ತಳಮಟ್ಟದಲ್ಲಿ ಅಡಿಪಾಯ ಗಟ್ಟಿಯಾಗದಿದ್ದಲ್ಲಿ ಮೇಲಂತಸ್ತು ಗಟ್ಟಿಯಾಗಲು ಸಾಧ್ಯವೇ?

ತಳಮಟ್ಟದಲ್ಲಿ ಅಡಿಪಾಯ ಗಟ್ಟಿಯಾಗದಿದ್ದಲ್ಲಿ ಮೇಲಂತಸ್ತು ಗಟ್ಟಿಯಾಗಲು ಸಾಧ್ಯವೇ?…ಇದೊಂದು ಸಾಮಾನ್ಯ ಪ್ರಶ್ನೆ.ಈ ಪ್ರಶ್ನೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ,ಇದರಲ್ಲಿ ಕಿರಿಯ ಮತ್ತು ಹಿರಿಯ ಎರಡೂ ಸೇರಿಸಿ ಅನ್ವಯಗೊಳಿಸೋಣ.
ಇದರಲ್ಲಿ ಸಾಮಾನ್ಯ ಶಿಕ್ಷಣ ಸದ್ಯದ ಮಟ್ಟಿಗೆ ಪರ್ವಾಗಿಲ್ಲ ಎಂದರೂ ವಿಶೇಷ ಶಿಕ್ಷಣಗಳಾದ ಚಿತ್ರ ಕಲೆ, ಸಂಗೀತ ಮತ್ತು ದೈಹಿಕ ಶಿಕ್ಷಣ ಇವುಗಳ ನಿರ್ವಹಣೆ ತೀರಾ ಕೆಳಮಟ್ಟದಲ್ಲಿದೆ.

ಅದರಲ್ಲಿ ಚಿತ್ರ ಕಲೆ ಮತ್ತು ಸಂಗೀತ ಶಿಕ್ಷಣವನ್ನು ಶಾಲೆಯನ್ನು ಹೊರತಾಗಿಯೂ ಕಲಿಯಬಹುದು.ಆದರೂ ಕಷ್ಟವೆ.ಆದರೆ ದೈಹಿಕ ಶಿಕ್ಷಣವನ್ನು ಶಾಲೆಗಳಲ್ಲೇ ಕಲಿಯಬೇಕು.ಒಬ್ಬ ವಿದ್ಯಾರ್ಥಿ ಮಾನಸಿಕವಾಗಿ ಸಾಮಾಜಿಕವಾಗಿ ಮತ್ತು ದೈಹಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಅವನಿಗೆ ಒಂದನೇ ತರಗತಿಯಿಂದಲೇ ದೈಹಿಕ ಶಿಕ್ಷಕರ ಅಗತ್ಯವಿದೆ.ದೈಹಿಕ ಶಿಕ್ಷಣದ ತರಬೇತಿ ಹೊಂದಿದ ಶಿಕ್ಷಕರ ಮೂಲಕ ದೈಹಿಕ ಶಿಕ್ಷಣದ ಮಹತ್ವವನ್ನು ಎಳೆಯ ಪ್ರಾಯದಲ್ಲೇ ಕರಗತ ಮಾಡಿಕೊಂಡರೆ ಆ ವಿದ್ಯಾರ್ಥಿ ಹಂತ ಹಂತವಾಗಿ ದೈಹಿಕ ಸಾಮಾರ್ಥ್ಯ ವನ್ನು ಪಡೆಯಲು ಸಾಧ್ಯ.ದೈಹಿಕ ಶಿಕ್ಷಣದಲ್ಲಿ ಒಂದು ಮಾತಿದೆ,’sound mind in sound body’.ಇದನ್ನು ವಿವರಿಸುವ ಅಗತ್ಯ ಕಾಣುವುದಿಲ್ಲ.
ಆದರೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದರೂ ನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ.ಯಾವುದೇ ಸರಕಾರ ಬರಲಿ,ಪ್ರಾಥಮಿಕ ಶಿಕ್ಷಣ ಮಾತ್ರ 75% ಹಾಗೆಯೇ ಇದೆ ಎಂದರೂ ತಪ್ಪಾಗಲಾರದು.


