ಚಮ್ಮಾರ ವೃತ್ತಿಯ ಕೈ ಲೇಖನಿ ಹಿಡಿದಾಗ !! ಹಲವಾರು ನಾಟಕ ರಚಿಸಿ ಪ್ರಚಾರ ಬಯಸದ ಬೆಳ್ತಂಗಡಿ ತಾಲೂಕಿನ ತೆರೆಮರೆಯಲ್ಲಿರುವ ಉತ್ತಮ ಪ್ರತಿಭೆಯ ಅನಾವರಣ

ಅಕ್ಷರ ಸಾಹಿತ್ಯ ಅದೆಷ್ಟೋ ನೊಂದ ಬಾಳಿಗೆ ಬೆಳಕಾದ, ಬದುಕಿಗೆ ದಾರಿ ಮಾಡಿಕೊಟ್ಟ ದೇವರೆಂದರೆ ತಪ್ಪಾಗದು. ಏನೂ ಅರಿಯದ ವ್ಯಕ್ತಿ ಕೂಡಾ ತನಗಿಷ್ಟ ಬಂದ ಹಾಗೇ ಬರೆದು ಅದಕ್ಕೊಂದು ಅರ್ಥ ತಂದುಕೊಡುವುದರಲ್ಲಿ ಆತನ ಪ್ರತಿಭೆ ಬೆಳಕಿಗೆ ಬರುತ್ತದಾದರೂ ಆತನಿಗೆ ಅದು ಬದುಕನ್ನೂ ರೂಪಿಸಲು ಸಹಾಯಮಾಡುತ್ತದೆ.ಅಂತೆಯೇ ಇಲ್ಲೊಬ್ಬ ವ್ಯಕ್ತಿ ತನ್ನ ಸಾಹಿತ್ಯದಿಂದಲೇ ಹೆಸರುವಾಸಿಯಾಗಿದ್ದಾರೆ. ನಿಜ ಜೀವನದಲ್ಲಿ ಅದೆಷ್ಟೋ ಕವನ, ಲೇಖನ, ನಾಟಕ ಗಳನ್ನು ಕಂಡಿರುತ್ತೇವೆ.ಇದೆಲ್ಲದರ ಹಿಂದೆ ಅದೊಂದು ಅದ್ಭುತ ಪ್ರತಿಭೆ ಅಡಗಿರುತ್ತದೆ ಎಂಬುವುದು ಅರಿವಾಗುವುದೇ ಇಂತಹ ಕಲೆಗಾರರ ಪರಿಚಯ ಆಗುವಾಗ ಮಾತ್ರ.ಸುಮಾರು ನಾಟಕ, ಸಾಹಿತ್ಯ ಗೀತಾ ರಚನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ವೃತ್ತಿಯ ಜೊತೆಗೆ ಸಾಹಿತ್ಯಕ್ಕೂ ಸಮಯ ಮೀಸಲಿರಿಸಿದ ಮಹಾನ್ ಸಾಧಕ ನಮ್ಮ ಜಿಲ್ಲೆಯಲ್ಲಿ ತೆರೆಮರೆಯಲ್ಲಿದ್ದಾರೆ ಎಂಬುವುದೇ ಬೇಸರದ ವಿಚಾರ ವಾಸ್ತವದ ಸಂಗತಿ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಾಸುದೇವ ಲಾಯಿಲ ಅವರೇ ಈ ಸಾಧಕ. ಎಲೆಮರೆಕಾಯಿಯಂತೆ ಎಂದಿಗೂ ಪ್ರಚಾರ ಬಯಸದೇ ಚಮ್ಮಾರ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಇವರು ತನ್ನ ಬರಹದ ಪ್ರತಿಭೆಯನ್ನು ಇಂದಿಗೂ ಹಸಿರಾಗಿಸಿದ್ದಾರೆ. ಇವರ ಕೈಬರಹ ಸಾಹಿತ್ಯದಲ್ಲಿ ಮುಂದಿದ್ದು,ಹಲವಾರು ನಾಟಕಗಳನ್ನು ರಚಿಸಿದ್ದರೂ ಇಂದಿಗೂ ಅವು ಪ್ರಕಟಣೆಯ ಭಾಗ್ಯ ಕಾಣಲಿಲ್ಲ ಎಂಬುವುದೇ ವಿಪರ್ಯಾಸ, ಅವರ ಬದುಕಿನ ಬರಹದ ಕಟು ಸತ್ಯ.

ಮೂಲತಃ ಉಡುಪಿಯ ಕುತ್ತಾರಿನವರಾದ ವಾಸುದೇವ ಶೀನಪ್ಪ ಸಮಾಗಾರ ಹಾಗೂ ಭವಾನಿ ದಂಪತಿಯ ಪುತ್ರ. ಬಾಲ್ಯದಲ್ಲೇ ಬರಹದ ಕಡೆಗೆ ತನ್ನನ್ನು ಆಕರ್ಷತರನ್ನಾಗಿಸಿ ಕಾರಣಾಂತರಗಳಿಂದ 7ನೇ ತರಗತಿಗೆ ತನ್ನ ಶಿಕ್ಷಣದ ಪಯಣಕ್ಕೆ ಪೂರ್ಣವಿರಾಮ ನೀಡಿದರು.ಆದರೂ ಕಲೆ ಇವರನ್ನು ಬಿಟ್ಟುಹೋಗಲು ಮನಸ್ಸು ಮಾಡಲಿಲ್ಲ, ಇದರಿಂದಾಗಿ ಸಾಹಿತ್ಯ,ನಾಟಕ ರಚನೆಯಲ್ಲಿ ತೊಡಗಿಸಿಕೊಂಡರಾದರೂ ಅದಾಗಲೇ ಅವರು ವೈವಾಹಿಕ ಜೀವನದತ್ತ ದಾಪುಗಾಲಿಟ್ಟರು.

