ನಮ್ಮ ಶಾಲೆ : ನಮ್ಮ ಹೆಮ್ಮೆ

ಮುಕ್ಕೂರು ಶಾಲಾ ಇತಿಹಾಸ : ಭಾಗ-1

ಮುಳಿಹುಳ್ಳಿನ ಛಾವಡಿಯೊಳಗೆ ಹುಟ್ಟಿದ ಮುಕ್ಕೂರು ಶಾಲೆ ಎಂಬ ಅಕ್ಷರ ದೇಗುಲ..!

1928ರ ಕಾಲವದು. ಅಂದರೆ ಸ್ವಾತಂತ್ರ್ಯಪೂರ್ವದ ಬ್ರಿಟಿಷ್ ಆಡಳಿತವಿತ್ತು. ಜನರಿಗೆ ಶಿಕ್ಷಣ ಸೇರಿದಂತೆ ಯಾವುದೇ ರಂಗಗಳಲ್ಲಿಯು ಅವಕಾಶ ಇರಲಿಲ್ಲ. ಆಗಷ್ಟೇ ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯ ವಿಚಾರಧಾರೆಗಳು ಗ್ರಾಮದಿಂದ ಗ್ರಾಮಕ್ಕೆ ಹರಡುತ್ತಿದ್ದ ಸಂದರ್ಭವದು.

ಈಗಿನ ಪೆರುವಾಜೆ ಗ್ರಾಮ ಆಗ ಉಪ್ಪಿನಂಗಡಿ ತಾಲೂಕಿಗೆ ಸೇರಿತ್ತು.ಗಾಂಧಿ ಅವರ
ವಿಚಾರಧಾರೆಗಳಿಗೆ ಪ್ರಭಾವಿತಗೊಂಡಿದ್ದ ಸಹಕಾರ ಕ್ಷೇತ್ರದ ಧುರೀಣ ಮೊಳಹಳ್ಳಿ ಶಿವರಾಯರು 1928 ರಲ್ಲಿ ನಮ್ಮೂರಿನ ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಊರ ಪ್ರಮುಖರ ಜತೆ ಚರ್ಚಿಸಿ ಗ್ರಾಮದಲ್ಲಿ ಶಾಲೆಯೊಂದನ್ನು ತೆರೆಯಲು ಹುರಿದುಂಬಿಸಿದರು. ಅವರ ಮಾತಿನಂತೆ ಮುಕ್ಕೂರು ದಿ.ಗೋಪಾಲಕೃಷ್ಣ ಬೈಪಡಿತ್ತಾಯ ಮತ್ತು ಕುಂಜಾಡಿ ಗುಡ್ಡಪ್ಪ ರೈಗಳು ಶಾಲೆ ತೆರೆಯುವ ಮಹಾನ್ ಕಾರ್ಯಕ್ಕೆ ಮುಂದಡಿ ಇಟ್ಟರು.

ಗ್ರಾಮಸ್ಥರ ಸಹಕಾರ ಪಡೆದು 17-07-1928 ರಂದು ಮುಕ್ಕೂರಿನಲ್ಲಿ ಶಾಲೆ ಪ್ರಾರಂಭ ಗೊಂಡಿತು. ಅದು ದಟ್ಟ ಮಳೆಗಾಲದ ಸಮಯ. ಬಿದಿರಿನ ಮಾಡು ಮುಳ್ಳಿಹುಳ್ಳಿನ
ಛಾವಡಿ, ತಟ್ಟಿಯ ಗೋಡೆಯ ಅಕ್ಷರ  ದೇಗುಲ ಎದ್ದು ನಿಂತಿತು. ಈ ಕುಟೀರಕ್ಕೆ ಪಂಚಾಯತ್
ಎಲಿಮೆಂಟರಿ ಶಾಲೆ ಎಂಬ ಹೆಸರು ಇಡಲಾಯಿತು. 1 ರಿಂದ 3 ನೇ ತರಗತಿ ತನಕ ತರಗತಿ.ಸುಮಾರು 60 ಮಕ್ಕಳು ಶಾಲೆಗೆ ದಾಖಲಾದರು. ದಿ.ಪುಟ್ಟಪ್ಪಯ್ಯ ಕಾರಂತ ಶಾಲೆಯ ಮೊದಲ
ಶಿಕ್ಷಕರು. ಒಟ್ಟು ಇಬ್ಬರು ಶಿಕ್ಷಕರಿದ್ದರು.