Ad Widget

Ad Widget

Ad Widget

ಸರಕಾರಗಳು ಯಾವುದೇ ರೀತಿಯ ಹೊಸ ಪರಿಕಲ್ಪನೆಯನ್ನು ತರಬೇಕಾದರೂ ಒಂದು ತಜ್ಞರ ಸಮಿತಿಯನ್ನು ರಚಿಸುತ್ತದೆ.ಆ ಸಮಿತಿಯಲ್ಲಿರುವ ಸದಸ್ಯರು ಮಾತ್ರ ಆ ಹೊಸ ಪರಿಕಲ್ಪನೆಯ ‘ಕಲ್ಪನೆ’ ಇಲ್ಲದವರಾಗಿರುತ್ತಾರೆ ಅಥವಾ ಅವರ ಗುಣಮಟ್ಟ ಉನ್ನತವಾಗಿರುತ್ತದೆ.ಅದು ಸರಿಯಾದ ವರದಿಯನ್ನು ಕೊಡಬೇಕಾದರೆ ಅವರಿಗೆ ತಳಹಂತದ ಮಕ್ಕಳ ನಾಡಿಮಿಡಿತ ಗೊತ್ತಿರಬೇಕು.ಉದಾಹರಣೆಗೆ ದೈಹಿಕ ಶಿಕ್ಷಣಕ್ಕೆ ಸಂಬಂಧ ಪಟ್ಟ ಸಮಿತಿಯಾದರೆ ಅದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿರಬೇಕು.ಆಗ ಪಕ್ಕಾ ವರದಿ ಕೊಡಲು ಸಾಧ್ಯ.ಅದು ಬಿಟ್ಟು ಆ ಸಮಿತಿಯು ಓರ್ವ ಐ ಎ ಎಸ್ ಅಧಿಕಾರಿಯ ತಂಡವಾದರೆ ಅವರಿಗೆ ಖುಷಿ ಬಂದ ಹಾಗೆ ವರದಿ ತಯಾರಾಗುತ್ತದೆ ಮತ್ತು ಜಾರಿಯಾಗುತ್ತದೆ.

ಈಗಿನ ಶಿಕ್ಷಣ ಇಲಾಖೆಯ ಪ್ರಕಾರ ಒಂದು ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಾಗಬೇಕಾದರೆ ಕನಿಷ್ಠ 200 ಮಕ್ಕಳಿರಬೇಕು.ಇದು ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರ ಅನ್ವಯ. ಇದು ಎಷ್ಟೋಂದು ಅಸಮಂಜಸ ನಿಯಮವಲ್ಲವೆ?
ಆದರೆ ಪ್ರೌಢ ಶಾಲೆಯಲ್ಲಿ 45 ಮಕ್ಕಳಿದ್ದರೂ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಇರುತ್ತದೆ.ಅಲ್ಲಿ ಮೈದಾನದ ಅವಶ್ಯಕತೆಯೂ ಇಲ್ಲ.
ಪ್ರಾಥಮಿಕ ಶಿಕ್ಷಣದಲ್ಲಿ ದೈಹಿಕ ಶಿಕ್ಷಣದ ಮೂಲ ಕೌಶಲ್ಯಗಳನ್ನು ಕಲಿಯದ ಮಗು ಪ್ರೌಢಶಾಲೆಯಲ್ಲಿ ಒಮ್ಮೆಲೇ ಕಲಿಯಲು ಸಾಧ್ಯವೇ.
ನಮ್ಮ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಆಗಬೇಕಾದರೆ ಪ್ರತಿಯೊಂದು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಅತ್ಯಗತ್ಯ, ಮತ್ತು ಅದು ಒಂದು ಮಗುವಿನ ಮೂಲಭೂತ ಹಕ್ಕಾಗಬೇಕು.ಆಗ ನಾವು ಪ್ರಾಥಮಿಕ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷೆ ಮಾಡಬಹುದು.

ವಿವಿಧ ಪಂದ್ಯಾಟಗಳ ಮತ್ತು ಮೇಲಾಟಗಳ(sports)ಸ್ಪರ್ಧೆಗಳಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು.
ಒಂದು ಮಗು ನಿಲ್ಲುವ ರೀತಿಗೂ ಒಂದು ಕ್ರಮವಿದೆ.ಅದನ್ನು ಆದರ್ಶ ನಿಲುವು ಎನ್ನುತ್ತೇವೆ.ನಡೆಯುವುದಕ್ಕೂ ಒಂದು ಕ್ರಮವಿದೆ, ನೇರವಾಗಿ,ಕೈ ಬೀಸಿ,ಎಡಗಾಲನ್ನು ಮೊದಲಿಟ್ಟು ನಡೆಯಬೇಕು.ಕುಳಿತುಕೊಳ್ಳುವ ಭಂಗಿ.ಮಲಗುವ ರೀತಿ,ಉಸಿರಾಟದ ಕ್ರಮ.ಇದನ್ನೆಲ್ಲ ದೈಹಿಕ ಶಿಕ್ಷಣದಲ್ಲಿ ಯೋಗಾಭ್ಯಾಸ ದ ಮೂಲಕ ಕಲಿಯಲು ಸಾಧ್ಯ.ಇದನ್ನೆಲ್ಲ ಕಲಿಸಬೇಕಾದರೆ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕ ಬೇಕು.
ಪ್ರತಿಯೊಂದು ಪ್ರಾಥಮಿಕ ಶಾಲೆಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಾದಾಗ ನಮ್ಮ ರಾಜ್ಯ, ನಮ್ಮ ದೇಶ ಕ್ರೀಡಾ ಸ್ಪರ್ಧೆಗಳಲ್ಲಿ ಹೆಚ್ಚಿನ ಪದಕಗಳನ್ನು ನಿರೀಕ್ಷೆ ಮಾಡಲು ಸಾಧ್ಯ.

