ಕರಾವಳಿ, ಮಲೆನಾಡಿನಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

ಇಂದು ಕರಾವಳಿ, ಮಲೆನಾಡು ಭಾಗದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕರ್ನಾಟಕದ ಇನ್ನುಳಿದ ಕಡೆಗಳಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಸಹ ಮಳೆರಾಯ ಅಬ್ಬರಿಸಲಿದ್ದಾನೆ. ನೆರೆಯ ಚೆನ್ನೈನಲ್ಲಿ ದಾಖಲೆಯ ಮಳೆಯಾಗುತ್ತಿದ್ದು, ದಕ್ಷಿಣ ಕರ್ನಾಟಕದ ಭಾಗದಲ್ಲಿಯೂ ವರುಣನ ಸಿಂಚನ ಆಗಲಿದೆ.

ಉಡುಪಿ, ದಕ್ಷಿಣ ಕನ್ನಡ, ಹಾಸನ, ಶಿವಮೊಗ್ಗ, ದಾವಣಗೆರೆ, ಕೊಡಗು, ಚಿಕ್ಕಮಗಳೂರಿನ ಕೆಲ ಭಾಗದಲ್ಲಿ ಮಳೆಯಾಗಲಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಮತ್ತು ಗದಗನಲ್ಲಿ ಒಣ ಹವೆ ಮುಂದುವರಿಯಲಿದೆ.

ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೆಆರ್ ಎಸ್ ಕಾವೇರಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯ ಸೂಚನೆ ನೀಡಿತ್ತು.

ಚೆನ್ನೈನಲ್ಲಿ ದಾಖಲೆಯ ಮಳೆ

ತಮಿಳುನಾಡಿನಲ್ಲಿ ಆರು ವರ್ಷಗಳ ಬಳಿಕ ಭಾರೀ ಮಳೆಯಾಗಿದೆ, ಭಾರೀ ಮಳೆ ಹಿನ್ನೆಲೆ ತಮಿಳುನಾಡಿನ ಮೂರು ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಹಲವು ವರ್ಷಗಳ ಬಳಿಕ ಸುರಿದ ಮಳೆಯಿಂದಾಗಿ ತಮಿಳುನಾಡಿನ ಜನ ವಸತಿ ಪ್ರದೇಶಗಳು ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಪುದುಚೇರಿ ಭಾಗದಲ್ಲಿ ಶೇ.43ರಷ್ಟು ಹೆಚ್ಚುವರಿ ಮಳೆಯಾಗಿರುವ ಬಗ್ಗೆ ವರದಿಗಳು ಬಂದಿದೆ.

Leave A Reply

Your email address will not be published.