಅವರು ಆರ್ಡರ್ ಪ್ರಿಪೇಯ್ಡ್ ಆಗಿರುವುದರಿಂದ ಅವರು ನನಗೆ ಹಣವನ್ನು ಹಿಂದಿರುಗಿಸಿದ್ದಾರೆ.
ಆದರೆ ಮುಂದೆ ಯಾರಾದರೂ ಈ ಸಮಸ್ಯೆಯನ್ನು ಎದುರಿಸಬಹುದು ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಈ ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಯಾರಾದರೂ ತಮ್ಮ ರಾತ್ರಿಯ ಊಟಕ್ಕೆ ಈ ಫುಡ್ ಅಪ್ಲಿಕೇಶನ್‍ಗಳನ್ನು ಅವಲಂಬಿಸಿದ್ದರೆ ಅವರ ಗತಿಯೇನು? ಅವರು ಹಸಿವಿನಿಂದ ಇರುತ್ತಾರೆಯೇ? ಅಂತಹ ಅನೇಕ ಸಂದರ್ಭಗಳು ಇರಬಹುದು. ಹೀಗೆ ಈ ಸಮಸ್ಯೆ ಕುರಿತಾಗಿ ಮಾತನಾಡುವುದು ಅಗತ್ಯ ಎಂದು ನನಗೆ ಅನಿಸಿತು ಎಂದು ಬರೆದುಕೊಂಡು ಮೋದಿ ಮತ್ತು ಮಮತಾ ಅವರು ಇದರ ಕುರಿತಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಹಲವರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಇದು ಸ್ವಿಗ್ಗಿ ಕಂಪೆನಿಯ ತಪ್ಪೆಂದು ಹಲವರು ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ. ಅದಲ್ಲದೆ ಇನ್ನೂ ಕೆಲವರು ಇದನ್ನು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ತಿಳಿಸುವ ವಿಷಯವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.