ಹಳ್ಳಿದ ಪೊಣ್ಣಗ್ ಪೇಟೆದ ಕಂಡನಿ ಇದು ಇವರ ಮೊದಲ ನಾಟಕವಾಗಿದ್ದು ನಾಯಕನಟನಾಗಿ ತೆರೆಯಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ತ್ರಿಶೂಲ ತಿರ್ಗ್ಂಡ್, ನ್ಯಾಯದ ನೆತ್ತೆರ್,ಕಳಂಕ ಕನತಿನ ಕಣ್ಣೀರ್ ಹಾಗೂ ಸೂರ್ಯೋದಯ ಇವರ ಇತರ ನಾಟಕಗಳಾಗಿವೆ. ಮೂರುಕಾವೇರಿ ಎಂಬಲ್ಲಿ ಕಲಾಮಾಯೆ ಎಂಬ ನಾಟಕ ತಂಡವನ್ನು ರಚಿಸಿದ್ದು ಮೂರು ವರ್ಷಗಳ ಕಾಲ ತಂಡದಲ್ಲಿದ್ದರು. ಅದಾದ ಬಳಿಕ ಪುನರೂರಿನಲ್ಲಿ ಗಣೇಶ್ ಕಲಾವೃಂದವನ್ನು ಸ್ಥಾಪಿಸಿ ಅದರಲ್ಲಿ ಕೆಲಕಾಲ ಬಣ್ಣಹಚ್ಚಿದ್ದರು.

ಸುಮಾರು 25 ವರ್ಷಗಳಿಂದ ಲಾಯಿಲದಲ್ಲಿ ನೆಲೆಸಿರುವ ಇವರು ತಮ್ಮ ಬದುಕಿನ ಬಂಡಿಯ ಸಾಗಿಸಲು ಬೆಳ್ತಂಗಡಿ ಸಂತೆಕಟ್ಟೆಯ ಬಳಿಯ ಬಿಇಓ ಆಫೀಸ್ ಎದುರು ಪುಟ್ಟದೊಂದು ಪೆಟ್ಟಿಗೆಯಂಗಡಿ ತೆರೆದು ಅದರಲ್ಲಿ ಚಮ್ಮಾರಿಕೆಯ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ತಾಲೂಕಿನಲ್ಲಿ ಹೆಸರುವಾಸಿಯಾಗಿರುವ ಇವರು ಹಲವಾರು ಸಂಘ ಸಂಸ್ಥೆಗಳ, ಶಾಲಾ ಕಾಲೇಜುಗಳ ಒತ್ತಾಯದ ಮೇರೆಗೆ ಇಂದಿಗೂ ಹಲವಾರು ನಾಟಕಗಳನ್ನು ರಚಿಸಿ ನಿರ್ದೇಶನವನ್ನೂ ನೀಡುತ್ತಿರುವುದು ವಿಶೇಷ.

ಅದೇನೇ ಇರಲಿ,ತನ್ನಲ್ಲಿರುವ ಪ್ರತಿಭೆಯನ್ನು ಹೊರತರಲು ಹಲವಾರು ಹೋರಾಟ ನಡೆಸಿದರಾದರೂ ಕಾರಣಾಂತರಗಳಿಂದ ಅದು ಸಾಧ್ಯವಾಗದೇ ಹೋಯಿತು.ಇವರ ಪ್ರತಿಭೆಯನ್ನು ತಾಲೂಕು ಮಾತ್ರವಲ್ಲದೇ ಜಿಲ್ಲೆಯ ಕೆಲವು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ.

ಶ್ರೀಯುತರಿಂದ ಇನ್ನಷ್ಟು ಸಾಹಿತ್ಯಗಳು ಬೆಳಕಿಗೆ ಬರಲಿ, ಕತ್ತಲೆಯಲ್ಲಿರುವ ಆ ಪ್ರತಿಭೆಗೆ ಪುರಸ್ಕಾರ-ಅವಕಾಶವೆಂಬ ಸೂರ್ಯನ ಕಿರಣ ಧಾರಾಕಾರವಾಗಿ ಹರಿದುಬರಲಿ, ಆ ಮೂಲಕ ಓರ್ವ ಚಮ್ಮಾರಿಕೆಯ ವೃತ್ತಿಯಲ್ಲಿರುವ ಕಲಾವಿದನಿಗೆ ಗೌರವ ಸಲ್ಲಲಿ ಎಂಬುವುದೇ ನಮ್ಮ ಆಶಯ.

?️ದೀಪಕ್ ಹೊಸ್ಮಠ

Leave A Reply

Your email address will not be published.