ಕಲಾವಿದ ರವಿ ರಾಮಕುಂಜ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಕಡಬ : ನಾಟಕ ರಚನೆಕಾರ, ಸಂಗೀತ ನಿರ್ದೇಶಕ ಹಾಗೂ ರಂಗ ನಿರ್ದೇಶಕರಾಗಿ ಬೆಳೆದ ಅಪ್ಪಟ ಗ್ರಾಮೀಣ ಪ್ರತಿಭೆ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ರವಿ ರಾಮಕುಂಜ ಅವರಿಗೆ ಈ ಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
ರಾಮಕುಂಜ ಗ್ರಾಮದ ರವಿ ಅವರು ಬಡತನದಲ್ಲಿ ಹುಟ್ಟಿ, ಪಿಯುಸಿ ತನಕ ಶಿಕ್ಷಣ ಪಡೆದರು. ಬಳಿಕ ಅವರಿಗೆ ಬದುಕಿನ ದಾರಿ ತೋರಿಸಿದ್ದು ನಾಟಕ ಕಲೆ. ಐದನೇ ತರಗತಿ ಓದುತ್ತಿರುವಾಗಲೇ ಶಿಕ್ಷಕ ಸೀತಾರಾಮ ಗೌಡ ಅವರ ಮಾರ್ಗದರ್ಶನದಲ್ಲಿ ನಾಟಕದಲ್ಲಿ ಪಾತ್ರ ಮಾಡಿದ ರವಿ, 2007ರಲ್ಲಿ ಪಿ.ಬಿ. ರೈ ನೇತೃತ್ವದ ಮಂಗಳೂರು ನಂದಿಕೇಶ್ವರ ನಾಟಕ ತಂಡದ ಒಬ್ಬ ಕಲಾವಿದ ಕೊನೆಯ ಕ್ಷಣದಲ್ಲಿ ಪ್ರದರ್ಶನಕ್ಕೆ ಗೈರಾದ ಕಾರಣ ಅವಕಾಶ ಪಡೆದರು. ಅದೇ ಅವರ ಬದುಕಿಗೆ ತಿರುವು ನೀಡಿತು.
‘ಮುದುಕನ ಮದುವೆ’ ‘ಕಿವುಡನ ಕಿತಾಪತಿ’ ‘ಬಸ್ ಕಂಡಕ್ಟರ್’ ನಾಟಕಗಳಲ್ಲಿ ರವಿ ಅವರ ಅಭಿನಯ ಹೆಸರು ಮಾಡಿದೆ. ತುಳು ನಾಟಕಗಳಲ್ಲಿ ಬೇಡಿಕೆಯ ಕಾಮಿಡಿ ಕಲಾವಿದರಾಗಿ ಬೆಳೆದಿದ್ದಾರೆ. ‘ಬೆಚ್ಚ ನೆತ್ತರ್’ ಅವರು ಅಭಿನಯಿಸಿದ ಪ್ರಥಮ ತುಳು ನಾಟಕ. ಆನಂತರ ಶಿವಾನಂದ ಶೆಟ್ಟಿ ಮಂಗಲ್ಪಾಡಿ ನೇತೃತ್ವದ ಅಮ್ಮ ಕಲಾವಿದೆರ್ ಮಂಗಳೂರು ತಂಡದಲ್ಲಿ ಸೇರಿಕೊಂಡರು. ‘ನಮ್ಮ ಅಮ್ಮ “ಚಿಕ್ಕಮ್ಮ’, ‘ಮದಿಮೆದ ದುಂಬುನಾನಿ’,ದಾದಂದ್ ಪನೊಡು ನಾಟಕಗಳಲ್ಲಿ ಅಭಿನಯಿಸಿದರು. ಕೃಷ್ಣ ಜಿ. ಮಂಜೇಶ್ವರ ನೇತೃತ್ವದ ಐಸಿರಿ ನಾಟಕ ಕಲಾವಿದರು ತಂಡದಲ್ಲಿ ‘ಕೈ ಪತ್ತಿನಾರ್’, ‘ಜನನೇ ಬೇತೆ’ ಹಾಗೂ ‘ಅಂಚಗೆ ಇಂಚಗೆ’ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಮ್ಮ ಟಿವಿ ಕುಡ್ಲ ಚಾನೆಲ್‌ನ ಕಾಮಿಡಿ ಶೋಗಳಾದ ‘ಬಲೆ ತೆಲಿಪಾಲೆ’ ವಿ4 ಚಾನೆಲ್‌ನ ‘ಕಾಮಿಡಿ ಪ್ರೀಮಿಯರ್ ಲೀಗ್’ನಲ್ಲಿ ಕುಸಾಲ್ ತಂಡದ ಸದಸ್ಯರಾಗಿ ಅಭಿನಯಿಸಿದ್ದಾರೆ. ಮಂತ್ರವಾದಿಯ ಪಾತ್ರ ಬಹು ಜನಪ್ರಿಯ.
ಮುಂಬಯಿ ಹಾಗೂ ಮಹಾರಾಷ್ಟ್ರದ ಇತರ ಕಡೆಗಳಲ್ಲಿಯೂ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಕಾಮಿಡಿ ಶೋಗಳನ್ನು ವೀಕ್ಷಿಸುತ್ತಿದ್ದ ಪಿಲಿಬೈಲ್ ಯಮುನಕ್ಕ ಖ್ಯಾತಿಯ ಸೂರಜ್ ರೈ ಅವರು ರವಿ ಅವರನ್ನು ಗುರುತಿಸಿ ‘ಅಮ್ಮರ್ ಪೊಲೀಸಾ’ ತುಳು ಚಲನಚಿತ್ರದಲ್ಲಿ ಅವಕಾಶ ನೀಡಿದರು. ಸಂದೇತ್ ಶೆಟ್ಟಿ ಅಜ್ರಿಯವರ ಮೂಲಕ ‘ಕತ್ತಲಕೋಣೆ’ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿರುವ ‘ವಿಐಪಿ ಲಾಸ್ಟ್ ಬೆಂಚ್’ ಕನ್ನಡ ಸಿನೆಮಾದಲ್ಲಿ ಹಾಸ್ಯ ಕಲಾವಿದರಾಗಿ ನಟಿಸುತ್ತಿದ್ದಾರೆ. ‘ರಡ್ಡ್ ಎಕ್ರೆ’ ಹಾಗೂ ಹೆಸರಿಡದ ಮತ್ತೂಂದು ತುಳು ಸಿನೆಮಾದಲ್ಲೂ ಅವಕಾಶ ಪಡೆದಿದ್ದಾರೆ.
ರವಿ ರಾಮಕುಂಜ ಅವರಿಗೆ ಅಭಿನಂದನೆಗಳು