ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿ :ಎ.ಸಿ.ಜಯರಾಜ್

ಕಡಬ: ಸರಕಾರವು ಜಾರಿಗೊಳಿಸಲು ಮುಂದಾಗಿರುವ ಮತಾಂತರ ನಿಷೇಧ ಕಾಯ್ದೆ ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಸಂವಿಧಾನ ವಿರೋಧ ಕಾಯ್ದೆಯನ್ನು ಜಾರಿಗೊಳಿಸುವ ವಿಚಾರವನ್ನು ರಾಜ್ಯದ ಮುಖ್ಯಮಂತ್ರಿಗಳು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್‌ನ ಅಧ್ಯಕ್ಷ ಎ.ಸಿ.ಜಯರಾಜ್ ಆಗ್ರಹಿಸಿದ್ದಾರೆ.

ಅವರು ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಬಲವಂತದ ಮತಾಂತರ ಮಾಡುವುದನ್ನು ನಾವು ಕೂಡ ವಿರೋಧಿಸುತ್ತೇವೆ. ಬಲವಂತದ ಮತಾಂತರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಸಂವಿಧಾನದಲ್ಲಿ ಹಲವು ರೀತಿಯ ಕಾನೂನುಗಳಿವೆ. ಆದುದರಿಂದ ಏಕಾಏಕಿ ಮತಾಂತರ ನಿಷೇಧ ಕಾಯ್ದೆ ಹೇರಲು ಮುಂದಾಗಿರುವುದು ಸರಿಯಲ್ಲ. ಕ್ರೈಸ್ತ ಸಮುದಾಯವು ಶಾಲೆ, ಆಸ್ಪತ್ರೆ, ಅನಾಥಾಶ್ರಮ, ವೃದ್ಧಾಶ್ರಮಗಳನ್ನು ನಡೆಸುವ ಮೂಲಕ ದೇಶದ ಆರೋಗ್ಯ, ಶಿಕ್ಷಣ, ಸೇವೆ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಎಲ್ಲಾ ಧರ್ಮದ ಜನರು ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಶಾಂತಿಪ್ರಿಯರಾದ ಕ್ರೈಸ್ತರು ಎಂದಿಗೂ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡಿದ ಉದಾಹರಣೆಗಳಿಲ್ಲ. ಮತಾಂತರದ ವಿಚಾರವನ್ನು ಮುಂದಿಟ್ಟುಕೊಂಡು ಕಳೆದ ಹಲವು ಸಮಯದಿಂದ ದೇಶದೆಲ್ಲೆಡೆ ಕ್ರೈಸ್ತ ಧರ್ಮದ ಚರ್ಚುಗಳು, ಧರ್ಮಗುರುಗಳು ಹಾಗೂ ಸಮಾಜಸೇವಾ ಕಾರ್ಯಕರ್ತರ ಮೇಲೆ ನಿರಂತರವಾಗಿ ದಾಳಿಗಳು ನಡೆಸಿ ಸುಳ್ಳು ಕೇಸುಗಳನ್ನು ದಾಖಲಿಸಿ ಕ್ರೈಸ್ತ ಧಾರ್ಮಿಕ ಮುಖಂಡರನ್ನು ಬಂಧಿಸುತ್ತಿರುವುದು ಖಂಡನೀಯ. ನಮ್ಮ ದೇಶವನ್ನು ಬ್ರಿಟಿಷರು 200 ವರ್ಷಗಳ ಕಾಲ ಆಳಿದರು. ಸ್ವಾತಂತ್ರ‍್ಯ ದೊರೆತ ಸಮಯದಲ್ಲಿ ದೇಶದಲ್ಲಿ ಶೇ. 3ಕ್ರೈಸ್ತರಿದ್ದರು. ಸ್ವಾತಂತ್ರ‍್ಯ ದೊರೆತು 25 ವರ್ಷ ಕಳೆದರೂ ಕ್ರೈಸ್ತರ ಸಂಖ್ಯೆ ಕೇವಲ ಶೇ. 3 ರಲ್ಲಿಯೇ ಇದೆ. ಒಂದು ವೇಳೆ ಬಲವಂತದ ಮತಾಂತರಗಳು ನಡೆದಿದ್ದರೆ ಇಂದು ದೇಶದಲ್ಲಿ ಕ್ರೈಸ್ತರ ಜನಸಂಖ್ಯೆ ಶೇ. 25ಕ್ಕಿಂತಲೂ ಹೆಚ್ಚಿರಬೇಕಿತ್ತು. ನಮ್ಮ ದೇಶದಲ್ಲಿ ಯಾವುದೇ ಧರ್ಮವನ್ನು ಸ್ವೀಕರಿಸಲು ಮತ್ತು ಅನುಸರಿಲು ಸಂವಿಧಾನವು ಅವಕಾಶ ನೀಡಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸದರೆ ಜನರ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ. ಆದುದರಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಪ್ರಯತ್ನವನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್‌ನ ಪ್ರಮುಖರಾದ ಪಿ.ಪಿ.ವರ್ಗೀಸ್, ಸೈಮನ್ ಸಿ.ಜೆ., ಕ್ಸೇವಿಯರ್ ಬೇಬಿ, ಎ.ಸಿ.ಮ್ಯಾಥ್ಯೂ, ಜಾರ್ಜ್ ಕುಟ್ಟಿ ಉಪದೇಶಿ ಉಪಸ್ಥಿತರಿದ್ದರು.

Leave A Reply

Your email address will not be published.