ಮಹಾಯದ್ಧದ ಭೀತಿ..!
1933 ರಲ್ಲಿ ವಿದ್ಯಾ ಇಲಾಖೆಯಿಂದ ನಾಲ್ಕನೆ ತರಗತಿಗೆ ಅನುಮತಿ ದೊರೆಯಿತು. ಅದೇ
ಸಂದರ್ಭದಲ್ಲಿ ದ್ವಿತೀಯ ಮಹಾಯುದ್ಧದ ಭೀತಿ, ಇನ್ನೊಂದೆಡೆ ಸ್ವಾತಂತ್ರ್ಯ ಸಂಗ್ರಾಮದ ಆಂದೋಲನ. ಹೀಗಾಗಿ ಜನರ ಆರ್ಥಿಕ ಪರಿಸ್ಥಿತಿಯು ಹಳಿ ತಪ್ಪಿತ್ತು. ಹೆಚ್ಚಿನವನರು ಮಕ್ಕಳನ್ನು ಶಾಲೆಗೆ ಕಳಿಸದೆ ಬೇಸಾಯದ ಉಪ ಕೆಲಸಗಳಿಗೆ ಉಳಿಸಿಕೊಂಡರು. ಶಾಲೆಯಲ್ಲಿ
ಮಕ್ಕಳ ಸಂಖ್ಯೆ ಇಳಿಮುಖವಾಯಿತು. 1938 ರಲ್ಲಿ ಕೇವಲ 6 ಮಕ್ಕಳ ಹಾಜರಾತಿಯಷ್ಟೇ ಇತ್ತು. 3 ಮತ್ತು 4 ನೇ ತರಗತಿಯಲ್ಲಿ ಮಕ್ಕಳೇ ಇರದ ಸ್ಥಿತಿ ಇತ್ತು.

ಪುನರ್ ನಿರ್ಮಾಣ
ಪರಿಸ್ಥಿತಿ ಬದಲಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಗೊಂಡಿತು. ಐದನೇ
ತರಗತಿ ಪ್ರಾರಂಭಕ್ಕೆ ಅನುಮತಿ ಸಿಕ್ಕಿತು. 1955 ರಲ್ಲಿ ಶಾಲೆಯ ಪ್ರಗತಿಗೆ ಮಹತ್ವದ ವರ್ಷ ಎಂದೇ ಭಾವಿಸಬಹುದು. 1957 ರಲ್ಲಿ ಕಡಬ ಬ್ಲಾಕ್ ವತಿಯಿಂದ ಶಾಲೆಗೆ ಬಾವಿ
ನಿರ್ಮಿಸಿದ್ದು ಆ ಬಾವಿ ಈಗಲೂ ಇದೆ. ಕಟ್ಟಡ ಪುನರ್ ನಿರ್ಮಾಣ, ಪಕ್ಕಾಸು, ಹೆಂಚು
ಹೊದಿಸಿ, ನೆಲಕ್ಕೆ ಸಾರಣೆ ಮಾಡಿ ಶಾಲೆಯನ್ನು ನವೀಕರಣ ಗೊಳಿಸಲಾಯಿತು.ಅಂದು ಶಾಲೆಯ ವಾರ್ಷಿಕೋತ್ಸವ ನಡೆಸಿ ಶಾಲಾ ಅಭಿವೃದ್ಧಿಯಲ್ಲಿ ಊರವರನ್ನು ಪಾಲ್ಗೊಳ್ಳುವಂತೆ ಮಾಡುವಲ್ಲಿ ಮಹಾಬಲ ರೈ ಅವರ ಶ್ರಮ ಉಲ್ಲೇಖನೀಯ. ಇದೇ ಅವಧಿಯಲ್ಲಿ ಶಾಲೆಗೆ ಹೋತೋಟ ನಿರ್ಮಾಣವಾಯಿತು.

1965-66 ರಲ್ಲಿ ಆರನೇ ತರಗತಿ ಮತ್ತು 1966-67 ರಲ್ಲಿ ಏಳನೇ ತರಗತಿ ಪ್ರಾರಂಭಗೊಂಡಿತು. ಆರನೇ ತರಗತಿ ಪ್ರಾರಂಭಕ್ಕಾಗಿ ಸಹ ಶಿಕ್ಷಕ ಮಹಾಲಿಂಗ ಭಟ್ ಅವರು ಕಾನಾವು ನರಸಿಂಹ ಭಟ್ ಅವರಿಂದ ಆರ್ಥಿಕ ಸಹಕಾರ ಪಡೆದು ಮೈಸೂರಿಗೆ ತೆರಳಿ ಅನುಮತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಆ ಸಮಯದಲ್ಲಿ ಶಾಲಾ ಪ್ರವೇಶದ ಅವಧಿ ಮುಕ್ತಾಯವಾಗಿದ್ದ ಕಾರಣ ಶಿಕ್ಷಕರು ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತಂದು ಶಾಲೆ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

1965-66 ರಲ್ಲಿ ಶಾಲೆಯ ಹೆಸರೂ ಬದಲಾಗಿ ಪಂಚಾಯತ್ ಬೋರ್ಡ್ ಹೈಯರ್ ಎಲಿಮೆಂಟರಿಶಾಲೆಯಾಗಿ ಪರಿವರ್ತನೆಗೊಂಡಿತ್ತು. 1969ರಲ್ಲಿ ಮತ್ತೆ ಹೆಸರು ಬದಲಾವಣೆಗೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರುವಾಜೆ ಎಂದಾಯಿತು. ಶಾಲೆಯ ಆಡಳಿತವನ್ನು ಜಿ.ಪಂ.ಗೆ ಹಸ್ತಾಂತರಿಸಿದ ಅನಂತರ 2000 ರಲ್ಲಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ
ಮುಕ್ಕೂರು-ಪೆರುವಾಜೆ ಎಂದು ಶಿಕ್ಷಣ ಇಲಾಖೆ ನಾಮಾಂಕಿತಗೊಳಿಸಿತು.

( ಮುಂದಿನ ಸಂಚಿಕೆಯಲ್ಲಿ – ಎರಡನೆ ಭಾಗ)

Leave A Reply

Your email address will not be published.