ಕಾರ್ಕಳ : ಕ್ರಷರ್ ಮಾಲಿಕರಿಗೆ ಹಣದ ಬೇಡಿಕೆ |ಬೈಂದೂರು ರವಿ ಶೆಟ್ಟಿ ಸಹಿತ ಮೂರು ಮಂದಿಯ ವಿರುದ್ಧ ದೂರು
ಕಾರ್ಕಳ: ಹಣಕ್ಕೆ ಬೇಡಿಕೆಯಿಟ್ಟು ಬೆದರಿಸಿದ ಮೂವರ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ಮಣ್ ದುರ್ಗ ಕ್ರಷರ್ ಮಾಲಿಕ ನಿತ್ಯಾನಂದ ಶೆಟ್ಟಿ ದೂರುದಾರರು. ಬೈಂದೂರು ರವಿ ಶೆಟ್ಟಿ ಮತ್ತಿಬ್ಬರ ವಿರುದ್ದ ದೂರು ನೀಡಿದ್ದಾರೆ.
ಬೈಂದೂರು ನಿವಾಸಿ ರವಿ ಶೆಟ್ಟಿ ಎಂಬವರು ಕಳೆದ ಅ.10 ರಂದು ನಿತ್ಯಾನಂದ ಶೆಟ್ಟಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತಾನಾಡಲು ಇದೆ ಎಂದಿದ್ದರು. ಬಳಿಕ ಅ.26ರಂದು ಇನೋವಾ ಕಾರಿನಿಂದ ಆಗಮಿಸಿದ ರವಿ ಶೆಟ್ಟಿ ಎಂಬಾತ, ಬೆಳ್ಮಣ್ ಪೆಟ್ರೋಲ್ ಪಂಪ್ ಬಳಿ ನಿತ್ಯಾನಂದ ಶೆಟ್ಟಿ ಜತೆ ಮಾತನಾಡಿ, ನಿಮ್ಮ ಹಾಗೂ ನಿಮ್ಮ ಕ್ರಷರ್‌ನ ಬದಿಯಲ್ಲಿ ಕಾರ್ಯಾಚರಿಸುತ್ತಿರುವ ಲ್ಯಾನ್ಸಿ ಡಿಕೋಸ್ತಾ ಅವರಿಗೆ ಸೇರಿದ ಕ್ರಷರ್‌ನಿಂದ ಒಟ್ಟು ನನಗೆ ಮಾಸಿಕ 10 ಲಕ್ಷ ರೂ. ನೀಡಬೇಕು. ನಾನು ಕಾರ್ಮಿಕ ಪರಿಷತ್‌ನ ರಾಜ್ಯಾಧ್ಯಕ್ಷನಾಗಿದ್ದು, ನನ್ನ ಉಡುಪಿ ಕಛೇರಿಯ ಇಬ್ಬರು ಸಿಬ್ಬಂದಿಗಳಿಗೂ ಮಾಸಿಕ ತಲಾ 15 ಸಾವಿರ ರೂ. ನಂತೆ ವೇತನವನ್ನು ನೀಡಬೇಕು ಎಂದು ಸೂಚಿಸಿದ್ದ ಎನ್ನಲಾಗಿದೆ..
ಅದಕ್ಕೆ ನಿತ್ಯಾನಂದ ಶೆಟ್ಟಿ ನಿರಾಕರಿಸಿದರು. ಶನಿವಾರ ಕ್ರಷರ್ ಸ್ಥಳಕ್ಕೆ ಆಗಮಿಸಿದ ರವಿ ಶೆಟ್ಟಿ ಹಾಗೂ ಇನ್ನಿಬ್ಬರು ಯಾವುದೇ ಅನುಮತಿಯಿಲ್ಲದೆ ಕ್ರಷರ್‌ನ ಭಾವಚಿತ್ರವನ್ನು ಕ್ಲಿಕ್ಕಿಸಿದ್ದಾರೆ. ಜತೆಗೆ ಕೆಲಸಕ್ಕೂ ಅಡ್ಡಿಪಡಿಸಿದ್ದಾರೆ. ಸ್ಥಳಕ್ಕೆ ತೆರಳಿದ ಸಂದರ್ಭ ೫ ಲಕ್ಷ ರೂ. ನೀಡಿ. ಇಲ್ಲವೇ ಈ ಭಾವಚಿತ್ರವನ್ನು ಎಲ್ಲಿಗೆ ಸಲ್ಲಿಸಬೇಕೋ ಅಲ್ಲಿಗೆ ಸಲ್ಲಿಸುವುದಾಗಿ ಬೆದರಿಸಿದ್ದಾರೆ. ಪಟ್ಟಾ ಜಾಗದಲ್ಲಿರುವ ಕ್ರಷರ್‌ಗೆ ಅಕ್ರಮ ಪ್ರವೇಶ ಮಾಡಿ, ಬೆದರಿಕೆ ಹಾಕಿರುವ ಬಗ್ಗೆ ನಿತ್ಯಾನಂದ ಶೆಟ್ಟಿ ದೂರು ನೀಡಿದ್ದಾರೆ.