ನಮ್ಮ ದೇಶದ ರಾಷ್ಟ್ರ ಧ್ವಜದ ಬಗ್ಗೆ, ರಾಷ್ಟ್ರಗೀತೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಮಗುವಿನಲ್ಲಿ ದೇಶಾಭಿಮಾನ,ಭಾಷಾಭಿಮಾನ,ದೇಶದ ಕಾನೂನಿನ ಬಗ್ಗೆ ಅರಿವು,ದೇಶಕ್ಕಾಗಿ ಹುತಾತ್ಮರಾದ ನಾಯಕರ ಬಗ್ಗೆ ಗೌರವ ಬರಲು ಸಾಧ್ಯ.
ಹಾಗಾದರೆ ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಯಾಕೆ ಆಗುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.ಇದಕ್ಕೆ ಕಾರಣ ನಮ್ಮ ಸರಕಾರದಲ್ಲಿರುವ ನಾಯಕರುಗಳ ಇಚ್ಚಾಶಕ್ತಿಯ ಕೊರತೆ.ನಮ್ಮ ಸಮಾಜಕ್ಕೆ ದೈಹಿಕ ಶಿಕ್ಷಣದ ಬಗ್ಗೆ ಅರಿವು ಇಲ್ಲದಿರುವುದು ಮತ್ತು ಆಸಕ್ತಿ ಇಲ್ಲದಿರುವುದು.ಸಮಾಜ ಎಚ್ಚೆತ್ತುಕೊಂಡು ಹೋರಾಟ ಮಾಡಿದಾಗ ಇದೊಂದು ಸಮಸ್ಯೆಯೇ ಅಲ್ಲ.ಗ್ರಾಮ ಪಂಚಾಯತ್ ಪ್ರತಿನಿಧಿಗಳಿಂದ ಹಿಡಿದು ಸಂಸದರವರೆಗೆ ಎಲ್ಲರೂ ಒಕ್ಕೊರಲಿನಿಂದ ಕೂಗಿದಾಗ ಅಥವಾ ಹೋರಾಟ ಮಾಡಿದ್ದೇ ಆದಲ್ಲಿ ಒಂದು ದಿನದಲ್ಲಿ ಇದಕ್ಕೊಂದು ಕಾನೂನು ಜಾರಿ ಮಾಡಬಹುದು.
ರಾಜ್ಯದ ಪ್ರತೀ ಎಮ್ ಎಲ್ ಎ ಗಳು ವಿದಾನ ಸಭೆಯಲ್ಲಿ ಈ ವಿಷಯದ ಬಗ್ಗೆ ಆಳವಾದ ಚರ್ಚೆ ಮಾಡಿ ಪ್ರತೀ ಪ್ರಾಥಮಿಕ ಶಾಲೆಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಾಗಬೇಕೆಂದು ನಿರ್ಧಾರ ಮಾಡಿದರೆ,ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗುತ್ತಾ
ರೆ.ಮತ್ತು ಪ್ರತೀ ಮಗುವೂ ದೈಹಿಕ ಶಿಕ್ಷಣದ ಮಹತ್ವವನ್ನು ಕಲಿಯಬಹುದು.
ಅದು ಬಿಟ್ಟು ದಿನಕ್ಕೊಂದು ರೀತಿಯ ತರಬೇತಿಗಳನ್ನು ಕೊಟ್ಟುಕೊಂಡು,ದಿನಕ್ಕೊಂದಷ್ಟು ಮಾಹಿತಿಗಳನ್ನು ಕೇಳಿಕೊಂಡು ಹೋದದ್ದೇ ಆದರೆ ನಾವು ಪ್ರಾಥಮಿಕ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಕಾಣಲು ಸಾಧ್ಯವಿಲ್ಲ.
ಈಗಿನ ಕೇಂದ್ರ ಸರಕಾರದ ಕನಸಿನ ಕೂಸಾದ ‘NEP’ ಜಾರಿಯಾಗುವುದನ್ನು ಸಮಾಜ ಕಾತುರದಿಂದ ಎದುರು ನೋಡುತ್ತಿದೆ.ಅದು ಬಂದಾಗಲಾದರೂ ದೇಶದ ಎಲ್ಲಾ ಮಕ್ಕಳು ದೈಹಿಕ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲೆ ಪಡೆಯಲು ಸಾಧ್ಯವೇ ಎಂದು ಕಾದು ನೋಡಬೇಕು.ಕೊನೆಯದಾಗಿ ‘ದೈಹಿಕ ಶಿಕ್ಷಣ ‘ ಪ್ರತೀ ಮಗುವಿನ ಹಕ್ಕಾಗಲಿ ಎಂದು ಪ್ರತೀ ಪ್ರಜೆಯೂ ಒತ್ತಾಯಿಸುವಂತಾಗಲಿ ಮತ್ತು ಅದೊಂದು ಕಾನೂನಾಗಿ ಪರಿವರ್ತನೆಯಾಗಲಿ ಎಂದು ಆಶಿಸೋಣವೇ.


✍️ಬಾಲಕೃಷ್ಣ ಕೆ. ದೈಹಿಕ ಶಿಕ್ಷಣ ಶಿಕ್ಷಕರು,ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸವಣೂರು.

Leave a Reply

error: Content is protected !!
Scroll to Top
%d bloggers like this: